ಸೋಮವಾರಪೇಟೆ, ಫೆ. ೧: ರಾಯಚೂರಿನಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ನ್ಯಾಯಾಧೀಶರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರವನ್ನು ತೆರವುಗೊಳಿಸುವಂತೆ ಸೂಚಿಸುವ ಮೂಲಕ ಸಂವಿಧಾನ ಶಿಲ್ಪಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಕೊಡಗು ಜಿಲ್ಲಾ ದಲಿತ ಹಿತರಕ್ಷಣಾ ಒಕ್ಕೂಟದಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.

ಅಂಬೇಡ್ಕರ್ ಭವನದಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನ್ಯಾಯಾಧೀಶರ ವಿರುದ್ಧ ಘೋಷಣೆಗಳನ್ನು ಕೂಗಿ ತಾಲೂಕು ಆಡಳಿತ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಕೂಡಲೇ ಅವರ ಸ್ಥಾನದಿಂದ ವಜಾಗೊಳಿಸಿ, ಸೂಕ್ತ ಕ್ರಮಕೈಕೊಳ್ಳಬೇಕೆಂದು ಆಗ್ರಹಿಸಿ ತಹಶೀಲ್ದಾರ್ ಗೋವಿಂದರಾಜು ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಸಮಿತಿ ಅಧ್ಯಕ್ಷ ಡಿ.ಎಸ್. ನಿರ್ವಾಣಪ್ಪ, ಉಪಾಧ್ಯಕ್ಷರಾದ ಹೆಚ್.ಬಿ. ಜಯಮ್ಮ, ಹೆಚ್.ಎಂ. ಸೋಮಪ್ಪ, ಎಂ.ಪಿ. ಹೊನ್ನಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಈ. ಜಯೇಂದ್ರ, ಸಹ ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಹೆಚ್.ಎ. ನಾಗರಾಜು, ನಿರ್ದೇಶಕರಾದ ರಾಮಕೃಷ್ಣ, ಹೆಚ್.ಬಿ. ರಾಜಪ್ಪ, ಗಣೇಶ್ ಸೇರಿದಂತೆ ಇತರರು ಪ್ರತಿಭಟನೆಯಲ್ಲಿದ್ದರು.