ಆಸ್ಟ್ರೇಲಿಯಾ ಖಂಡದಿಂದ ಪೂರ್ವ ದಿಕ್ಕಿನಲ್ಲಿ ಸುಮಾರು 5,000 ಕಿ.ಮೀ ನಷ್ಟು ದೂರವಿರುವ ‘ಹಾಂಗಾ ಟೋಂಗಾ ಹಾಂಗಾ ಹಪೈ’ ಹೆಸರಿನ ಸಮುದ್ರದ ಒಳಗಿನ ಜ್ವಾಲಾಮುಖಿ-ಸಕ್ರಿಯ ಪರ್ವತದಿಂದ ಜನವರಿ 15 ರಂದು ಜ್ವಾಲಾಮುಖಿ ಸ್ಫೋಟ ಗೊಂಡಿದ್ದು, ಇಡೀ ಜಗತ್ತನ್ನೇ ತಲ್ಲಣ ಗೊಳಿಸಿತು. 21ನೇ ಶತಮಾನದಲ್ಲೇ ಅತ್ಯಂತ ದೊಡ್ಡ-ಶಕ್ತಿಶಾಲಿ ಜ್ವಾಲಾಮುಖಿ ಸ್ಫೋಟ ಎನಿಸಿ ಕೊಂಡಿರುವ ಈ ಜ್ವಾಲಾಮುಖಿ ‘ವಾಲ್ಕ್ಯಾನಿಕ್ ಇಂಡೆಕ್ಸ್-5’ ತೀವ್ರತೆಯಲ್ಲಿ ಗುರುತಿಸಲ್ಟಟ್ಟಿದೆ. ಇದರ ತೀವ್ರತೆಯ ಪ್ರಮಾಣ ಎಷ್ಟಿತ್ತೆಂದರೆ ಬಾಹ್ಯಾಕಾಶದಿಂದಲೂ ಉಪಗ್ರಹಗಳು ಜ್ವಾಲಾಮುಖಿ ಸ್ಫೋಟದ ದೃಶ್ಯವನ್ನು ಸೆರೆಹಿಡಿದಿವೆ. ಡಿಸೆಂಬರ್ ತಿಂಗಳಿನಿಂದಲೇ ಸಣ್ಣ ಪ್ರಮಾಣದಲ್ಲಿ ಈ ಭಾಗದಲ್ಲಿ ಜ್ವಾಲಾಮುಖಿಗಳು ವರದಿಯಾಗುತ್ತಿದ್ದು, ಜನವರಿ 15 ರಂದು ಅತ್ಯಂತ ಶಕ್ತಿಯುತವಾಗಿ ಸ್ಫೋಟಗೊಂಡಿತು.
ಸ್ಫೋಟಗೊಂಡ ಸ್ಥಳದ ಬಳಿ ಈ ಹಿಂದೆ 2 ಮಾನವ ವಸತಿರಹಿತ ಅತ್ಯಂತ ಸಣ್ಣ ದ್ವೀಪಗಳು ಇದ್ದವು. ಇವೆರಡರ ಮಧ್ಯೆ ಸಮುದ್ರದ ಕೆಳಗೆ ಸುಮಾರು 150 ಮೀ ನಷ್ಟು ಅಡಿಯಲ್ಲಿದ್ದ ಜ್ವಾಲಾಮುಖಿ ಈ ಹಿಂದೆ 2014 ರಲ್ಲಿ ಸಣ್ಣ ಪ್ರಮಾಣದಲ್ಲಿ ಸ್ಫೋಟಗೊಂಡ ಪರಿಣಾಮ ಇದರಿಂದ ಹೊರಸೂಸಲಾಗಿದ್ದ ಬೂದಿಯಿಂದ 2 ದ್ವೀಪಗಳ ಮಧ್ಯೆ ಹೊಸದೊಂದು ಬೂದಿಯ ನ್ನೊಳಗೊಂಡ ದ್ವೀಪವೇ ಸೃಷ್ಟಿಯಾಗಿತ್ತು.
ಬೂದಿಯು ನೀರಿನೊಂದಿಗೆ ಬೆರೆತು ಗಟ್ಟಿಯಾಗಿ ಬಂಡೆ ಸ್ವರೂಪ ಪಡೆದುಕೊಳ್ಳುವುದಿಂದಲೇ ಹೊಸ ದ್ವೀಪ ಸೃಷ್ಟಿಯಾಗಲು ಸಾಧ್ಯ. ಸುಮಾರು 7 ವರ್ಷಗಳು ಗಟ್ಟಿಮುಟ್ಟಾಗಿಯೇ ಇದ್ದ ಜ್ವಾಲಾಮುಖಿ ನಿರ್ಮಿತ ಹೊಸ ದ್ವೀಪ, ಜನವರಿ 15 ರಂದು ಮತ್ತದೇ ಜ್ವಾಲಾಮುಖಿಯಿಂದ ಸಂಪೂರ್ಣ ನಾಶವಾಯಿತು. ಈ ಹಿಂದಿನಿಂದಲೂ ಬದಿಯಲ್ಲೇ ಇದ್ದ ಮತ್ತೆರಡು ದ್ವೀಪಗಳೂ ಭಾಗಶಃ ನಾಶವಾದವು.
ವ್ಯತಿರಿಕ್ತ ಪರಿಣಾಮ
ಜ್ವಾಲಾಮುಖಿಯ ಸಮೀಪದ ಮಾನವವಸತಿಯುಳ್ಳ ‘ಟಾಂಗಾ’ ಅಲೆಗಳಿಂದಾಗಿ ಸುಮಾರು 5 ಮಂದಿಯಾದರೂ ಪ್ರಾಣ ಕಳೆದುಕೊಂಡರು. ಭಾರತದಲ್ಲಿನ ತಮಿಳುನಾಡಿನ ರಾಜಧಾನಿ ಚೆನ್ನೈ, ಈ ಜ್ವಾಲಾಮುಖಿಯಿಂದ ಸುಮಾರು 12,000 ಕಿ.ಮೀ ನಷ್ಟು ದೂರವಿದ್ದರೂ ಇಲ್ಲಿಯೂ ಸಹ ಸ್ಫೋಟದಿಂದಾಗುವ ‘ಶಾಕ್ವೇವ್’ ಅನುಭವ ನೀಡಿದೆ.
ಜ್ವಾಲಾಮುಖಿ ಸ್ಫೋಟದಿಂದ ‘ಶಾಕ್ವೇವ್’ ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಸ್ವಿಟ್ಜರ್ಲ್ಯಾಂಡ್, ಇಂಗ್ಲೆಂಡ್ ತಲುಪಿದ್ದು, ಜಪಾನಿನ ಹವಾಮಾನ ಕೇಂದ್ರದ ಪ್ರಕಾರ ಈ ‘ಶಾಕ್ವೇವ್’ ಭೂಮಿಯನ್ನೇ 4 ಬಾರಿ ಸುತ್ತಿರುವುದಾಗಿ ತಿಳಿದುಬಂದಿದೆ.
ಭೂಮಿಯ ತಾಪಮಾನವೇ ಬದಲಾವಣೆ..!
ಜ್ವಾಲಾಮುಖಿಯು ಹಲವು ವ್ಯತಿರಿಕ್ತ ಪರಿಣಾಮಗಳನ್ನು ಬೀರುವುದರೊಂದಿಗೆ ಪ್ರಸ್ತುತ ವಿಶ್ವದ ವಿವಿಧ ರಾಷ್ಟ್ರಗಳ ಆದ್ಯತೆಯಾಗಿರುವ ಹಮಾಮಾನ ವೈಪರಿತ್ಯ ನಿಯಂತ್ರಣಕ್ಕೆ ಸಹಾಯ ಮಾಡಿದೆ ಎಂಬುದರಲ್ಲಿ ತಪ್ಪಿಲ್ಲ. 21ನೇ ಶತಮಾನದಲ್ಲಿಯೇ ಅತ್ಯಂತ ಶಕ್ತಿಶಾಲಿ ಜ್ವಾಲಾಮುಖಿ ಸ್ಫೋಟ ಎನಿಸಿಕೊಂಡಿರುವ ಈ ಜ್ವಾಲಾಮುಖಿ ಸಂಪೂರ್ಣ ಭೂಮಿಯಲ್ಲದಿದ್ದರೂ, ಭೂಮಿಯ ದಕ್ಷಿಣ ಹೆಮಿಸ್ಫಿಯರ್ನ ಸರಾಸರಿ ತಾಪಮಾನವನ್ನು ಕಡಿಮೆಮಾಡ ಬಹುದಾದ ಶಕ್ತಿ ಹೊಂದಿದೆ. ಕಾರಣ, ಜ್ವಾಲಾಮುಖಿಯಿಂದ ಹೊರ ಚಿಮ್ಮಿಸಲ್ಪಟ್ಟ ಸಲ್ಫರ್ ಡೈಆಕ್ಸೈಡ್ ಭೂಮಿಯ ವಾತಾವರಣಗಳ ಪದರಗಳಲ್ಲಿ ಒಂದಾದ ‘ಸ್ಟ್ರ್ಯಾಟೋಸ್ಫೀರ್’ ಸೇರಿಕೊಂಡಿದ್ದು, ಇದು ಸಾಮಾನ್ಯ ವಾತಾವರಣ ದೊಂದಿಗೆ ಬೆರೆಯಲಸಾಧ್ಯ. ಆದ ಕಾರಣ ಹಲವು ವರ್ಷಗಳ ಕಾಲ ಭೂಮಿಯ ಸುತ್ತ ಚಲಿಸಬಲ್ಲ ಸಾಮಥ್ರ್ಯ ಹೊಂದಿದೆ. ಈ ಸಲ್ಫರ್ ಡೈಆಕ್ಸೈಡ್ ಎಷ್ಟೋ ವರ್ಷಗಳ ಕಾಲ ಇಲ್ಲೇ ಇದ್ದು, ಹೆಚ್ಚಿನ ಸೂರ್ಯನ ಕಿರಣಗಳನ್ನು ಭೂಮಿಗೆ ತಲುಪದೆ ಇರುವ ಹಾಗೆ ಬಾಹ್ಯಾಕಾಶಕ್ಕೆ ಪ್ರತಿಬಿಂಬಿಸುತ್ತವೆ. ಇದರಿಂದ ಸೂರ್ಯನಿಂದ ಭೂಮಿ ಅನುಭವಿಸುವ ಶಾಖೆಯ ಪ್ರಮಾಣ ಕಡಿಮೆಯಾಗಲಿದ್ದು ತಾಪಮಾನದಲ್ಲಿ ಇಳಿಕೆಯಾಗುವ ಸಾಧ್ಯತೆಗಳಿವೆ.
ಸ್ಫೋಟದಿಂದಾಗಿ 4 ಲಕ್ಷ ಟನ್ನಷ್ಟು ಸಲ್ಫರ್ ಡೈಆಕ್ಸೈಡ್ ಸ್ಟ್ರ್ಯಾಟೋಸ್ಫಿಯರ್ ಸೇರಿದ್ದು, ಭೂಮಿಯ ದಕ್ಷಿಣ ಭಾಗಗಳಲ್ಲಿ ಸರಾಸರಿ ತಾಪಮಾನ - ಡಿಗ್ರಿ 0.1 ರಿಂದ ಡಿಗ್ರಿ 0.5 ಸೆಲ್ಶಿಯಸ್ ನಷ್ಟು ಇಳಿಕೆಯಾಗಲಿದೆ. ಈ ವರ್ಷದ ಸೆಪ್ಟೆಂಬರ್ವರೆಗೂ ಈ ತಂಪಿನ ವಾತಾವರಣ ಮುಂದುವರೆಯಲಿದೆÉ. (0.1 - 0.5 ಡಿಗ್ರಿ ಅತ್ಯಂತ ದೊಡ್ಡ ಪ್ರಮಾಣ ವಲ್ಲದಿದ್ದರೂ, ಭೂಮಿಯ ಸರಾಸರಿ ತೆಗೆದುಕೊಂಡಾಗ ಇದು ಗಣನೀಯ ಮೊತ್ತವೆ). - ಪ್ರಜ್ವಲ್ ಜಿ.ಆರ್.