*ಸಿದ್ದಾಪುರ, ಜ. ೨೭ : ಮಾಲ್ದಾರೆ ಗ್ರಾ.ಪಂ ವ್ಯಾಪ್ತಿಯ ಮಾರ್ಗೊಲ್ಲಿ ಕಾಫಿ ತೋಟದಲ್ಲಿ ಬೃಹದಾಕಾರದ ಹುಲಿಯೊಂದು ಕಾಣಿಸಿಕೊಂಡಿದೆ. ಕೆಲವು ದಿನಗಳ ಹಿಂದೆ ಇದೇ ಹುಲಿ ಆನೆ ಕಂದಕದ ಬಳಿ ಪ್ರತ್ಯಕ್ಷವಾಗಿತ್ತು.

ಇದೀಗ ಹಾಡಹಗಲೇ ಕಾಫಿ ತೋಟದಲ್ಲಿ ಕಾಣಿಸಿಕೊಳ್ಳುವ ಮೂಲಕ ಗ್ರಾಮಸ್ಥರಲ್ಲಿ ಆತಂಕವನ್ನು ಸೃಷ್ಟಿಸಿದೆ. ಕಾರ್ಮಿಕರು ತೋಟಕ್ಕೆ ಬರುವುದನ್ನು ನಿಲ್ಲಿಸಿದ್ದಾರೆ. ಕಾಫಿ ಮತ್ತು ಕಾಳುಮೆಣಸು ಕೊಯ್ಲು ಆಗದೆ ತೋಟದ ಮಾಲೀಕರು ನಷ್ಟ ಅನುಭವಿಸುತ್ತಿದ್ದಾರೆ. ಇಷ್ಟು ದಿನ ಕಾಡಾನೆ ಮತ್ತು ಮಂಗಗಳ ಹಾವಳಿಯಿಂದ ಬೇಸತ್ತಿದ್ದ ಬೆಳೆಗಾರರು ಇದೀಗ ಹುಲಿ ಉಪಟಳದಿಂದ ಕಂಗೆಟ್ಟಿದ್ದಾರೆ. ಕಳೆದ ಒಂದು ವಾರದಿಂದ ಹುಲಿ ಈ ಭಾಗದಲ್ಲಿ ಸಂಚರಿಸುತ್ತಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ತಕ್ಷಣ ಹುಲಿ ಸೆರೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ

ಮಾರ್ಗೋಲ್ಲಿ ಕಾಫಿ ತೋಟದಲ್ಲಿ ಹುಲಿ ಪ್ರತ್ಯಕ್ಷವಾಗಿದ್ದು, ಅರಣ್ಯ ಇಲಾಖೆಯ ತಿತಿಮತಿ ವಲಯ ಅರಣ್ಯಾಧಿಕಾರಿಗಳು, ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಹುಲಿಯು ಬಿ.ಬಿ.ಟಿ.ಸಿ ಸಂಸ್ಥೆಯ ಕಡೆ ತೆರಳಿರುವ ಸಾಧ್ಯತೆ ಇದ್ದು, ಹುಲಿಯನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ. ಗಂಡು ಹುಲಿ ಯಾಗಿದ್ದು, ಹುಲಿ ಸುಮಾರು ೫-೬ ವರ್ಷ ಪ್ರಾಯ ಹೊಂದಿರ ಬಹುದು ಎಂದು ಅಂದಾಜಿಸಲಾಗಿದೆ. ಕಾರ್ಯಾಚರಣೆಯಲ್ಲಿ ಆರ್.ಎಫ್.ಓ ಅಶೋಕ್ ಪಿ ಹನಗುಂದ್, ಡಿ.ಆರ್. ಎಫ್.ಓ ಶ್ರೀನಿವಾಸ್, ಆರ್.ಆರ್.ಟಿ ತಂಡದ ಗುರು, ಭರತ್, ಶಂಕರ್, ರೋಹಿತ್ ಕುಮಾರ್, ರೋಶನ್, ಸುಂದರ್, ತೀರ್ಥಕುಮಾರ್, ಕೃಷ್ಣಪ್ಪ ಇದ್ದರು. -ಸುಧಿ, ವಾಸು