ಸಿದ್ದಾಪುರ, ಫೆ. ೧: ಜಿಲ್ಲಾಡಳಿತದಿಂದ ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡಲು ಗಡುವು ನೀಡಿರುವ ನೋಟೀಸ್‌ನಿಂದಾಗಿ ಸಂತ್ರಸ್ತರು ಸಂಕಟಕ್ಕೆ ಸಿಲುಕಿಕೊಂಡಿದ್ದಾರೆ.
೨೦೧೯ರಲ್ಲಿ ಪ್ರವಾಹಕ್ಕೆ ಸಿಲುಕಿ ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನದಿ ತೀರದ ನೂರಾರು ಮನೆಗಳು ನೆಲಸಮಗೊಂಡಿತ್ತು. ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಅರೆಕಾಡು ಸಮೀಪದ ಅಭ್ಯತ್‌ಮಂಗಲ ಗ್ರಾಮದಲ್ಲಿ ಒತ್ತುವರಿದಾರರಿಂದ ಸರ್ಕಾರಿ ಭೂಮಿಯನ್ನು ವಶಪಡಿಸಿಕೊಂಡು ಮೂರು ವರ್ಷಗಳು ಕಳೆದಿವೆ. ೮ ಎಕರೆ ಒತ್ತುವರಿ ಜಾಗವನ್ನು ಜಿಲ್ಲಾಡಳಿತ ವಶಕ್ಕೆ ಪಡೆದುಕೊಂಡು ಆ ಜಾಗದಲ್ಲಿ ನೆಲ್ಲಿಹುದಿಕೇರಿ ಭಾಗದ ಸಂತ್ರಸ್ತರಿಗೆ ಪುನರ್ವಸತಿಗಾಗಿ ಜಾಗ ಗುರುತಿಸಿತ್ತು. ಅದೇ ಜಾಗದಲ್ಲಿ ಇದೀಗ ಸಂತ್ರಸ್ತರು ೧೦ ದಿನಗಳೊಳಗಾಗಿ ಮನೆಯ ನಿರ್ಮಾಣ ಆರಂಭಿಸಿ ಜಿಪಿಎಸ್ ಅನ್ನು ಮಾಡಿಸಿಕೊಳ್ಳಬೇಕೆಂದು ಜಿಲ್ಲಾಡಳಿತ ಕಂದಾಯ ಇಲಾಖೆಯ ಮುಖಾಂತರ ನೋಟೀಸ್ ಜಾರಿಗೊಳಿಸಿದೆ.
ಆದ್ದರಿಂದ ಮನೆ ಕಳೆದುಕೊಂಡಿರುವ ಸಂತ್ರಸ್ತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಸಂತ್ರಸ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಜಿಲ್ಲಾಡಳಿತ ಗುರುತಿಸಿದ ೮ ಎಕರೆ ಜಾಗದಲ್ಲಿ ಪ್ರಾರಂಭದಲ್ಲಿ ಕಾಫಿ ಗಿಡಗಳನ್ನು ತೆರವುಗೊಳಿಸಲಾಯಿತು. ನಂತರ ಅರಣ್ಯ ಇಲಾಖಾಧಿಕಾರಿಗಳು ಮೇಲಾಧಿಕಾರಿಗಳ ಅನುಮತಿಯನ್ನು
(ಮೊದಲ ಪುಟದಿಂದ) ಪಡೆದು ಆ ಜಾಗದಲ್ಲಿದ್ದ ೩೭೦ಕ್ಕೂ ಅಧಿಕ ಮರಗಳನ್ನು ಕಡಿದು ತೆರವುಗೊಳಿಸಿತ್ತು. ಆದರೆ ಪುನರ್ವಸತಿಗೆ ಗುರುತಿಸಿದ ಜಾಗದ ಬಳಿ ಗುಂಡಿಗಳು ಹಾಗೂ ನೀರು ಹರಿದು ಹೋಗುತ್ತಿರುವುದರಿಂದ ಆ ಜಾಗದಲ್ಲಿ ಸೇತುವೆ ನಿರ್ಮಾಣ ಮಾಡಬೇಕಾಗಿದೆ.
ಈ ಯೋಜನೆಗೆ ದೊಡ್ಡ ಮೊತ್ತದ ಅನುದಾನ ಬೇಕಾಗಿದೆ ಎನ್ನಲಾಗಿದೆ. ಅಲ್ಲದೇ ಈ ಹಿಂದೆ ಕಾಫಿ ಗಿಡಗಳನ್ನು ತೆರವುಗೊಳಿಸಿದ ಜಾಗದಲ್ಲಿ ಕಳೆದ ಎರಡು ವರ್ಷಗಳಿಂದ ಯಾವುದೇ ರೀತಿಯ ಕಾಮಗಾರಿಗಳನ್ನು ಮಾಡದೇ ಜಿಲ್ಲಾಡಳಿತ ನಿರ್ಲಕ್ಷö್ಯವಹಿಸಿದೆ. ಈ ಹಿನ್ನೆಲೆಯಲ್ಲಿ ಆ ಜಾಗದಲ್ಲಿ ಬೃಹತ್ ಗಾತ್ರದ ಕಾಡುಗಿಡಗಳು ಬೆಳೆದು ನಿಂತಿದೆ. ಇದಲ್ಲದೇ ಜಾಗವನ್ನು ನೆಲಸಮ ಮಾಡದೇ ಇರುವುದರಿಂದ ಸಂತ್ರಸ್ತರಿಗೆ ಕೂಡಲೇ ಮನೆ ನಿರ್ಮಾಣ ಮಾಡಲು ಅಸಾಧ್ಯವಾಗಿದೆ. ಆದರೆ, ಇದೀಗ ಜಿಲ್ಲಾಡಳಿತ ಸಂತ್ರಸ್ತರಿಗೆ ಗುರುತಿಸಿದ ಜಾಗದಲ್ಲಿ ೧೦ ದಿನಗಳ ಒಳಗಾಗಿ ಕಾಮಗಾರಿ ಆರಂಭಿಸಿ ಜಿಪಿಎಸ್ ಮಾಡಿಸಿ ಮನೆ ನಿರ್ಮಾಣ ಕಾಮಗಾರಿ ಮುಂದುವರಿಸಬೇಕೆAದು ತಪ್ಪಿದ್ದಲ್ಲಿ ಫಲಾನುಭವಿ ಆಯ್ಕೆ ಪಟ್ಟಿಯಿಂದ ಕೈಬಿಡಲಾಗುವುದೆಂದು ಏಕಾಏಕಿ ನೋಟೀಸ್ ಜಾರಿಗೊಳಿಸಿದ್ದು, ಸಂತ್ರಸ್ತರಿಗೆ ಗೊಂದಲಕ್ಕೆ ಕಾರಣವಾಗಿದೆ.
ಜಿಲ್ಲಾಡಳಿದ ವತಿಯಿಂದ ಸಂತ್ರಸ್ತರಿಗೆ ಗುರುತಿಸಿದ ಜಾಗದಲ್ಲಿ ಯಾವುದೇ ಕೆಲಸ ಕಾರ್ಯಗಳನ್ನು ಮಾಡದೇ ಕಾಡುಪಾಲಾಗಿರುವ ಜಾಗದಲ್ಲಿ ಯಾವ ರೀತಿಯಲ್ಲಿ ಅಡಿಪಾಯ ಹಾಕಿ ಮನೆ ನಿರ್ಮಾಣ ಮಾಡುವುದು ಎಂಬ ಯಕ್ಷಪ್ರಶ್ನೆ ಮೂಡಿದೆ. ಈಗಾಗಲೇ ಮನೆ ಕಳೆದುಕೊಂಡಿರುವ ಸಂತ್ರಸ್ತರು ಬಹುತೇಕ ಮಂದಿ ನದಿ ತೀರದಲ್ಲಿ ಶೆಡ್ ನಿರ್ಮಿಸಿಕೊಂಡು ತಮ್ಮ ಸಂಸಾರದೊAದಿಗೆ ವಾಸ ಮಾಡಿಕೊಂಡಿದ್ದಾರೆ. ಇದೀಗ ಮತ್ತೆ ಮುಂದಿನ ಮೂರು ನಾಲ್ಕು ತಿಂಗಳಲ್ಲಿ ಮಳೆಗಾಲ ಪ್ರಾರಂಭವಾಗುತ್ತಿದ್ದು, ಮತ್ತಷ್ಟು ಆತಂಕ ಸೃಷ್ಟಿಸಿದೆ. ಕೂಡಲೇ ಈ ಬಗ್ಗೆ ಜಿಲ್ಲಾಡಳಿತ ಜಾಗ ಪರಿಶೀಲಿಸಿ ಸಂತ್ರಸ್ತರಿಗೆ ಗುರುತಿಸಿದ ಜಾಗದಲ್ಲಿ ವ್ಯವಸ್ಥೆ ಕಲ್ಪಿಸಿ ಪುನರ್ವಸತಿ ನಿರ್ಮಾಣಕ್ಕೆ ಸಹಕಾರ ನೀಡಬೇಕೆಂದು ಸಂತ್ರಸ್ತರು ಮನವಿ ಮಾಡಿಕೊಂಡಿದ್ದಾರೆ.
- ವಾಸು ಎ.ಎನ್.