ಸೋಮವಾರಪೇಟೆ, ಫೆ. ೪: ಸಮೀಪದ ದೊಡ್ಡಮಳ್ತೆ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಸ್ವರ್ಣಗೌರಿ ಹೊನ್ನಮ್ಮತಾಯಿ ಹಾಗೂ ಬಸವೇಶ್ವರ ದೇವಾಲಯದ ಹುಂಡಿಯನ್ನು ಹಾಡಹಗಲೇ ಕಳ್ಳತನ ಮಾಡಿರುವ ಘಟನೆ ನಡೆದಿದೆ.
ದೇವಾಲಯ ಆವರಣದಲ್ಲಿ ಇಡಲಾಗಿದ್ದ ಹುಂಡಿಯನ್ನು ಕಳವು ಮಾಡಿರುವ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದು, ಇವರುಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಮಧ್ಯಾಹ್ನದ ಸಮಯದಲ್ಲಿ ದೇವಾಲಯಕ್ಕೆ ಆಗಮಿಸಿರುವ ಈರ್ವರು ಕಳ್ಳರು, ದೇವಾಲಯದ ಕಾಣಿಕೆ ಹುಂಡಿ ಡಬ್ಬವನ್ನು ತೆಗೆದುಕೊಂಡು, ಅಪಾಚಿ ಬೈಕ್‌ನಲ್ಲಿ ಗ್ರಾಮದ ಮುಖ್ಯ ರಸ್ತೆಯ ಮೂಲಕ ಅಬ್ಬೂರುಕಟ್ಟೆ ಕಡೆಗೆ ತೆರಳಿದ್ದಾರೆ.
ದೇವಾಲಯದ ಸ್ವಲ್ಪ ದೂರದಲ್ಲಿ ಕಾಫಿ ಒಣಗಿಸುತ್ತಿದ್ದ ಸ್ವರ್ಣಗೌರಿ ದೇವಾಲಯ ಸಮಿತಿ ಅಧ್ಯಕ್ಷ ವೀರೇಶ್ ಅವರು, ಬೈಕಿನಲ್ಲಿ ತೆರಳುತ್ತಿದ್ದ ಕಳ್ಳರನ್ನು ನೋಡಿದರೂ ಅನುಮಾನ ಬಂದಿರಲಿಲ್ಲ. ಸಂಜೆ ಅರ್ಚಕರು ದೇವಾಲಯಕ್ಕೆ ತೆರಳಿದ ಸಂದರ್ಭ ಕಳ್ಳತನ ಬೆಳಕಿಗೆ ಬಂದಿದೆ.
ಹುಂಡಿಯೊಳಗಿದ್ದ ಹಣವನ್ನು ತೆಗೆದುಕೊಂಡಿರುವ ಕಳ್ಳರು ಖಾಲಿ ಹುಂಡಿಯನ್ನು ಅಬ್ಬೂರುಕಟ್ಟೆಯ ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದಾರೆ. ಖಾಲಿ ಹುಂಡಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ಸಿ.ಸಿ.ಕ್ಯಾಮೆರಾ ದೃಶ್ಯಾವಳಿಯನ್ನು ಪರಿಶೀಲಿಸಿ, ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ. ಕಳೆದ ಶನಿವಾರವಷ್ಟೇ ಪಟ್ಟಣದ ಸೋಮೇಶ್ವರ ದೇವಾಲಯ ಹಾಗೂ ಆಂಜನೇಯಸ್ವಾಮಿ ದೇವಾಲಯದ ಹುಂಡಿಯನ್ನು ಒಡೆದು ಕಾಣಿಕೆ ಹಣ ಕಳವು ಮಾಡಲಾಗಿತ್ತು.