ಮಡಿಕೇರಿ, ಜ. ೨೭ : ೨೦೧೮ ರಲ್ಲಿ ಭೂಕುಸಿತವುಂಟಾದ ಸಂದರ್ಭ ಮನೆಗಳನ್ನು ಕಳೆದುಕೊಂಡು ಸಂತ್ರಸ್ತರಾದವರಿಗಾಗಿ ಮಾದಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಂಬೂರುವಿನಲ್ಲಿ ನಿರ್ಮಿಸಲಾಗಿರುವ ಫೀ. ಮಾ. ಕಾರ್ಯಪ್ಪ ಬಡಾವಣೆಯಲ್ಲಿರುವ ಮನೆಗಳ ಬಾಗಿಲು ಹಾಗೂ ಗೋಡೆಗಳಿಗೆ ಮರು ಬಣ್ಣ ಬಳಿಯುವ ಕಾರ್ಯ ಸಾಗಿದೆ.
ಜಂಬೂರು ನಿರಾಶ್ರಿತರ ಬಡಾವಣೆಯಲ್ಲಿನ ಸಮಸ್ಯೆಗಳ ಬಗ್ಗೆ ‘ಶಕ್ತಿ’ ಬೆಳಕು ಚೆಲ್ಲಿದ ಬೆನ್ನಲ್ಲೇ ಸ್ಪಂದಿಸಿದ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಬಡಾವಣೆಗೆ ಭೇಟಿ ನೀಡಿದ ರಾಜೀವ್ಗಾಂಧಿ ವಸತಿ ನಿಗಮದ ಯೋಜನಾ ನಿರ್ದೇಶಕರು, ಪರಿಶೀಲನೆ ಮಾಡಿ ಕೆಲವೊಂದು ಕ್ರಮ ಕೈಗೊಂಡಿದ್ದಾರೆ. ಬಡಾವಣೆಯ ಉಸ್ತುವಾರಿಯಾಗಿದ್ದ ಅಭಿಯಂತರ ರಾಜಣ್ಣ ಅವರನ್ನು ಬಿಡುಗಡೆಗೊಳಿಸಿ, ಬಡಾವಣೆಯ ಖಾಲಿ ಇರುವ ಮನೆಯಲ್ಲಿ ಕಚೇರಿ ತೆರೆದು ಚಂದನ್ ಎಂಬವರನ್ನು ನಿಯೋಜಿಸಲಾಗಿದೆ. ಇದೀಗ ಕಚೇರಿಗೆ ಬರುತ್ತಿರುವ ದೂರುಗಳನ್ನು ದಾಖಲಿಸಿಕೊಳ್ಳುತ್ತಿರುವ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುತ್ತಿರುವದಾಗಿ ಬಡಾವಣೆಯ ನಿವಾಸಿಗಳು ಹೇಳುತ್ತಾರೆ. ಈಗಾಗಲೇ ಬಣ್ಣ ಮಾಸಿ ಹೋಗಿ ಬಿರುಕುಗಳಾಗಿರುವ ಬಡಾವಣೆಯ ಮನೆಗಳ ಬಾಗಿಲುಗಳಿಗೆ ಹಾಗೂ ಮಳೆ ನೀರು ಸೋರಿಕೆಯಿಂದಾಗಿ ಕಲೆಗಳಾಗಿರುವ ಗೋಡೆಗಳಿಗೆ ಬಣ್ಣ ಬಳಿಯುವ ಕಾರ್ಯ ನಡೆಯುತ್ತಿದೆ. ಕಿತ್ತು ಹೋಗಿರುವ ಟೈಲ್ಸ್ಗಳನ್ನು ಮರು ಜೋಡಿಸುವ ಸಲುವಾಗಿ ಟೈಲ್ಸ್ ಹಾಗೂ ಇತರ ಸಾಮಗ್ರಿಗಳನ್ನು ತರಿಸಿ ದಾಸ್ತಾನಿಡಲಾಗಿದೆ.