ಚೆಯ್ಯಂಡಾಣೆ, ಫೆ. ೧: ಎಡಪಾಲದ ಅಂಡತ್ ಮಾನಿ ದರ್ಗಾದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಔಲಿಯಾತ್ರಯರ ಹೆಸರಿನಲ್ಲಿ ವರ್ಷಂಪ್ರತಿ ನಡೆಸುವ ಉರೂಸ್ ಕಾರ್ಯಕ್ರಮ ನಡೆಯಿತು.

ಸೋಮವಾರ ನಡೆದ ಸಾರ್ವಜನಿಕ ಸಮ್ಮೇಳನದ ಅಧ್ಯಕ್ಷತೆಯನ್ನು ಸ್ಥಳೀಯ ಪೊಯಾಪಳ್ಳಿ ಜಮಾಅತ್ ಅಧ್ಯಕ್ಷ ಕೆ.ಯು. ಶಾಫಿ ವಹಿಸಿ ಮಾತನಾಡಿ, ಸರ್ವಧರ್ಮದ ಸೌಹಾರ್ದತೆ ಸಾರುವ ಉರೂಸ್ ಇದಾಗಿದ್ದು. ಇಲ್ಲಿ ಯಾವುದೇ ತಾರತಮ್ಯವಿಲ್ಲದೆ ಸರ್ವರೂ ಒಂದಾಗಿ ಉರೂಸ್ ಆಚರಿಸುತ್ತಿದ್ದು ಇಲ್ಲಿನ ವಿಶೇಷವೆಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಎಡಪಾಲ ಅಂಡತ್ ಮಾನಿ ಉರೂಸ್ ಶಾಂತಿ ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ಇಲ್ಲಿ ಎಲ್ಲ ಜಾತಿ ಧರ್ಮದ ಜನರು ಸೇರುತ್ತಿರುವುದು ಎಲ್ಲರೂ ಒಗ್ಗಟ್ಟು ಪ್ರದರ್ಶಿಸುತ್ತಿರುವುದನ್ನು ಶ್ಲಾಘಿಸಿದರು.

ನಾಪೋಕ್ಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಮಾತನಾಡಿದರು. ಶಾಫಿ ಜುಮಾ ಮಸೀದಿ ವೀರಾಜಪೇಟೆಯ ಧರ್ಮಗುರು ರೌಫ್ ಹುದವಿ, ವಿಶ್ವಶಾಂತಿ ಸೌಹಾರ್ದತೆ ಸಾರುವ ಪ್ರತ್ಯೇಕತೆ ಈ ಉರೂಸ್‌ನಲ್ಲಿದ್ದು, ಮಕ್ಕಳಿಗೆ ಮೊದಲ ಪಾಠ ಶಾಲೆ ಮನೆಯಾಗಿದ್ದು, ಮನೆಯಲ್ಲಿ ಮಕ್ಕಳಿಗೆ ಶಿಸ್ತು ನಡವಳಿಕೆ ಕಲಿಸಿದರೆ ಮಕ್ಕಳು ಉತ್ತಮ ಪ್ರಜೆಗಳಾಗಿ ಬಾಳಲು ಸಹಕಾರಿಯಾಗಲಿದೆ. ತಂದೆ-ತಾಯಿಗಳು ಮಕ್ಕಳ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕೆ.ವೈ. ಹಮೀದ್ ಸಬ್ ಇನ್ಸ್ಪೆಕ್ಟರ್, ಕೆ.ಎಂ. ಉಮ್ಮರ್, ಕೆ.ಪಿ. ಅಬ್ದುಲ್ಲ ಹಾಜಿ, ಕೆ.ಎಂ. ಉಮ್ಮರ್ ಮಾಸ್ಟರ್, ವೈ.ಎಂ. ಮೊಯ್ದು ಹಾಜಿ, ಪಿ.ಇ. ಅಬ್ದುಲ್ ಖಾದರ್ ಹಾಜಿ ಅವರುಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಕೊಡಗಿನ ನಾಯಿಬ್ ಖಾಝಿ ಅಬ್ದುಲ್ಲ ಫೈಝಿ, ಎಡಪಾಲ ಮುದರ್ರಿಸ್ ನಿಝರ್ ಫೈಝಿ, ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಅಚ್ಚಯ್ಯ, ಸದಸ್ಯ ಕೋಡಿರ ವಿನೋದ್ ನಾಣಯ್ಯ, ಝುಬೈರ್, ಮಮ್ಮದ್, ಮಾಜಿ ಅಧ್ಯಕ್ಷ ಹಂಝ, ಬಷೀರ್, ಮೊಹಮ್ಮದ್ ಹಾಜಿ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಸಿ.ಆರ್.ಪಿ. ಉಮ್ಮರ್, ನಿವೃತ್ತ ಸಬ್ ಇನ್ಸ್ಪೆಕ್ಟರ್ ಕೆ.ಎಂ. ಹಂಸ, ಕಡಂಗ ಜುಮಾ ಮಸೀದಿ ಅಧ್ಯಕ್ಷ ಕುಂಞ ಅಬ್ದುಲ್ಲ ಉಪಸ್ಥಿತರಿದ್ದರು. ಸ್ವಾಗತವನ್ನು ಕೆ.ಎ. ಅಬೂಬಕ್ಕರ್ ಮುಸ್ಲಿಯಾರ್ ಹಾಗೂ ಕಾರ್ಯದರ್ಶಿ ಕೆ.ಎಂ. ಹಮೀದ್ ವಂದಿಸಿದರು. ಅಬೂಬಕ್ಕರ್ ಸಿದ್ದಿಕ್ ಬಾಖವಿ ನಿರೂಪಿಸಿದರು.