ವೀರಾಜಪೇಟೆ, ಫೆ. ೧೪: ಕೇರಳ ರಾಜ್ಯದ ಲಾಟರಿಯನ್ನು ನಗರದಲ್ಲಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ನೆಹರುನಗರದ ನಿವಾಸಿ ಎಂ. ಗಫೂರ್ (೬೫) ಬಂಧಿತ ವ್ಯಕ್ತಿ.
ವೀರಾಜಪೇಟೆ ನಗರದ ಪಂಜರ್‌ಪೇಟೆಯಲ್ಲಿ ವ್ಯಕ್ತಿಯೊಬ್ಬರಿಗೆ ಕೇರಳ ರಾಜ್ಯದ ಲಾಟರಿ ಮಾರಾಟ ಮಾಡುತ್ತಿರುವುದಾಗಿ ವೀರಾಜಪೇಟೆ ನಗರ ಪೊಲೀಸ್ ಠಾಣೆಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ನಗರದ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿ ಕೇರಳ ರಾಜ್ಯದ ೮ ವಿವಿಧ ಲಾಟರಿ ಚೀಟಿಗಳು ಮತ್ತು ೮೫೦ ರೂ. ನಗದನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ಈ ಹಿಂದೆ ಮೂರು ಬಾರಿ ಅಕ್ರಮ ಲಾಟರಿ ಮಾರಾಟ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಬಿಡುಗಡೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿತನ ಮೇಲೆ ಕರ್ನಾಟಕ ರಾಜ್ಯ ಲಾಟರಿ ನಿಷೇದ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿಡಲು ಆದೇಶಿಸಿದ್ದಾರೆ.
ವೀರಾಜಪೇಟೆ ಉಪವಿಭಾಗದ ಡಿವೈಎಸ್ಪಿ ಸಿ.ಟಿ. ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಬಿ.ಎಸ್. ಶ್ರೀಧರ್ ಅವರ ನಿರ್ದೇಶನದ ಮೇರೆಗೆ ನಡೆದ ಕಾರ್ಯಾಚರಣೆಯಲ್ಲಿ ವೀರಾಜಪೇಟೆ ನಗರ ಠಾಣಾಧಿಕಾರಿ ಜಗದೀಶ್ ಧೂಳ್ ಶೆಟ್ಟಿ ಮತ್ತು ಸಿಬ್ಬಂದಿಗಳಾದ ಗಿರೀಶ್, ಮುಸ್ತಾಫ, ದರ್ಶನ್, ಸುಬ್ರಮಣಿ ಮತ್ತು ಚಾಲಕರಾದ ರಮೇಶ್ ಭಾಗವಹಿಸಿದ್ದರು.
-ಕಿಶೋರ್ ಕುಮಾರ್ ಶೆಟ್ಟಿ