ಶನಿವಾರಸಂತೆ, ಫೆ. ೩: ದುಂಡಳ್ಳಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮಾ ಕಿರಣ್ ಅಧ್ಯಕ್ಷತೆಯಲ್ಲಿ ನಡೆಯಿತು.

ದುಂಡಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಡಿ.ಪಿ. ಬೋಜಪ್ಪ ಮಾತನಾಡುತ್ತಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರು ಸರಕಾರಿ ಕಾರ್ಯಕ್ರಮಗಳ ಬಗ್ಗೆ ಸದಸ್ಯರುಗಳ ಗಮನಕ್ಕೆ ತರುತ್ತಿಲ್ಲ, ಇತ್ತೀಚೆಗೆ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಪಂಚಾಯಿತಿಗೆ ಭೇಟಿ ನೀಡಿದ ಸಂದರ್ಭ ಸದಸ್ಯರುಗಳಿಗೆ ತಿಳಿಸಿಲ್ಲ. ಕಸ ವಿಲೇವಾರಿ ಘಟಕ ಕಳಪೆ ಕಾಮಗಾರಿಯಾಗಿದೆ. ಜೆ. ಯಂ. ಯು. ನೀರಿನ ವ್ಯವಸ್ಥೆ ಅವೈಜ್ಞಾನಿಕವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಂಚಾಯಿತಿ ಸದಸ್ಯರುಗಳು ಪಂಚಾಯಿತಿಗೆ ಬಂದಾಗ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಇಲ್ಲದೆ ನೌಕರರ ಮುಂದೆ ಕೈಕಟ್ಟಿ ನಿಲ್ಲುವ ಪರಿಸ್ಥಿತಿ ಉಂಟಾಗಿದೆ. ಕಾಜೂರು ಸೇತುವೆ ಕೆಳಭಾಗದಲ್ಲಿ ಮರಳು ತೆಗೆದು ಮರಳು ದಂಧೆ ನಡೆಯುತ್ತಿದೆ ಎಂದು ಆಪಾದನೆ ಮಾಡಿದರು. ವಸತಿ ಯೋಜನೆ ಅಡಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷ ಎಸ್.ಸಿ. ನಿತಿನ್, ಸದಸ್ಯರುಗಳಾದ ಕೆ.ಎಸ್. ಜಾನಕಿ, ನಂದಿನಿ ನಾಗರತ್ನ, ಎಸ್.ಪಿ. ಭಾಗ್ಯ, ಸತ್ಯವತಿ, ಪಿ.ಹೆಚ್. ಗೋಪಿಕ, ಹೆಚ್.ಆರ್. ಭವಾನಿ, ಡಿ.ಪಿ. ಭೋಜಪ್ಪ. ಎಸ್.ಸಿ. ಕಾಂತರಾಜ್, ಬಿ.ಎಸ್. ಮಹಂತೇಶ್, ಎಂ.ಡಿ. ದೇವರಾಜ್, ಸಿ.ಜೆ. ಗಿರೀಶ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ.ಪಿ. ವೇಣುಗೋಪಾಲ್ ಉಪಸ್ಥಿತರಿದ್ದರು.