ಕಣಿವೆ, ಫೆ. ೫: ಕೋಟ್ಯಾಂತರ ರೂಗಳನ್ನು ವ್ಯಯಿಸಿ ಕಳೆದ ಒಂದು ವರ್ಷದ ಹಿಂದಷ್ಟೇ ನಿರ್ಮಾಣಗೊಂಡಿದ್ದ ಬಸವನಹಳ್ಳಿ ಹೇರೂರು ಸಂಪರ್ಕ ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿದ್ದು ವರ್ಷ ಕಳೆಯುವ ಮುನ್ನವೇ ಗುಂಡಿ ಬೀಳುತ್ತಿದ್ದರೂ ಕೂಡ ಸಂಬAಧಿಸಿದ ಇಲಾಖಾ ಅಧಿಕಾರಿಗಳು ಅಸಡ್ಡೆ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

ಕುಶಾಲನಗರ-ಮಡಿಕೇರಿ ಹೆದ್ದಾರಿಯಂಚಿನ ಬಸವನಹಳ್ಳಿ ಗ್ರಾಮದಿಂದ ಹಾರಂಗಿ ಹಿನ್ನೀರು ಪ್ರದೇಶವಾದ ಹೇರೂರು ಗ್ರಾಮದವರೆಗೆ ನಿರ್ಮಿಸಿದ್ದ ೬ ಕಿ.ಮೀ. ದೂರದ ‘ನಮ್ಮ ಗ್ರಾಮ- ನಮ್ಮ ರಸ್ತೆ’ ಯೋಜನೆಯ ಡಾಂಬರು ರಸ್ತೆಯನ್ನು ಮುಂದಿನ ಐದು ವರ್ಷಗಳವರೆಗೆ ಕಾಮಗಾರಿ ನಿರ್ಮಿಸಿದ ಗುತ್ತಿಗೆದಾರರೇ ನಿರ್ವಹಿಸಬೇಕೆಂಬ ಇಲಾಖೆಯ ಮೀಸಲು ಅನುದಾನ ಹಾಗೂ ನಿರ್ದೇಶನವಿದ್ದಾಗ್ಯೂ ಕೂಡ ಗುತ್ತಿಗೆದಾರರು ವಿಳಂಭ ಧೋರಣೆ ತಾಳಿದ್ದಾರೆ ಎಂದು ನಿವಾಸಿಗಳು ದೂರಿದ್ದಾರೆ.

ಈ ಮಾರ್ಗದ ಬಸವನಹಳ್ಳಿ ಬಳಿಯ ಅರಣ್ಯದ ಬಳಿ ಹಾದು ಹೋಗಿರುವ ರಸ್ತೆಯ ಮಧ್ಯೆ ಅಲ್ಲಲ್ಲಿ ಡಾಂಬರು ಕಿತ್ತು ನಿಂತು ಗುಂಡಿಗಳು ಬಿದ್ದಿವೆ. ಮೊದಲೇ ಕಾಡಾನೆಗಳ ಹಾವಳಿ ಹೆಚ್ಚಾಗಿರುವ ಇಲ್ಲಿ ಕಿತ್ತು ನಿಂತ ರಸ್ತೆಯ ಗುಂಡಿಗಳನ್ನು ಮುಚ್ಚುವ ಮೂಲಕ ವಾಹನ ಸವಾರರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಹೇರೂರು ಹಾಗೂ ಬಸವನಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.