ಸೋಮವಾರಪೇಟೆ,ಜ.೨೯: ನಗರೋತ್ಥಾನ ಯೋಜನೆಯಡಿ ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ ೫ ಕೋಟಿ ಅನುದಾನ ಬಿಡುಗಡೆಯಾಗಿದ್ದು, ನಿಯಮಾನು ಸಾರವಾಗಿ ಕ್ರಿಯಾಯೋಜನೆ ತಯಾರಿಸುವಂತೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು ಅಧ್ಯಕ್ಷತೆಯಲ್ಲಿ ಪ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಭಾಗಿಯಾಗಿದ್ದ ಶಾಸಕರು, ೫ ಕೋಟಿ ಅನುದಾನಕ್ಕೆ ಕ್ರಿಯಾಯೋಜನೆ ತಯಾರಿಸುವಂತೆ ಅಭಿಯಂತರ ಹೇಮಕುಮಾರ್ ಅವರಿಗೆ ಸೂಚಿಸಿದರಲ್ಲದೆ, ಮೂಲಭೂತ ಸೌಕರ್ಯಗಳೊಂದಿಗೆ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡುವಂತೆ ಸಲಹೆ ನೀಡಿದರು.

ಉದ್ದೇಶಿತ ಯೋಜನೆಯಡಿ ಪ್ರಥಮ ಹಂತದಲ್ಲಿ ಶೇ.೮೫ರಷ್ಟು ಕಾಮಗಾರಿಗಳಿಗೆ ಅನುಮೋದನೆ ಲಭಿಸಲಿದೆ. ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಿದರೆ ಮಾತ್ರ ಉಳಿದ ಶೇ.೧೫ ರಷ್ಟು ಅನುದಾನ ಬಿಡುಗಡೆಯಾಗಲಿದೆ. ಪರಿಶಿಷ್ಟ ಜಾತಿ, ಪಂಗಡದ ಅಭಿವೃದ್ಧಿಗೆ ಅನುದಾನ ಮೀಸಲಿಡಬೇಕಿದೆ ಎಂದು ಅಭಿಯಂತರರು ಸಭೆಯ ಗಮನಕ್ಕೆ ತಂದರು. ಪಟ್ಟಣದ ತ್ಯಾಜ್ಯ ವಿಲೇವಾರಿ ಸಮಸ್ಯೆ ಇಂದಿಗೂ ಬಗೆಹರಿದಿಲ್ಲ. ಮುಂದಿನ ೧ ತಿಂಗಳೊಳಗೆ ಈ ಸಮಸ್ಯೆ ಬಗೆಹರಿಸಬೇಕು ಎಂದು ಮುಖ್ಯಾಧಿಕಾರಿ ನಾಚಪ್ಪ ಅವರಿಗೆ ಸೂಚನೆ ನೀಡಿದರು.

ಬಾಡಿಗೆ ಪಾವತಿಸದ ವರ್ತಕರು: ಪಟ್ಟಣ ಪಂಚಾಯಿತಿಯ ಅಂಗಡಿ ಮಳಿಗೆಗಳನ್ನು ಬಾಡಿಗೆ ಪಡೆದು ಕೊಂಡಿರುವ ಹಲವಷ್ಟು ಮಂದಿ ಪಂಚಾಯಿತಿಗೆ ಬಾಡಿಗೆ ಕಟ್ಟುತ್ತಿಲ್ಲ. ಲಕ್ಷಾಂತರ ರೂಪಾಯಿ ಬಾಡಿಗೆ ಬಾಕಿಯಿದೆ ಎಂಬ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು. ಬಾಡಿಗೆಯನ್ನು ಕಟ್ಟುನಿಟ್ಟಾಗಿ ವಸೂಲಿ ಮಾಡ ಬೇಕೆಂದು ಶಾಸಕರು ಸೂಚಿಸಿದರು.

ಈ ಸಂದರ್ಭ ಮಾತನಾಡಿದ ಉಪಾಧ್ಯಕ್ಷ ಬಿ. ಸಂಜೀವ ಅವರು, ಸಿ.ಕೆ. ಸುಬ್ಬಯ್ಯ ರಸ್ತೆಯ ವಾಣಿಜ್ಯ ಸಂಕೀರ್ಣದಲ್ಲಿರುವ ವರ್ತಕ ರೋರ್ವರು ಬಾಡಿಗೆ ಕೇಳಲು ಹೋದರೆ ನಾವು ಶಾಸಕರ ಆಪ್ತರು ಎಂದು ಸಿಬ್ಬಂದಿಗಳಿಗೆ ಧಮಕಿ ಹಾಕುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಬಾಡಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಪಂಚಾಯಿತಿ ಸಿಬ್ಬಂದಿಗಳೂ ದನಿಗೂಡಿಸಿದರು.

‘ನನ್ನ ಹೆಸರನ್ನು ಯಾರೂ ದುರುಪಯೋಗ ಪಡಿಸಿಕೊಳ್ಳುವುದು ಬೇಡ. ಬಾಡಿಗೆ ಪಾವತಿಸದ ಅಂಗಡಿಗಳಿಗೆ ಯಾವುದೇ ಮುಲಾಜಿಲ್ಲದೇ ಬೀಗ ಜಡಿಯಿರಿ. ಬಾಡಿಗೆ ವಸೂಲಾತಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ’ ಎಂದು ರಂಜನ್ ಹೇಳಿದರು.

(ಮೊದಲ ಪುಟದಿಂದ)

ಮಾರ್ಕೆಟ್ ಏರಿಯಾ ತೆರವಿಗೆ ಚರ್ಚೆ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಾರುಕಟ್ಟೆ ಏರಿಯಾವನ್ನು ತೆರವುಗೊಳಿಸಿ ವಾಹನ ನಿಲುಗಡೆ ವ್ಯವಸ್ಥೆ ಸೇರಿದಂತೆ ಇನ್ನಿತರ ಉದ್ದೇಶಗಳಿಗೆ ಬಳಸಿಕೊಳ್ಳುವ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.

ಮಾರ್ಕೆಟ್ ಏರಿಯಾದಲ್ಲಿ ಕಳೆದ ಅನೇಕ ವರ್ಷಗಳಿಂದ ಅಂಗಡಿ ಮುಂಗಟ್ಟುಗಳನ್ನು ನಿರ್ಮಿಸಿಕೊಂಡು ಬಾಡಿಗೆ ನೀಡಲಾಗಿದೆ. ಇದರಿಂದಾಗಿ ಪ.ಪಂ.ಗೆ ಆದಾಯ ಬರುತ್ತಿಲ್ಲ. ನಾಲ್ಕೆöÊದು ಮಂದಿಗೆ ಮಾತ್ರ ಜಾಗದ ದಾಖಲಾತಿಗಳಿದ್ದು, ೩೦ಕ್ಕೂ ಅಧಿಕ ಅಂಗಡಿಗಳು ಅನಧಿಕೃತವಾಗಿವೆ. ಇದನ್ನು ಸರ್ವೆ ನಡೆಸಿ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಬೇಕು. ದಾಖಲಾತಿ ಇರುವ ಮಂದಿಗೆ ಪಂಚಾಯಿತಿಯಿAದ ವ್ಯವಸ್ಥೆ ಮಾಡಬೇಕು ಎಂದು ಸಭೆಯಲ್ಲಿ ಚರ್ಚಿಸಲಾಯಿತು.

ಮಾರ್ಕೆಟ್ ಏರಿಯಾವನ್ನು ಏಕಾಏಕಿ ಸ್ಥಳಾಂತರಿಸಬಾರದು. ಈಗಾಗಲೇ ವಹಿವಾಟು ನಡೆಸುತ್ತಿರುವ ಮಂದಿಗೆ ಕಾಲಾವಕಾಶ ನೀಡಬೇಕು ಎಂದು ಸದಸ್ಯರಾದ ಸಂಜೀವ, ಶೀಲಾ ಡಿಸೋಜ, ವೆಂಕಟೇಶ್ ಸೇರಿದಂತೆ ಇತರರು ಸಲಹೆ ನೀಡಿದರು.

ಕಳೆದ ೨೦೧೫ರಿಂದಲೂ ಈ ಪ್ರಕ್ರಿಯೆ ನಡೆಯುತ್ತಿದೆ. ಪರ್ಯಾಯ ಜಾಗ ನೋಡಿಕೊಳ್ಳುವಂತೆ ತಿಳಿಸಲಾಗಿದೆ. ಪಟ್ಟಣದಲ್ಲಿ ಪಾರ್ಕಿಂಗ್ ಸಮಸ್ಯೆ ಹೆಚ್ಚಿದೆ. ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಎಲ್ಲರೂ ಸಹಕಾರ ನೀಡಬೇಕು ಎಂದು ಅಧ್ಯಕ್ಷ ಪಿ.ಕೆ. ಚಂದ್ರು ಮನವಿ ಮಾಡಿದರು. ಸ್ವಂತ ಜಾಗ ಹೊಂದಿರುವವರನ್ನು ಪಟ್ಟಿಮಾಡಿ, ಅನಧಿಕೃತವಾಗಿ ಕಟ್ಟಡ ಕಟ್ಟಿಕೊಂಡಿದ್ದರೆ ತೆರವುಗೊಳಿಸಲು ಕ್ರಮ ಕೈಗೊಳ್ಳಿ. ಪರ್ಯಾಯ ವ್ಯವಸ್ಥೆಯ ಬಗ್ಗೆಯೂ ಗಮನಹರಿಸಿ ಎಂದು ಶಾಸಕರು ಸೂಚಿಸಿದರು.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರೀಕ್ಷೆಯಂತೆ ಕೆಲಸ ನಡೆಯುತ್ತಿಲ್ಲ. ರಸ್ತೆ ಬದಿಯ ಚರಂಡಿ ನಿರ್ವಹಣೆ, ಮಣ್ಣುಗುಡ್ಡೆಗಳ ತೆರವಿಗೆ ಪಂಚಾಯಿತಿಯಿAದ ೨.೬೦ ಲಕ್ಷ ಅನುದಾನ ನೀಡಿದ್ದು, ಗುತ್ತಿಗೆದಾರರು ಒಂದೆರಡು ವಾರ್ಡ್ಗಳಲ್ಲಿ ಮಾತ್ರ ಕೆಲಸ ಮಾಡಿದ್ದಾರೆ ಎಂದು ಉಪಾಧ್ಯಕ್ಷ ಸಂಜೀವ ಆರೋಪಿಸಿದರು.

ಪಂಚಾಯಿತಿಗೆ ಸೇರಿದ ಮಳಿಗೆಗಳನ್ನು ಕೆಲವರು ಅನಧಿಕೃತವಾಗಿ ಬಳಸಿಕೊಂಡಿದ್ದಾರೆ. ಹೊಸ ಬಡಾವಣೆಯಲ್ಲಿ ನಿವೇಶನ ಹಾಗೂ ಮನೆ ಪಡೆದ ಕೆಲವರು ಅದನ್ನು ೯೯ ವರ್ಷಗಳ ಭೋಗ್ಯಕ್ಕೆ ಬೇರೆಯವರಿಗೆ ನೀಡಿದ್ದಾರೆ ಇದರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಶೀಲಾ ಡಿಸೋಜ ಒತ್ತಾಯಿಸಿದರು.

ಪಟ್ಟಣ ವ್ಯಾಪ್ತಿಯಲ್ಲಿ ವಿದ್ಯುತ್ ದೀಪಗಳ ಸಮಸ್ಯೆಯಿದೆ ಎಂದು ಜಯಂತಿ ಶಿವಕುಮಾರ್ ಸಭೆಯ ಗಮನ ಸೆಳೆದರು. ಕರ್ಕಳ್ಳಿ ಸ್ಮಶಾನದ ಬಳಿಯಲ್ಲಿ ೫ ಏಕರೆಯಷ್ಟು ಜಾಗ ಒತ್ತುವರಿಯಾಗಿದೆ. ಇದರ ಸರ್ವೆ ನಡೆಸಲು ಪತ್ರಬರೆಯಲಾಗಿದೆ. ಒತ್ತುವರಿ ತೆರವುಗೊಳಿಸಿ ನಿವೇಶನ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಹೇಳಿದರು.

ಪಟ್ಟಣದ ನೀರು ಸರಬರಾಜು ಜಾಲವು ಹಳೆಯದಾಗಿದ್ದು, ದಿನದ ೨೪ ಗಂಟೆಯೂ ನೀರು ಸರಬರಾಜು ಮಾಡಲು ವಿಸ್ತೃತ ಯೋಜನಾ ವರದಿ ತಯಾರಿಸಿ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಯಿತು.

ದುದ್ದುಗಲ್ಲು ಹಾಗೂ ಹಾರಂಗಿ ನೀರು ಸರಬರಾಜು ಕೇಂದ್ರಕ್ಕೆ ಹೊಸದಾಗಿ ಮೋಟಾರ್ ಪಂಪ್ ಖರೀದಿ, ಪಂಪ್ ಹೌಸ್ ಸುತ್ತಲೂ ಮೆಶ್ ಅಳವಡಿಕೆ, ಎಲ್ಲಾ ವಾರ್ಡ್ಗಳಲ್ಲಿ ನಾಮಫಲಕ ಅಳವಡಿಕೆ ಮಾಡುವುದು, ಪಟ್ಟಣ ಪಂಚಾಯಿತಿಗೆ ಉಚ್ಚ ನ್ಯಾಯಾಲಯದಲ್ಲಿ ವಕೀಲರನ್ನು ನೇಮಿಸಲು ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಸದಸ್ಯರಾದ ಮೃತ್ಯುಂಜಯ, ಶುಭಕರ್, ನಾಗರತ್ನ, ಮೋಹಿನಿ, ಜೀವನ್, ಬಿ.ಆರ್. ಮಹೇಶ್, ನಾಮ ನಿರ್ದೇಶನ ಸದಸ್ಯರಾದ ಸೋಮೇಶ್, ಶರತ್‌ಚಂದ್ರ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.