ಮಡಿಕೇರಿ, ಜ. ೨೯: ನಿಶಾನೆ ಮೊಟ್ಟೆಯಲ್ಲಿ ಅಕ್ರಮವಾಗಿ ಹರಳು ಕಲ್ಲು ಗಣಿಗಾರಿಕೆ ನಡೆಯುತ್ತಿರುವದು ಬೆಳಕಿಗೆ ಬಂದು ಒಂದು ತಿಂಗಳಾಗುತ್ತಾ ಬಂದಿದೆ. ಕರ್ತವ್ಯ ಲೋಪದಡಿ ಈರ್ವರು ಅರಣ್ಯ ಇಲಾಖಾ ಸಿಬ್ಬಂದಿಗಳನ್ನು ಸೇವೆಯಿಂದ ಅಮಾನತ್ತು ಗೊಳಿಸಲಾಗಿದೆ. ಆರೋಪಿಗಳ ಬಗ್ಗೆ ಸುಳಿವಿದ್ದರೂ ಇನ್ನೂ ಕೂಡ ಯಾರ ಮೇಲೆಯೂ ಕ್ರಮ ಜರುಗಿಸಲಾಗಿಲ್ಲ., ಆರೋಪಿಗಳನ್ನು ಪತ್ತೆ ಹಚ್ಚುವ ಸಂಬAಧ ಸಾಕ್ಷಿ ಸಂಗ್ರಹಕ್ಕೆ ಅರಣ್ಯ ಇಲಾಖಾ ಅಧಿಕಾರಿಗಳು ಆಗಮಿಸಲಿದ್ದಾರೆ ಎಂದು ತಿಳಿದ ಕೂಡಲೇ ಸ್ಥಳೀಯ ಮೂರು, ನಾಲ್ಕು ಮಂದಿ ಮನೆ ಬಿಟ್ಟು ಬೇರೆಡೆಗಳಲ್ಲಿ ಅವಿತಿದ್ದುದು ಮತ್ತೆ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ..!

ಪಟ್ಟಿಘಾಟ್ ಮೀಸಲು ಅರಣ್ಯ ಪ್ರದೇಶದ ನಿಶಾನೆ ಮೊಟ್ಟೆಯಲ್ಲಿನ ಅರಣ್ಯ ಕ್ಯಾಂಪ್ ಬಳಿಯಲ್ಲೇ ಅಕ್ರಮ ಗಣಿಗಾರಿಕೆ ನಡೆದಿದ್ದು, ಈ ಸಂಬAಧ ಗಣಿಗಾರಿಕೆ ನಡೆದ ಸ್ಥಳವನ್ನು ಪತ್ತೆ ಹಚ್ಚಿದ ಅರಣ್ಯ ಸಂಚಾರಿ ದಳದವರು ಸಲ್ಲಿಸಿದ ವರದಿ ಆಧಾರದಲ್ಲಿ ವಿಚಾರಣೆ ನಡೆಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಉಪ ವಲಯ ಅರಣ್ಯಾಧಿಕಾರಿ ಹಾಗೂ ರಕ್ಷಕನನ್ನು ಅಮಾನತ್ತುಗೊಳಿಸಿದ್ದರು. ನಂತರ ದೊರೆತ ಮಾಹಿತಿ ಆಧಾರದಲ್ಲಿ ಆರೋಪಿಗಳ ಬಗ್ಗೆ ಮಾಹಿತಿ ಹಾಗೂ ಸಾಕ್ಷಿ ಸಂಗ್ರಹಣೆಗಾಗಿ ಭಾಗಮಂಡಲಕ್ಕೆ ತೆರಳಲು ಅಣಿಯಾಗಿದ್ದರು. ಈ ವಿಚಾರ ತಿಳಿದ ಈ ಹಿಂದೆ ದಂಧೆಯಲ್ಲಿ ಭಾಗಿಯಾಗಿದ್ದವರು, ಈಗಿನ ದಂಧೆಯಲ್ಲೂ ಹೆಸರು ಕೇಳಿ ಬರುತ್ತಿರುವವರು ೨-೩ ದಿನಗಳ ಕಾಲ ತಮ್ಮ ಮನೆ ಬಿಟ್ಟು ಬೇರೆಡೆಗಳಲ್ಲಿ ಅವಿತಿದ್ದರು. ತಣ್ಣಿಮಾನಿಯಿಂದ ಬಿಟ್ಟು ಕೋರಂಗಾಲದಲ್ಲಿ ಇದ್ದರೆಂಬದು ತಡವಾಗಿ ಬಹಿರಂಗಗೊAಡಿದೆ..! ಆರೋಪಿಗಳು ಯಾರೆಂದು ಇನ್ನೂ ಕೂಡ ಪತ್ತೆ ಹಚ್ಚಲಾಗಿಲ್ಲ; ಆದರೂ ‘ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ಕೊಂಡ’ ಎಂಬAತೆ ಇವರುಗಳು ಅವಿತ್ತಿದ್ದೇಕೆ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ..!

ತನಿಖೆ ನಡೆಯುತ್ತಿದೆ..!

ಹರಳು ಕಲ್ಲು ದಂಧೆ ಪ್ರಕರಣಕ್ಕೆ ಸಂಬAಧಿಸಿದAತೆ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಅರಣ್ಯ ರಕ್ಷಕ ಸಚಿನ್ ಪೋಲೂರು ಹಾಗೂ ತೊಡಿಕಾನ ಉಪ ವಿಭಾಗ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಹೆಚ್. ಮೂರ್ತಿ ಅವರುಗಳನ್ನು ಅಮಾನತ್ತು ಗೊಳಿಸಲಾಗಿದೆ. ಪ್ರಕರಣದ ಬಗ್ಗೆ ಮೊಕದ್ದಮೆ ದಾಖಲಿಸಲಾಗಿದೆ. ಆರೋಪಿಗಳು ಪತ್ತೆಯಾಗಿರುವದಿಲ್ಲ, ಈ ಬಗ್ಗೆ ತನಿಖೆ ನಡೆಯುತ್ತಿದೆ. ಸಾಬೀತಾದ ಕೂಡಲೇ ಅಂತಹವರ ಮೇಲೆ ಕ್ರಮ ಕೈಗೊಳ್ಳಲಾಗುವದು ಎಂದು ಭಾಗಮಂಡಲ ವಲಯ ಅರಣ್ಯಾಧಿಕಾರಿ ದೇವರಾಜು ಮಾಹಿತಿ ನೀಡಿದ್ದಾರೆ.

? ಸಂತೋಷ್, ಸುನಿಲ್