ಮಡಿಕೇರಿ, ಫೆ. ೧೬: ಮಡಿಕೇರಿಯ ಇಂದಿರಾ ಕ್ಯಾಂಟೀನ್‌ನಲ್ಲಿನ ವಿದ್ಯುತ್ ಸಮಸ್ಯೆ ಸೇರಿದಂತೆ ಇತರ ಅವ್ಯವಸ್ಥೆಗಳನ್ನು ಸರಿಪಡಿಸಲು ಕ್ರಮ ವಹಿಸಲಾಗಿದೆ ಎಂದು ನಗರಸಭಾ ಪೌರಾಯುಕ್ತ ಎಸ್.ವಿ. ರಾಮ್‌ದಾಸ್ ಅವರು ತಿಳಿಸಿದ್ದಾರೆ. ಕ್ಯಾಂಟೀನ್‌ನಲ್ಲಿ ಹಲವು ತಿಂಗಳುಗಳಿAದ ವಿದ್ಯುತ್ ಹರಿಯದೆ ಆಹಾರದ ಸಮಸ್ಯೆ ಇದ್ದ ಬಗ್ಗೆ ತಾ. ೧೪ ರಂದು ‘ಶಕ್ತಿ’ ವರದಿ ಮಾಡಿದ್ದ ಬೆನ್ನಲ್ಲೇ ಸ್ಥಳಕ್ಕೆ ನಗರಸಭಾ ಅಧ್ಯಕ್ಷರು, ಪೌರಾಯುಕ್ತರು ಸೇರಿದಂತೆ ಅಭಿಯಂತರರು ತೆರಳಿ ವಿದ್ಯುತ್ ಸಮಸ್ಯೆ ಸೇರಿದಂತೆ ಇತರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ವಹಿಸಿದ್ದಾರೆ.

ಕ್ಯಾಂಟೀನ್ ನಿರ್ವಹಣೆಗೆ ಗುತ್ತಿಗೆ ಪಡೆದವರಿಗೆ ಒಂದು ವರ್ಷದಿಂದ ಬಿಲ್ ಪಾವತಿಯಾಗಿಲ್ಲ. ನಗರಸಭೆ ಯಿಂದ ಗುತ್ತಿಗೆದಾರರಿಗೆ ಕೇವಲ ನಿರಾಕ್ಷೇಪಣಾ ಪತ್ರ ನೀಡಲಾಗುತ್ತದೆ. ಬಿಲ್ ಪಾವತಿಸುವುದು ನಗರಾಭಿವೃದ್ಧಿ ಕೋಶದ ಜವಾಬ್ದಾರಿಯಾಗಿದ್ದು, ಪಾವತಿಯಾಗದೆ ಇರುವ ಕಾರಣ ಗುತ್ತಿಗೆದಾರರಿಗೆ ಕ್ಯಾಂಟೀನ್ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಆದರೂ, ಗುತ್ತಿಗೆದಾರರು ಒಂದು ಬಾರಿ ಟೆಂಡರ್ ಪಡೆದ ನಂತರ, ಅವರೇ ನಿರ್ವಹಣೆ ಮಾಡಬೇಕು. ಬಿಲ್ ಪಾವತಿಗೆ ಸ್ವಲ್ಪ ತಡವಾದರೆ, ಪಾವತಿಯಾಗುವವರೆಗೂ ಗುತ್ತಿಗೆದಾರರೇ ಅವರ ಸ್ವಂತ ಖರ್ಚಿನಿಂದ ಸರಿಹೊಂದಿಸಿ ಕೊಳ್ಳಬೇಕು. ಇಲ್ಲದಿದ್ದಲ್ಲಿ ಟೆಂಡರ್ ರದ್ದು ಪಡಿಸಲಾಗುವುದು ಎಂದು ರಾಮ್‌ದಾಸ್ ಅವರು ಮಾಹಿತಿ ನೀಡಿದ್ದಾರೆ.

ವಿದ್ಯುತ್ ಸಮಸ್ಯೆಯೊಂದಿಗೆ ಕುಡಿಯುವ ನೀರಿನ ಘಟಕ, ಶೌಚಾಲಯ, ಕೈ ತೊಳೆಯುವ ಸ್ಥಳವೂ ಅವ್ಯವಸ್ಥೆಯಿಂದ ಕೂಡಿದ್ದು, ಸರಿಪಡಿಸುವಂತೆ ನಗರಸಭಾ ಸದಸ್ಯ ಅರುಣ್ ಶೆಟ್ಟಿ ಒತ್ತಾಯಿಸಿದ್ದಾರೆ.