ಸಿದ್ದಾಪುರ, ಫೆ. ೨: ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯ ತಂಡವನ್ನು ಕಾಡಾನೆಗಳು ಸುತ್ತಾಡಿಸಿ ಸುಸ್ತಾಗುವಂತೆ ಮಾಡಿ ಕಾರ್ಯಾಚರಣೆ ಯನ್ನು ವಿಫಲಗೊಳಿಸಿದ ಘಟನೆ ಅಮ್ಮತ್ತಿ ಶಾಖೆಯ ನಲ್ವತ್ತೋಕ್ಲು ಬಿಳುಗುಂದ ಹೊಸಕೋಟೆ ಗ್ರಾಮಗಳಲ್ಲಿ ನಡೆದಿದೆ.

ವೀರಾಜಪೇಟೆ ಅರಣ್ಯ ವಲಯದ ಅಮ್ಮತ್ತಿ ಶಾಖೆಯ ವ್ಯಾಪ್ತಿಗೆ ಒಳಪಡುವ ನಲ್ವತ್ತೋಕ್ಲು, ಬಿಳುಗುಂದ, ಹೊಸಕೋಟೆ, ಕೆ. ಬೈಗೋಡು ಗ್ರಾಮ ಗಳ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡುಬಿಟ್ಟು ದಾಂಧಲೆ ನಡೆಸುತ್ತಿದ್ದವು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕಾಡಾನೆಗಳ ಹಾವಳಿಯನ್ನು ತಡೆಗಟ್ಟ ಬೇಕೆಂದು ಅರಣ್ಯ ಇಲಾಖಾಧಿಕಾರಿ ಗಳಿಗೆ ದೂರು ನೀಡಿದ ಮೇರೆಗೆ ಬುಧವಾರದಂದು ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

ಈ ಸಂದರ್ಭ ಕಾಫಿ ತೋಟಗಳಲ್ಲಿ ಹಾಗೂ ಕಾಫಿ ತೋಟಗಳ ಬಳಿ ಇರುವ ಕಾಡಿನಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಪ್ರಯತ್ನಿಸಿದಾಗ ಕಾಡಾನೆಗಳು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಓಡುತ್ತಾ ಕಾಫಿ ತೋಟಗಳಲ್ಲಿ ಸಿಬ್ಬಂದಿಗಳನ್ನು ಸುತ್ತಾಡಿಸಿದವು ಎಂದು ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೆ ಕಾಡಾನೆಗಳನ್ನು ಓಡಿಸುವ ಸಂದರ್ಭ ಕೆಲವು ಕಾಡಾನೆಗಳು ಕಾರ್ಯಾಚರಣೆ ತಂಡದ ಸಿಬ್ಬಂದಿಗಳನ್ನೇ ಬೆನ್ನಟ್ಟಿದ ಘಟನೆಯೂ ನಡೆಯಿತು. ಕಾಫಿ ತೋಟಗಳ ಬಳಿ ಇರುವ ಕಾಡಿನಿಂದ ಕಾಡಾನೆಗಳು ತೆರಳಲು ಹಿಂದೇಟು ಹಾಕುತ್ತಿದ್ದವು ಎಂದು ಸಿಬ್ಬಂದಿಗಳು ತಿಳಿಸಿದರು.

ಕೆಲವು ಕಾಡಾನೆಗಳು ಅರಣ್ಯದತ್ತ ತೆರಳಿದರೂ ಕೂಡ ನಂತರ ರಾತ್ರಿ ಸಮಯದಲ್ಲಿ ಹಿಂತಿರುಗಿ ತೋಟಗಳಿಗೆ ಲಗ್ಗೆ ಇಡುತ್ತಿವೆ. ಇದರಿಂದಾಗಿ ಅರಣ್ಯ ಇಲಾಖಾಧಿಕಾರಿಗಳಿಗೆ ಸಮಸ್ಯೆ ಯಾಗುತ್ತಿದೆ. ವೀರಾಜಪೇಟೆ ಡಿಸಿಎಫ್ ಚಕ್ರಪಾಣಿ, ಎಸಿಎಫ್ ರೋಶ್ನಿ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಕೆ.ಪಿ. ದೇವಯ್ಯ, ಉಪ ವಲಯ ಅರಣ್ಯಾಧಿಕಾರಿ ಸಂಜೀತ್ ಸೋಮಯ್ಯ ನೇತೃತ್ವದಲ್ಲಿ ಸಿಬ್ಬಂದಿಗಳು, ಆರ್‌ಆರ್‌ಟಿ ತಂಡದ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

-ವಾಸು