ಮಡಿಕೇರಿ, ಫೆ. 17: ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಇಂದು ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿ ಕಾಲೇಜಿನ ಗೇಟಿನ ಮುಂಭಾಗ ಪ್ರತಿಭಟನೆ ಮಾಡಿದರು. ಈ ವೇಳೆ ಕಾಲೇಜಿನ ಪ್ರಾಂಶುಪಾಲರಾದ ಜಗತ್ ತಿಮ್ಮಯ್ಯ ಅವರು ಹೈಕೋರ್ಟ್ ಆದೇಶ, ಸರಕಾರದ ಸೂಚನೆಯ ಬಗ್ಗೆ ವಿದ್ಯಾರ್ಥಿನಿಯರ ಗಮನ ಸೆಳೆದು ಮನವೊಲಿಸುವ ಪ್ರಯತ್ನ ಮಾಡಿದರೂ ಕೂಡ ವಿದ್ಯಾರ್ಥಿನಿಯರು ಒಪ್ಪಲಿಲ್ಲ. ಕೊನೆಗೆ ಪ್ರಾಂಶುಪಾಲರು ವಿದ್ಯಾರ್ಥಿನಿ ಯರ ಪೋಷಕರೊಂದಿಗೂ ಮಾತುಕತೆ ನಡೆಸಿದರೂ ಕೂಡ ಪೋಷಕರು ಒಪ್ಪದ ಕಾರಣ ವಿದ್ಯಾರ್ಥಿನಿಯರು ಕಾಲೇಜಿನಿಂದ ಹಿಂತಿರುಗಿದರು. ಸುಮಾರು ಇಪ್ಪತ್ತೈದಕ್ಕೂ ಅಧಿಕ ವಿದ್ಯಾರ್ಥಿನಿಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸುಂಟಿಕೊಪ್ಪ: ಹಿಜಾಬ್ ಧರಿಸಿ ತರಗತಿಯಲ್ಲಿ ಕುಳಿತು ಪಾಠಪ್ರವಚನಗಳನ್ನು ಕೇಳಲು ಅವಕಾಶ ನೀಡಬೇಕೆಂದು ಹಠ ಹಿಡಿದ 21 ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ಕಾಲೇಜಿನಿಂದ ಹೊರಕಳುಹಿಸಿದ ಘಟನೆ ನಡೆದಿದೆ.
ಗುರುವಾರದಂದು ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು ಕಾಲೇಜಿನ ಗೇಟಿನ ಮುಂಭಾಗ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಿದ ಸಂದರ್ಭ ಪೊಲೀಸರು ಆಗಮಿಸಿ ವಿದ್ಯಾರ್ಥಿಗಳಿಗೆ ತಿಳಿಹೇಳಿ ಮನೆಗೆ ಕಳುಹಿಸಿದರು.
ಈ ಕುರಿತು ಪ್ರಾಂಶುಪಾಲರ ಪ್ರತಿಕ್ರಿಯೆ ಬಯಸಿದ ಸಂದರ್ಭ ಹೈಕೋರ್ಟ್ ಮತ್ತು ಸರಕಾರದ ಆದೇಶವನ್ನು ನಾವು ಪಾಲಿಸಬೇಕಾಗಿದೆ ಎಂದರು.
ವಿದ್ಯಾರ್ಥಿನಿಯರು ಪ್ರತಿಭಟನೆ ಮಾಡುತ್ತಿದ್ದ ವೇಳೆ ಸುಂಟಿಕೊಪ್ಪ ಠಾಣಾಧಿಕಾರಿ ಮಂಜು ಅವರು ಈ ರೀತಿ ಪ್ರತಿಭಟನೆ ಮುಂದುವರೆಸಿದರೆ ಕಾನೂನು ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದರು.
ನಾಲ್ಕನೇ ದಿನವೂ ವಾಪಸ್
ಹಿಜಾಬ್ ಧರಿಸಿ ಶಾಲೆಗೆ ಬಂದ ವಿದ್ಯಾರ್ಥಿಗಳನ್ನು ನಾಲ್ಕನೇ ದಿನವೂ ವಾಪಸ್ ಕಳುಹಿಸಿದ ಘಟನೆ ನೆಲ್ಲಿಹುದಿಕೇರಿ ಕೆ.ಪಿ.ಎಸ್. ಶಾಲೆಯಲ್ಲಿ ನಡೆದಿದೆ. ನೆಲ್ಲಿಹುದಿಕೇರಿಯ ಕರ್ನಾಟಕ ಪಬ್ಲಿಕ್ ಶಾಲೆಯ 45 ವಿದ್ಯಾರ್ಥಿನಿಯರ ಪೈಕಿ 11 ಮಂದಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಗುರುವಾರ ಶಾಲೆಗೆ ಬಂದಿದ್ದರು. ಆದರೆ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಹಿಜಾಬ್ ಧರಿಸಿ ಶಾಲೆಯ ಒಳಗೆ ಪ್ರವೇಶಿಸಲು ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಶಾಲೆಯ ಆವರಣದಲ್ಲಿ ಕುಳಿತುಕೊಂಡರು.
ನೆಲ್ಲಿಹುದಿಕೇರಿಯ ಪದವಿಪೂರ್ವ ಕಾಲೇಜಿನಲ್ಲಿ ಒಟ್ಟು 50 ಮಂದಿ ಮುಸ್ಲಿಂ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದು, ಅವರ ಪೈಕಿ 28 ಮಂದಿ ಇಂದು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದರು. ಆದರೆ ಕೋರ್ಟ್ ಆದೇಶದಂತೆ ಹಿಜಾಬ್ ಧರಿಸಿ ಕಾಲೇಜಿನ ಒಳಗೆ ಪ್ರವೇಶಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಕಾಲೇಜಿನ ಆವರಣದಲ್ಲಿ ಕುಳಿತುಕೊಂಡು ಓದಿದರು. ಶಾಲೆಯ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.