ತಲಕಾವೇರಿ ಕುಂಡಿಕೆಯಲ್ಲಿ ಸ್ವಲ್ಪವೇ ಕುಂಕುಮವನ್ನು ಹಾಕಬಹುದಷ್ಟೆ.

ಎತ್ತರದಲ್ಲಿ ಕಾವೇರಿಯಲ್ಲಿ ಬ್ರಹ್ಮಗಿರಿ. ಅಲ್ಲಿ ಸಪ್ತ ಋಷಿ ಮಂಡಲವೂ, ಹೋಮಕುಂಡಗಳೂ ಇವೆ. ಶ್ರೀ ಶಾಸ್ತಾರ ದೇವರಿಗೆ ಅಲ್ಲಿ ವರ್ಷಕ್ಕೊಮ್ಮೆ ಪೂಜೆ.

ಅಡೂರು, ತೊಡಿಕ್ಕಾನ, ಪೆರಾಜೆ, ಚೆಂಬು ಮತ್ತು ಸಮೀಪದ 4 ಗ್ರಾಮದ ದೇವಾಲಯಗಳಿಗೆ ಮತ್ತು ಮುಂಡ್ರೋಟು ಮತ್ತು ಇನ್ನೊಂದು ದೇವಾಲಯದ್ದೂ ಭಾಗಮಂಡಲಕ್ಕೆ ಸಂಬಂಧವಿದೆ.

ಆರೂಢೋದಯಾದಿ ರಾಶಿಗಳು, ದೈವಜ್ಞ ಲಕ್ಷಣ, ಸಮಯಾದಿಗಳು ದೇಶ, ಶ್ವಾಸ ಲಕ್ಷಣ, ದೂತ ಲಕ್ಷಣ, ಶಕುನಾದಿಗಳು ಪ್ರಶ್ನಾಕ್ಷರ, ಸೂತ್ರ ತ್ರಿಸ್ಫುಟಾದಿಗಳು, ಅಷ್ಟಮಂಗಲ ಸಂಖ್ಯೆ, ಆರೂಢಾದಿ ದ್ವಾದಶ ಭಾವಗಳು ಇತ್ಯಾದಿಗಳಿಂದ ವಿಮರ್ಶೆ ಮಾಡಿದಲ್ಲಿ ಸರ್ವೇಶ್ವರಕಾರಕನಾದ ಗುರು ಬಲಿಷ್ಠನಾಗಿ ಆರೂಢ ಉದಯ ರಾಶಿಗಳಿಂದಲೂ, ಸ್ಪøಷ್ಟಾಂಗ ರಾಶಿ ಚಂದ್ರಾಧಿಷ್ಠಿತ ರಾಶಿಗಳಿಂದಲೂ ಅನುಕೂಲ ಸ್ಥಾನದಲ್ಲಿರುವುದು, ಪಕ್ಷಬಲ ಪೂರ್ಣನಾದ ಚಂದ್ರನು ಆರೂಢ ಕೇಂದ್ರ ರಾಶಿಯಲ್ಲಿ ಕ್ರಿಯಾವಸ್ಥೆಗಳಲ್ಲಿ ಉತ್ತಮ ಫಲದವನಾಗಿರುವನು. ಈ ಲಕ್ಷಣಗಳಿಂದ ಸರ್ವೆಶ್ವರಾನುಗ್ರಹವಿದೆ ಯೆನ್ನುವುದು ಪ್ರಥಮದೃಷ್ಟ್ಯಾ ಸ್ಪಷ್ಟವಾಗುತ್ತದೆ. ಪುಣ್ಯತೀರ್ಥ ಸ್ವರೂಪವಾದ ಕರ್ಕಾಟಕ ರಾಶಿ ಆರೂಢವಾಗಿ ಸೂರ್ಯ-ಚಂದ್ರ-ಗ್ರಹರ ಕೇಂದ್ರ ಸ್ಥಿತಿಯಿಂದ ಪವಿತ್ರ ನದೀ ಸಂಗಮದಿಂದ ಅತ್ಯಂತ ಪಾವನವಾದ ಸ್ವರ್ಣಾರೂಢ ರಾಶಿ ಕವೇರಾತ್ಮಜಾಕಾರಕ ಗ್ರಹವಾದ ಸೂರ್ಯನ ಪರಮೋಚ್ಚ ಸ್ಥಿತಿಯಿಂದ ಅವರ್ಣನೀಯವಾದ ಸ್ಥಳ ಮಾಹಾತ್ಮ್ಯವನ್ನು ಸೂಚಿಸುವುದು, ತಪಸ್ಥಾನವಾದ ಒಂಭತ್ತನೆ ರಾಶಿ, ಮೋಕ್ಷ ಸ್ಥಾನವಾದ ಮೀನ ರಾಶಿಯಲ್ಲಿ ಶುಕ್ರನ ಉದಯ ಬುಧೋದಯ. ಮೀನದ ಬುಧನಿಗೆ ಸನ್ಯಾಸಯೋಗವಿದೆ. ಭೂಲೋಕದಲ್ಲಿ ಸುರಲೋಕ ಪ್ರತೀತಿಯನ್ನೀಯುವ ಋಷೀಶ್ವರ ತಪೋಮಂಡಲವಾದ ಬ್ರಹ್ಮಗಿರಿ, ಸೃಷ್ಟಿ-ಪುಷ್ಟಿಕಾರಕ ಗ್ರÀಹಗಳಾದ ಸೂರ್ಯ-ಚಂದ್ರರ ಬಲಾಧಿಕ್ಯದಿಂದಲೂ, ಶಶಯೋಗಪ್ರದನಾದ ಶನಿಯ ಕೇಂದ್ರದಿಂದಲೂ ಪಾರತ್ರಿಕವಾಗಿಯೂ, ಐಹಿಕವಾಗಿಯೂ ಅನನ್ಯ ಸದೃಶÀವಾದ ಈ ಮಹಾಕ್ಷೇತ್ರರ ಉತ್ಪತ್ತಿ, ಗ್ರಹಗೋಚರಗಳಿಂದಲೂ ಅತ್ಯಂತ ಸೂಕ್ಷ್ಮವಾದ ಅನುಭೂತಿಯನ್ನು ನಿಧಾನವಾಗಿ ವಿಚಾರಿಸತಕ್ಕದ್ದು. ಈ ಲಕ್ಷಣಗಳಿಂದ ಅನಶ್ವರ ಚೈತನ್ಯ ಪೂರ್ಣವಾದ ತೀರ್ಥ ಪವಿತ್ರತೆಯನ್ನು ಸ್ಪಷ್ಟೀಕರಿಸುತ್ತದೆ.

ಪೂಜಾ ಕಾಲಗಳಲ್ಲಿ ಶ್ರೀ ಭಗಂಡೇಶ್ವರನಿಗೆ ರುದ್ರಸೂಕ್ತ ಜಪ ಮಾಡಿ ಅಭಿಷೇಕ, ಶ್ರೀ ಮಹಾವಿಷ್ಣುವಿಗೆ ಪುರುಷಸೂಕ್ತದಿಂದ ಅಭಿಷೇಕ, ಶ್ರೀ ಸುಬ್ರಹ್ಮಣ್ಯ ದೇವರಿಗೆ ಪುರುಷಸೂಕ್ತ ಮತ್ತು ರುದ್ರಸೂಕ್ತ, ಶ್ರೀಸೂಕ್ತಗಳಿಂದ ಅಭಿಷೇಕ ಮಾಡಬೇಕು. ಶ್ರೀ ಸುಬ್ರಹ್ಮಣ್ಯ ಮೂಲ ಮಂತ್ರದಿಂದ ಜಪ ಮಾಡಬೇಕು. ಪೂಜಾ ಕಾಲದಲ್ಲಿ ಈ ಮೂರು ಸ್ಥಳಗಳಲ್ಲಿಯೂ ಪಾರಾಯಣ ಮಾಡಬೇಕು. ರಾತ್ರಿ ಪೂಜೆ ನಂತರ ಶಯನ ಪೂಜೆಗೆ ಮೊದಲು ಅಷ್ಟಾವಧಾನ ನಡೆಸತಕ್ಕದ್ದು. ಇಷ್ಟೆಲ್ಲ ವಿಷಯಗಳು 1992 ರ ಅಷ್ಟಮಂಗಲ ಪ್ರಶ್ನೆಯಲ್ಲಿ ಬಂದಿದ್ದರೂ ಈ ಯಾವದಕ್ಕೂ ಆಗ ಪರಿಹಾರ ಕೈಗೊಳ್ಳಲಿಲ್ಲ.

ಜೀರ್ಣೋದ್ಧಾರದ ಹಿನ್ನೆಲೆ

ಮತ್ತೆ 2002ರಲ್ಲಿ ಅಷ್ಟಮಂಗಲ ಪ್ರಶ್ನೆ ನಡೆದು ಪರಿಹಾರ ಕಾರ್ಯಗಳನ್ನು ಸುಸೂತ್ರವಾಗಿ ನೆರವೇರಿಸಲಾಯಿತು. ತಲಕಾವೇರಿ ಕ್ಷೇತ್ರದಲ್ಲಿನ ಮಹಾಗಣಪತಿ, ಅಗಸ್ತ್ಯೇಶ್ವರ ದೇವಾಲಯಗಳು ಶಿಥಿಲಗೊಂಡಿದ್ದವು, ಪವಿತ್ರ ಕುಂಡಿಕೆಯ ಶಿಲೆಗಳು ಶಿಥಿಲಗೊಂಡಿದ್ದವು. ಆ ಸಂದರ್ಭ ಭಕ್ತಾದಿಗಳು ತಲಕಾವೇರಿ ಮತ್ತು ಭಾಗಮಂಡಲ ಕ್ಷೇತ್ರಗಳ ಜೀರ್ಣೋದ್ಧಾರವಾಗುವ ಅನಿವಾರ್ಯತೆಯಿದೆ ಎಂದು ದನಿ ಎತ್ತಿದ್ದರು. ಏಕೆಂದರೆ, ಯಾವದೇ ಮಹಾನ್ ಕ್ಷೇತ್ರಗಳ ದೇವಾಲಯಗಳಲ್ಲಿ ತಲಾ 12 ವರ್ಷಕ್ಕೊಮ್ಮೆ ಬ್ರಹ್ಮಕಲಶ ನಡೆಯುವದು ಆ ದೇವಾಲಯದ ಮೂರ್ತಿಗಳಿಗೆ ಮರು ಚೈತನ್ಯ ಕಲ್ಪಿಸಿದಂತೆ, ಆದರೆ, ತಲಕಾವೇರಿ ಮತ್ತು ಭಾಗಮಂಡಲ ದೇವಾಲಯಗಳಲ್ಲಿ ನೂರಾರು ವರ್ಷಗಳಾದರೂ ಈ ಧಾರ್ಮಿಕ ಪುನಶ್ಚೇತನ ಕಾರ್ಯಗಳು ನಡೆದಿರಲಿಲ್ಲ. ಈಗ ಜಿಲ್ಲೆಯ ಎಲ್ಲ ದೇವಾಲಯಗಳ ವ್ಯವಸ್ಥಾಪನಾ ಸಮಿತಿ ರಚನೆಗೆ ಅಸಕ್ತರು ತಾವೇ ಅರ್ಜಿ ಸಲ್ಲಿಸಬೇಕು. ಧಾರ್ಮಿಕ ದತ್ತಿ ಇಲಾಖೆ ಅರ್ಜಿ ಸಲ್ಲಿಸಿದವರ ಪೈಕಿ ಅರ್ಹರನ್ನು ಗುರುತಿಸಲು ಒಂದೊಂದು ದೇವಾಲಯಕ್ಕೆ ತಲಾ 9 ಮಂದಿ ಸದಸ್ಯರ ವ್ಯವಸ್ಥಾಪನಾ ಸಮಿತಿಗಳನ್ನು ರಚಿಸುತ್ತದೆ, ಅವರ ಪೈಕಿ ಆಯಾ ದೇವಾಲಯಗಳ ಸಮಿತಿಗೆ ಒಬ್ಬ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ. ಆದರೆ, ಹಿಂದೆ ರಾಜ್ಯದ ಎಲ್ಲ ಮುಜರಾಯಿ ದೇವಾಲಯಗಳಿಗೆ ಜಿಲ್ಲಾ ಮಟ್ಟದ ಒಂದು ಸಮಿತಿಯಿರುತ್ತಿತ್ತು. ಆ ಸಮಿತಿಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳೇ ಅಧ್ಯಕ್ಷರಾಗಿರುತ್ತಿದ್ದರು. ಆದರೆ, ಸಾರ್ವಜನಿಕ ವಲಯದಿಂದ ಸುಮಾರು 12 ಮಂದಿಯನ್ನು ಜಿಲ್ಲಾ ಮಟ್ಟದಲ್ಲಿ ರಾಜ್ಯ ಮುಜರಾಯಿ ಇಲಾಖೆ ನೇಮಕಗೊಳಿಸುತ್ತಿತ್ತು. ಆ ಪೈಕಿ ಒಬ್ಬರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಗುತ್ತಿತ್ತು. ಅದರಂತೆ ಮುನರ್ರಚನೆಯಾದಾಗ ಮಣವಟ್ಟೀರ ಮಂದಣ್ಣ (ಈಗ ದಿವಂಗತರು) ಅವರು ಉಪಾಧ್ಯಕ್ಷರಾದರು. ಆಗ ರಾಮಚಂದ್ರ ಅವರು ಜಿಲ್ಲಾಧಿಕಾರಿಯಾಗಿದ್ದರು. ಅವರೇ ಸಮಿತಿಯ ಅಧ್ಯಕ್ಷರಾಗಿದ್ದರು. ಆ ಸಂದರ್ಭ ಜಿಲ್ಲಾ ಮುಜರಾಯಿ ಸಮಿತಿಯಲ್ಲಿ ತಲಕಾವೇರಿ ಜೀರ್ಣೋದ್ಧಾರದ ಕುರಿತು ಚರ್ಚೆಯಾಯಿತು.

2002ರಲ್ಲಿ ಕೇರಳದ ಖ್ಯಾತ ಜ್ಯೋತಿಷಿ ವಾರಿಯರ್ ಅವರು ಪ್ರಶ್ನೆ ನಡೆಸಿಕೊಟ್ಟರು. ಉಚ್ಚಿಲದ ನೀಲೇಶ್ವರ ಪದ್ಮನಾಭತಂತ್ರಿ (ಈಗ ದಿವಂಗತರು ಈಗ ಅದೇ ಹೆಸರಿನ ಅವರ ಪುತ್ರ ಕ್ಷೇತ್ರ ತಂತ್ರಿಗಳಾಗಿದ್ದಾರೆ.) ಅವರ ಸಮ್ಮುಖದಲ್ಲಿ ಪ್ರಶ್ನೆ ನಡೆಯಿತು.

ಬಳಿಕ ಅಷ್ಟಮಂಗಲ ಪ್ರಶ್ನೆಯಲ್ಲಿ ಬಂದ ಪರಿಹಾರ ಕಾರ್ಯಗಳನ್ನು ನಡೆಸಬೇಕೆನ್ನುವಾಗ ಮುಜರಾಯಿ ಸಮಿತಿಯ ಅವಧಿ ಮುಗಿದಿತ್ತು. ಆ ಸಮಿತಿ ವಿಸರ್ಜನೆಗೊಂಡಿತು. ಅಷ್ಟರಲ್ಲಿ ನೂತನ ಜಿಲ್ಲಾಧಿಕಾರಿಯಾಗಿ ಪಾಲಾಕ್ಷ ಅವರು ಅಧಿಕಾರ ವಹಿಸಿಕೊಂಡರು.

ಏಕೀಕರಣ ರಂಗದ ಪಾತ್ರ

ಅಷ್ಟರಲ್ಲಾಗಲೇ ಕೊಡಗಿನ ಅನೇಕ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ನಡೆಸುತ್ತಿದ್ದ ಕೊಡಗು ಏಕೀಕರಣ ರಂಗವು ಕಣಕ್ಕಿಳಿಯಿತು. ಪ್ರಮುಖರುಗಳಾದ ಮಾತಂಡ ಮೊಣ್ಣಪ್ಪ, ತೇಲಪಂಡ ಪ್ರಮೋದ್ ಸೋಮಯ್ಯ, ಸುಗುಣ ಮುತ್ತಣ್ಣ, ಅಜ್ಜಿನಂಡ ತಮ್ಮು ಪೂವಯ್ಯ, ಜಿ. ಚಿದ್ವಿಲಾಸ್, ಶ್ರೀಧರ್ ನೆಲ್ಲಿತ್ತಾಯ, ಮಂದಪಂಡ ಸತೀಶ್, ಬಿದ್ದಾಟಂಡ ಎಸ್. ತಮ್ಮಯ್ಯ ಮೊದಲಾದವರು ಸೇರಿ ಈ ಬಗ್ಗೆ ನಿರ್ಧಾರ ತಾಳಿದರು. ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರನ್ನು ಭೇಟಿಯಾಗಲು ಅಂದಿನ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದ, ಕೆ. ಪಿ. ಚಂದ್ರಕಲಾ ಜವಾಬ್ದಾರಿಕೆ ವಹಿಸಿಕೊಂಡರು. ಕೊಡಗು ಏಕೀಕರಣ ರಂಗದ ನಿಯೋಗವು ಮುಖ್ಯಮಂತ್ರಿಯಾಗಿದ್ದ ಎಸ್. ಎಂ. ಕೃಷ್ಣ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ತಲಕಾವೇರಿ-ಭಾಗಮಂಡಲ ಜೀರ್ಣೋದ್ಧಾರದ ಅವಶ್ಯಕತೆ ಕುರಿತು ಮನದಟ್ಟು ಮಾಡಿತು. ಪ್ರಾರಂಭಿಕವಾಗಿ ರೂ. 10 ಕೋಟಿ ಅಗತ್ಯದ ಕುರಿತು ಚಂದ್ರಕಲಾ ನೇತೃತ್ವದ ನಿಯೋಗ ಪ್ರಸ್ತಾಪಿಸಿದಾಗ ಮುಖ್ಯಮಂತ್ರಿಯವರು ಅದಕ್ಕೆ ಸಮ್ಮತಿಯಿತ್ತರು.

ಸಾರ್ವಜನಿಕ ಸಮಿತಿ ರಚನೆ

ಇದಾದ ಬಳಿಕ ಸರಕಾರವು ಭಾಗಮಂಡಲ-ತಲಕಾವೇರಿ ಸಾರ್ವಜನಿಕ ಜೀರ್ಣೋದ್ದಾರ ಸಮಿತಿಯೊಂದನ್ನು ರಚಿಸಿತು. ಆಗ ಮುಜರಾಯಿ ಸಚಿವರಾಗಿ ಕೂಡಗಿನ ಸುಮಾ ವಸಂತ್, ಅಬಕಾರಿ ಸಚಿವರಾಗಿ ಎಂ.ಎಂ. ನಾಣಯ್ಯ, ಮೂಲ ಸೌಕಾರ್ಯಾಭಿವೃದ್ಧಿ ಸಚಿವರಾಗಿ ಟಿ. ಜಾನ್ ಇದ್ದರು. ರಾಜ್ಯ ಮುಜರಾಯಿ ಖಾತೆ ಸಚಿವರಾಗಿದ್ದ ಸುಮಾ ವಸಂತ್ ಅವರ ಆಸಕ್ತಿಯಿಂದ ಈ ಸಮಿತಿಯ ಅಧ್ಯಕ್ಷರನ್ನಾಗಿ ಮಾತಂಡ ಮೊಣ್ಣಪ್ಪ ಅವರನ್ನು ನೇಮಿಸಲಾಯಿತು. ಅಲ್ಲದೆ, ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿಯಾಗಿ ಜಿಲ್ಲಾ ಉಪವಿಭಾಗಾಧಿಕಾರಿಯನ್ನು (ಆಗ ಟೇಕ್‍ರಾಜ್ ಅವರಿದ್ದರು) ಪದನಿಮಿತ್ತ ಕ್ರಮದಲ್ಲಿ ನೇಮಿಸಿತು. ಅಲ್ಲದೆ, ಜಿಲ್ಲೆಯ ಅನೇಕ ಸಾರ್ವಜನಿಕ ಪ್ರಮುಖರನ್ನು ಪದಾಧಿಕಾರಿಗಳು ಹಾಗೂ ಸದಸ್ಯರುಗಳನ್ನಾಗಿ ನೇಮಿಸಲಾಯಿತು. ಇದಕ್ಕೂ ಮುನ್ನ ಮುಜರಾಯಿ ಸಮಿತಿಯಿಂದ ಜ್ಯೋತಿಷಿ ವಾರಿಯರ್ ಅವರು ನಡೆಸಿಕೊಟ್ಟ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದ ದೋಷಗಳ ಪರಿಹಾರದ ಕುರಿತು ಈ ನೂತನ ಜೀರ್ಣೋದ್ಧಾರ ಸಮಿತಿ ಕ್ರಮಕೈಗೊಂಡಿತು. ಏಕೆಂದರೆ 1992ರಲ್ಲಿ ಅಷ್ಟಮಂಗಲ ಪ್ರಶ್ನೆಯನ್ನು ನಾರಾಯಣ ಪೊದುವಾಳ್ ಎಂಬವರು ನಡೆಸಿಕೊಟ್ಟರು. ಆ ಸಂಬಂಧ ಯಾವದೇ ಪರಿಹಾರ ಕಾರ್ಯಗಳು ನಡೆದಿರಲಿಲ್ಲ. ನೂರಾರು ವರ್ಷಗಳ ಬಳಿಕ ಅನೇಕ ದೋಷಗಳ ಪರಿಹಾರ ಕಾರ್ಯವನ್ನು ಈ ನೂತನ ಸಮಿತಿ ಕೈಗೆತ್ತಿಕೊಂಡಿತು. ದೋಷಗಳು ಕಂಡು ಬಂದ ವಿದ್ಯಮಾನದಂತೆ ಭಾರೀ ವಾಹನವೊಂದು ಬೆಳಗಿನ ಜಾವ ಮಂಜು ಮುಸುಕಿದ ವಾತಾವರಣ ದಲ್ಲಿ ಚಲಿಸುವಾಗ ತಲಕಾವೇರಿಯಲ್ಲಿ ಕೆಲವು ಹಸುಗಳು ಸಾವಿಗೀಡಾಗಿದ್ದವು. ಉತ್ತರ ಭಾರತದಿಂದ ಬಂದಿದ್ದ ಸಾಧು ಸನ್ಯಾಸಿಯೊಬ್ಬರಿಗೆ ಸ್ಥಳೀಯ ರೊಬ್ಬರು ಕಿರುಕುಳ ನೀಡಿ ಅವರು ಇದರ ವಿರುದ್ಧ ಕಾವೇರಿ ಸನ್ನಿಧಿಯಲ್ಲಿ ನೊಂದು ನೋವು ತೋಡಿಕೊಂಡು ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ, ತಲಕಾವೇರಿಯಲ್ಲಿ ವಾಸಿಸುತ್ತಿದ್ದ ವಿಶೇಷ ನಾಗವೊಂದನ್ನು ಯಾರೋ ಕೊಂದಿದ್ದು, ಅದರ ದೋಷ ತೀವ್ರ ದುಷ್ಪರಿಣಾಮವುಂಟು ಮಾಡಿತ್ತು. ಹೀಗೆ ಅನೇಕ ದೋಷಗಳು ಕ್ಷೇತ್ರದ ಧಾರ್ಮಿಕ ಮ್ಲಾನತೆಗೆ

ಕಾರಣವಾಗಿದ್ದವು. (ಮುಂದುವರಿಯುವುದು)