ಮುಳ್ಳೂರು, ಫೆ. ೪: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಮಹಿಳೆಯರ ಹಾಗೂ ಗ್ರಾಮೀಣ ಭಾಗದ ಸರ್ವಾಂಗೀಣ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿ ರುವುದು ಶ್ಲಾಘನಿಯ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಮೀಪದ ಕೊಡ್ಲಿಪೇಟೆ ಮಹಿಳಾ ಸಮಾಜದಲ್ಲಿ ನೂತನವಾಗಿ ತೆರೆಯಲಾದ ಸಾಮಾನ್ಯ ಡಿಜಿಟಲ್ ಸೇವಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಒಂದಾದ ಡಿಜಿಟಲ್ ಸೇವಾ ಕೇಂದ್ರದ ಸೇವೆಯನ್ನು ಸಂಘದ ಸದಸ್ಯರು, ಗ್ರಾಮಸ್ಥರು ಸದುಪಯೋಗಿಸಿ ಕೊಳ್ಳುವಂತೆ ಸಲಹೆ ನೀಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ರೋಹಿತ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪ್ರತಿಯೊಂದು ವಲಯ ವ್ಯಾಪ್ತಿಯ ಗ್ರಾಮಗಳಲ್ಲಿ ಸಾಮಾನ್ಯ ಡಿಜಿಟಲ್ ಸೇವಾ ಕೇಂದ್ರವನ್ನು ತೆರೆಯಲಾಗುತ್ತಿದ್ದು ಕೊಡ್ಲಿಪೇಟೆ, ಬೆಸೂರು, ಶನಿವಾರಸಂತೆ ಹಾಗೂ ಹಂಡ್ಲಿ ಗ್ರಾಮಗಳಲ್ಲಿ ಸಿ.ಎಸ್.ಸಿ. ಕೇಂದ್ರವನ್ನು ತೆರೆಯಲಾಗಿದ್ದು ಈ ಮೂಲಕ ಸಂಘದ ಸದಸ್ಯರು ಮತ್ತು ಸಾರ್ವಜನಿಕರಿಗೆ ಸೇವೆ ನೀಡಲಾಗುತ್ತಿದೆ ಎಂದರು.

ಶನಿವಾರಸAತೆ ವೃತ್ತ ನಿರೀಕ್ಷಕ ಪರಶಿವಮೂರ್ತಿ ಹಾಗೂ ಮದ್ಯವರ್ಜನ ಶಿಬಿರದ ಅಧ್ಯಕ್ಷ ಡಿ. ಭಗವಾನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಸಮಾರಂಭದಲ್ಲಿ ನಿವೃತ್ತ ಸೈನಿಕ ರಾಜಪ್ಪ, ಬೆಸೂರು ಗ್ರಾ.ಪಂ. ಅಧ್ಯಕ್ಷೆ ಕೀರ್ತಿ ಶಾಂತಪ್ಪ, ಕೊಡ್ಲಿಪೇಟೆ ಗ್ರಾ.ಪಂ. ಸದಸ್ಯ ಮುತ್ತಯ್ಯ, ಬ್ಯಾಡಗೊಟ್ಟ ಗ್ರಾ.ಪಂ. ಸದಸ್ಯ ಮಹಮದ್ ಹನೀಫ್, ಜನಜಾಗೃತಿ ಸಮಿತಿ ಸದಸ್ಯ ಇದ್ರೋಜಿ ರಾವ್, ವಿಎಸ್‌ಎಸ್‌ಎನ್ ನಿರ್ದೇಶಕ ಬಿ.ಕೆ. ಯತೀಶ್, ಒಕ್ಕೂಟದ ಅಧ್ಯಕ್ಷರುಗಳಾದ ಭುವನೇಶ್ವರಿ, ಸುನಂದ, ಕಾರ್ಯದರ್ಶಿ ಪಂಕಜ, ಮೇಲ್ವಿಚಾರಕ ಕೇಶವ ಪ್ರಸನ್ನ ಸೇವಾ ಪ್ರತಿನಿಧಿಗಳು ಹಾಜರಿದ್ದರು.