ಜಗತ್ತಿನ ಅತ್ಯಂತ ದೊಡ್ಡದಾದ ‘ಜೇಮ್ಸ್ ವೆಬ್’ ಹೆಸರಿನ ಟೆಲಿಸ್ಕೋಪ್ ಈಗಾಗಲೇ ಬಾಹ್ಯಾಕಾಶದ ‘ಪಾರ್ಕಿಂಗ್ ಸ್ಪಾಟ್’ ಎಂದೇ ಕರೆಯಲ್ಪಡುವ ‘ಎಲ್ - ೨’ ಎಂಬ ಪ್ರದೇಶ (ಭೂಮಿಯಿಂದ ಸುಮಾರು ೧೫ ಲಕ್ಷ ಕಿ.ಮೀ) ತಲುಪಿದ್ದು, ಇನ್ನು ಕೆಲವೇ ತಿಂಗಳುಗಳಲ್ಲಿ ಅತ್ಯಂತ ದೂರದ ಗ್ಯಾಲೆಕ್ಸಿಗಳಾಗಲಿ, ನಕ್ಷತ್ರ - ಗ್ರಹಗಳನ್ನಾಗಲಿ ತನ್ನ ಧೈತ್ಯಾಕಾರದ ಕನ್ನಡಿಗಳ ಸಹಕಾರದಿಂದ ಗಮನಿಸಿ ಬಾಹ್ಯಾಕಾಶದ ದೇಹಗಳÀ ಬಗ್ಗೆ ನಮಗಿದ್ದ ಜ್ಞಾನವನ್ನು ಮತ್ತಷ್ಟು ವೃದ್ಧಿಸಲಿದೆ.

ಕಳೆದ ಡಿಸೆಂಬರ್ ೨೪ ರಂದು ಅಮೇರಿಕಾದ ಓಂSA, ಕೆನಡಾ ಹಾಗೂ ಯೂರೋಪಿಯನ್ ಸ್ಪೇಸ್ ಏಜೆನ್ಸಿಗಳ ಸಹಕಾರದಿಂದ ಏರೀಸ್ ಎಂಬ ರಾಕೆಟ್ ಮೂಲಕ ಉಡಾವಣೆಗೊಂಡ ಟೆಲಿಸ್ಕೋಪ್ ೨೯ ದಿನಗಳ ಪಯಣದ ಬಳಿಕ ಬಾಹ್ಯಾಕಾಶದ ‘ಪಾರ್ಕಿಂಗ್ ಸ್ಪಾಟ್’ ತಲುಪಿದೆ.

ಏನಿದು ಪಾರ್ಕಿಂಗ್ ಸ್ಪಾಟ್...?

ಬಾಹ್ಯಾಕಾಶದ ಎಲ್ಲಾ ವಸ್ತುಗಳು(ಗ್ರಹ, ನಕ್ಷತ್ರ ಇತ್ಯಾದಿ) ಯಾವಾಗಲೂ ಚಲಿಸುತ್ತಲೇ ಇರುತ್ತವೆ. ಭೂಮಿ ಸೂರ್ಯನ ಸುತ್ತ ಸುತ್ತಿದರೆ, ಸೂರ್ಯ ಗ್ಯಾಲೆಕ್ಸಿಯ (ನಕ್ಷತ್ರ ಗ್ರಹಗಳಿತ್ಯಾದಿಗಳನ್ನು ಹೊಂದಿರುವ ಸಮೂಹ) ಮಧ್ಯದ ಸುತ್ತ ಚಲಿಸುತ್ತದೆ. ಒಟ್ಟಿನಲ್ಲಿ ಬಾಹ್ಯಾಕಾಶದಲ್ಲಿ ಎಲ್ಲವೂ ಪಯಣದಲ್ಲೇ ಇರುವುದಾದರೆ, ಪಾರ್ಕಿಂಗ್ ಸ್ಪಾಟ್ ಎಂಬುದಕ್ಕೆ ಅರ್ಥ ಇದೆಯಾ..?

ಪ್ರತಿ ಎರಡು ಬಾಹ್ಯಾಕಾಶ ವಸ್ತುಗಳಿಗೆ ಅದರದ್ದೇ ಆದ ಒಟ್ಟು ೫ ಗುರುತ್ವಾಕರ್ಷಣಾ ಸಮತೋಲನಾ ಸ್ಥಳಗಳಿರುತ್ತವೆ. ಇದುವೇ ಪಾರ್ಕಿಂಗ್ ಸ್ಪಾಟ್ ಅಥವಾ ‘ಲಗ್ರಾಂಜೆ’ ಪಾಯಿಂಟ್‌ಗಳು. ಭೂಮಿ ಹಾಗೂ ಸೂರ್ಯನ ಗುರುತ್ವಾಕರ್ಷಣಾ ಆಟದಿಂದ ಈ ರೀತಿಯ ೫ ಲಗ್ರಾಂಜೆ ಪಾಯಿಂಟ್‌ಗಳು ಸೃಷ್ಟಿಯಾಗುತ್ತವೆ. ಇವುಗಳನ್ನು ಚಿತ್ರದಲ್ಲಿ ಪ್ರದರ್ಶಿಸಲಾಗಿದ್ದು, ಎಲ್ - ೧, ೨, ೩, ೪, ೫ ಎಂಬುದಾಗಿ ಹೆಸರಿಸಲಾಗಿದೆ. ಈ ಪ್ರದೇಶಗಳನ್ನು ಗಣಿತಶಾಸ್ತçದ ಮೂಲಕ ೧೮ನೇ ಶತಮಾನದಲ್ಲಿಯೇ ಕಂಡು ಹಿಡಿದ ವಿಜ್ಞಾನಿ ಲಗ್ರಾಂಜೆ ಅವರ ಹೆಸರಿನಲ್ಲಿ ಪಾಯಿಂಟ್‌ಗಳನ್ನು ಹೆಸರಿಸಲಾಗಿದೆ.

ಸಾಮಾನ್ಯವಾಗಿ ಬಾಹ್ಯಾಕಾಶದಲ್ಲಿನ ಯಾವುದೇ ವಸ್ತುವಾಗಿರಲಿ, ಯಾವುದಾದರೊಂದು ವಸ್ತುವಿನ (ಉದಾ:ಭೂಮಿ, ಸೂರ್ಯ) ಗುರುತ್ವಾಕರ್ಷಣೆಯ ನಿಯಂತ್ರಣದಲ್ಲಿರುತ್ತದೆ. ಉದಾಹರಣೆಗೆ ಭೂಮಿಯ ಸಮೀಪ ಯಾವುದಾದರು ಮಾನವ ನಿರ್ಮಿತ ಉಪಗ್ರಹವಿದ್ದರೆ, ಭೂಮಿಗೆ ಅಪ್ಪಳಿಸಿ ನಾಶವಾಗುವ ಸಾಧ್ಯತೆ ಇದೆ. ಸ್ವಲ್ಪ ದೂರದಲ್ಲಿದ್ದರೆ ಭೂಮಿಯ ಗುರುತ್ವಾಕರ್ಷಣೆಯ ಹಿಡಿತಕ್ಕೆ ಸಿಗದೆ ಬಾಹ್ಯಾಕಾಶದಲ್ಲಿ ಕಣ್ಮರೆಯಾಗುವ ಸಾಧ್ಯತೆಗಳಿವೆ. ಆದ ಕಾರಣ ಭೂಮಿಯನ್ನು ಪ್ರದಕ್ಷಿಸುವ ಉಪಗ್ರಹಗಳನ್ನು ಸದಾ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅಗತ್ಯ.

ಆದರೆ, ವೆಬ್ ಟೆಲಿಸ್ಕೋಪ್‌ನ ಆವಾಸಸ್ಥಾನವಾಗಿರುವ ಎಲ್ - ೨ ಪ್ರದೇಶ, ಈ ರೀತಿಯಲ್ಲ. ಚಿತ್ರದಲ್ಲಿ ಬಿಂಬಿಸಿರುವAತೆ ಸೂರ್ಯ - ಭೂಮಿ ಸಿಸ್ಟಮ್‌ನಲ್ಲಿ ಭೂಮಿಯ ಬದಿ, ಭೂಮಿಗಿಂತ ೧೫ ಲಕ್ಷ ಕಿ.ಮೀ. ದೂರದಲ್ಲಿನ (ಚಂದ್ರನ ಕಕ್ಷೆಯನ್ನೂ ಮೀರಿ) ಪ್ರದೇಶದಲ್ಲಿ ಸೂರ್ಯ ಹಾಗೂ ಭೂಮಿಯ ಗುರುತ್ವಾಕರ್ಷಣೆಯ ಶಕ್ತಿ ಹಾಗೂ ಗುರುತ್ವಾಕರ್ಷಣೆಗಿರುವ ಟೆಲಿಸ್ಕೋಪಿನ ಪ್ರತಿಕ್ರಿಯಾ ಶಕ್ತಿಯಾದ ಸೆಂಟ್ರಿಫುಗಲ್ ಶಕ್ತಿಗಳು, ಸಮತೋಲನದಲ್ಲಿರಲಿವೆ. ಅಂದರೆ ಭೂಮಿಯಿಂದ ಗಮನಿಸಿದರೆ, ಟೆಲಿಸ್ಕೋಪಿನ ಸ್ಥಳ ಬದಲಾಗುವುದೇ ಇಲ್ಲ. ಟೆಲಿಸ್ಕೋಪ್ ಭೂಮಿಯನ್ನೂ ಅಪ್ಪಳಿಸುವುದಿಲ್ಲ. ಸೂರ್ಯನನ್ನೂ ಅಪ್ಪಳಿಸುವುದಿಲ್ಲ. ಇವೆರಡರ ಗುರುತ್ವಾಕರ್ಷಣೆಯ ಶಕ್ತಿಯನ್ನು ಮೀರಿಸಿ ಹೊರ ಆಕಾಶಕ್ಕೂ ತೆರಳುವುದಿಲ್ಲ. ಇಂತಹ ಒಂದು ವಿಸ್ಮಯಕಾರಿ ಪ್ರದೇಶದಲ್ಲಿರಲಿರುವ ಟೆಲಿಸ್ಕೋಪ್ ಭೂಮಿಯೊಂದಿಗೆಯೇ ಸೂರ್ಯನನ್ನು ಪ್ರದಕ್ಷಿಸಲಿದೆ.

ಪ್ರಸ್ತುತ ಭೂಮಿಯನ್ನು ಸುತ್ತುತ್ತಿರುವ ‘ಹಬಲ್’ ಹೆಸರಿನ ಟೆಲಿಸ್ಕೋಪ್‌ನಲ್ಲಿ ಏನಾದರೂ ತಾಂತ್ರಿಕ ಸಮಸ್ಯೆಗಳು ಉಂಟಾದರೆ, ಗಗನಯಾತ್ರಿಗಳು ಭೌತಿಕವಾಗಿ ಸಮಸ್ಯೆ ಸರಿಪಡಿಸಲು ವ್ಯವಸ್ಥೆ ಇದೆ. ಆದರೆ ೧೫ ಲಕ್ಷ ಕಿ.ಮೀ. ನಷ್ಟು ದೂರವಿರುವ ವೆಬ್ ಟೆಲಿಸ್ಕೋಪ್‌ನತ್ತ ಗಗನಯಾತ್ರಿಗಳನ್ನು ಕರೆದೊಯ್ದು ವಾಪಾಸ್ ಆಗಲು ತಂತ್ರಜ್ಞಾನ ಇನ್ನೂ ಬೆಳೆದಿಲ್ಲ. ಆದ್ದರಿಂದ ಈ ೧,೦೦೦ ಕೋಟಿ ಡಾಲರ್ ವೆಚ್ಚದ ಟೆಲಿಸ್ಕೋಪನ್ನು ಯಾವುದೇ ನ್ಯೂನ್ಯತೆಗಳಿಲ್ಲದೆ ತಯಾರು ಮಾಡಲಾಗಿದೆ.

ಯಾಕೆ ಎಲ್ - ೨ ..?

ಸೂರ್ಯ ಭೂಮಿ ಗುರುತ್ವಾಕರ್ಷಣೆಯ ಆಟದಿಂದ ೫ ಲಗ್ರಾಂಜೆ ಪಾಯಿಂಟ್ಸ್ಗಳು ಸೃಷ್ಟಿಯಾದರೂ ಎಲ್ - ೨ ಅನ್ನೇ ಆಯ್ಕೆ ಮಾಡಲಾಗಿದೆ. ಎಲ್ - ೨ ಪ್ರದೇಶದಲ್ಲಿ ಟೆಲಿಸ್ಕೋಪ್ ಸೂರ್ಯನ ಶಾಖೆಯಿಂದ ದೂರವಿದ್ದು, ಸದಾ ಸೂರ್ಯನಿಗೆ ಬೆನ್ನು ಮಾಡಲಿದೆ ಹಾಗೂ ಭೂಮಿಯೊಂದಿಗಿನ ಸಂಪರ್ಕಕ್ಕೂ ಸುಲಭವಾಗಲಿದೆ. ಎಲ್ - ೩ ಸೂರ್ಯನ ಹಿಂಬದಿಯಲ್ಲಿದ್ದರೆ, ಎಲ್ - ೧ ಸೂರ್ಯ ಹಾಗೂ ಭೂಮಿಯ ನಡುವಿನಲ್ಲಿದ್ದು, ಇವೆರಡೂ ಟೆಲಿಸ್ಕೋಪಿಗೆ ಸೂಕ್ತ ಪ್ರದೇಶಗಳಲ್ಲ. ಎಲ್ - ೪ ಹಾಗೂ ಎಲ್ - ೫ ಪ್ರದೇಶದಲ್ಲಿ ತಾಪಮಾನ ಹೆಚ್ಚಿರುವ ಕಾರಣ ಟೆಲಿಸ್ಕೋಪ್ ಇರಿಸಲು ಎಲ್ -೨ ಪ್ರದೇಶವನ್ನು ಆಯ್ಕೆ ಮಾಡಲಾಗಿದೆ. ಈ ಪ್ರದೇಶದ ಮೂಲಕ ಒಂದು ಬಾರಿಗೆ ಅರ್ಧ ಆಕಾಶವನ್ನು ನೋಡಲು ಟೆಲಿಸ್ಕೋಪಿಗೆ ಸಾಧ್ಯವಾಗುತ್ತದೆ.

ಟೆನಿಸ್ ಕೋರ್ಟ್ ಗಾತ್ರದ ಹೀಟ್ ಶೀಲ್ಡ್

ಟೆಲಿಸ್ಕೋಪಿನ ಕನ್ನಡಿ ಸೇರಿದಂತೆ ಇತರ ಅತ್ಯಾಧುನಿಕ ತಂತ್ರಜ್ಞಾನ ಉಳ್ಳ ಬಿಡಿ ಭಾಗಗಳು, ಸೂರ್ಯನ ಶಾಖೆಯಿಂದ ತಪ್ಪಿಸಿಕೊಳ್ಳಲು ಒಂದು ಟೆನಿಸ್ ಕೋರ್ಟ್ ಗಾತ್ರದ ಹೀಟ್ ಶೀಲ್ಡ್ ಅನ್ನೇ ತಯಾರಿಸಲಾಗಿದೆ. ಈ ಹೀಟ್ ಶೀಲ್ಡ್ ಯಾವಾಗಲೂ ಸೂರ್ಯನನ್ನು ಮುಖಮಾಡಿದ್ದರೆ, ಟೆಲಿಸ್ಕೋಪಿನ ಕನ್ನಡಿಗಳು ಯಾವಾಗಲು ಸೂರ್ಯನಿಂದ ಮರೆಯಾಗಿ ತಂಪಾಗಿರುತ್ತವೆ. ೧೮ ಹೆಕ್ಸಾಗನ್ ಆಕಾರದ ಕನ್ನಡಿಗಳು ಉಡಾವಣೆಗೂ ಮುನ್ನ ಮಡಚಲ್ಪಟ್ಟು ರಾಕೆಟ್ ಒಳಗೆ ಅವಿತುಕೊಂಡಿದ್ದು, ಈ ಎಲ್ಲಾ ಕನ್ನಡಿಗಳು, ಟೆಲಿಸ್ಕೋಪ್ ರಾಕೆಟ್‌ನಿಂದ ಬೇರ್ಪಟ್ಟ ಬಳಿಕವಷ್ಟೇ ತೆರೆಯಲ್ಪಟ್ಟವು. ಅತ್ಯಾಧುನಿಕ ಇಂಜಿನಿಯರಿAಗ್ ತಂತ್ರಜ್ಞಾನದಿAದಾಗಿ ಈ ಕಾರ್ಯ ಸಾಧ್ಯವಾಯಿತು.

ಇದರ ೧೮ ಕನ್ನಡಿಗಳು ಚಿನ್ನ ಲೇಪಿತ ಬೆರಿಲಿಯಮ್‌ನಿಂದ ತಯಾರಾಗಿವೆ. ಪ್ರಸ್ತುತ ಭೂಮಿಯನ್ನು ಪ್ರದಕ್ಷಿಸುತ್ತಿರುವ ಹಬಲ್ ಟೆಲಿಸ್ಕೋಪಿಗಿಂತ ೧೦೦ ಪಟ್ಟು ಹೆಚ್ಚು ಶಕ್ತಿಶಾಲಿ ಟೆಲಿಸ್ಕೋಪ್ ಇದಾಗಿದೆ. ನಕ್ಷತ್ರಾದಿಗಳ ‘ಇನ್ಫಾçರೆಡ್’ ಕಿರಣಗಳ ಮೂಲಕ ಅವುಗಳ ಚಿತ್ರಗಳನ್ನು ಸೆರೆಹಿಡಿದು ಅಧ್ಯಯನ ನಡೆಸಲಿರುವ ವೆಬ್, ಇನ್ನು ಕನಿಷ್ಟ ೫ ತಿಂಗಳಾದರೂ ಪರೀಕ್ಷಾ ಹಂತದಲ್ಲೇ ಕಾರ್ಯ ಮಾಡಲಿದ್ದು, ಇದಾದ ಬಳಿಕವಷ್ಟೆ ತನ್ನ ಮೊದಲ ಚಿತ್ರ ಸೆರೆಹಿಡಿಯಲಿದೆ.

ಜಗತ್ತಿನಲ್ಲೇ ಅತ್ಯಂತ ಶಕ್ತಿಶಾಲಿಯಾಗಿರುವ ವೆಬ್, ೧೩,೫೦೦ ಕೋಟಿ ಲೈಟ್ ಇರ‍್ಸ್ (ಬೆಳಕು ವರ್ಷ)ನಷ್ಟು ದೂರವಿರುವ ನಕ್ಷತ್ರ, ಗ್ಯಾಲೆಕ್ಸಿಗಳನ್ನು ಸಹ ವೀಕ್ಷಿಸುವ ಸಾಮರ್ಥ್ಯ ಹೊಂದಿದೆ. ೧ ಬೆಳಕು ವರ್ಷ ಎಂದರೆ ಒಂದು ವರ್ಷದಲ್ಲಿ ಬೆಳಕು ಚಲಿಸುವ ದೂರ. ೧೩,೫೦೦ ಕೋಟಿ ಬೆಳಕು ವರ್ಷ ಎಂದರೆ, ಇಷ್ಟು ಕೋಟಿ ವರ್ಷಗಳಲ್ಲಿ ಬೆಳಕು ಚಲಿಸಿರುವ ದೂರದಲ್ಲಿರುವ ಗ್ಯಾಲೆಕ್ಸಿಗಳನ್ನೂ ನೋಡಬಹುದಾದ ಸಾಮರ್ಥ್ಯವನ್ನು ವೆಬ್ ಹೊಂದಿದೆ. ಇದರರ್ಥ ೧೩,೫೦೦ ಕೋಟಿ ವರ್ಷಗಳ ಹಿಂದೆ ಈ ಗ್ಯಾಲೆಕ್ಸಿಗಳು ಹೇಗಿದ್ದವು ಎಂಬುದನ್ನು ವೀಕ್ಷಿಸಬಹುದಾಗಿದೆ. ಇದರಿಂದಾಗಿ ನಮ್ಮ ಜಗತ್ತು ಸೃಷ್ಟಿಯಾದ ರಹಸ್ಯದ ಅಧ್ಯಯನವನ್ನೇ ಮಾಡಬಹುದೆಂದರೆ ತಪ್ಪಾಗಲಾರದು. - ಪ್ರಜ್ವಲ್ ಜಿ.ಆರ್.