ಗೋಣಿಕೊಪ್ಪಲು, ಜ. ೨೬: ಸಂವಿಧಾನದ ಆಶಯದಂತೆ ನಾವೆಲ್ಲರೂ ಸಾಗೋಣ, ಆ ಮೂಲಕ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸೋಣವೆಂದು ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಎನ್.ಎಸ್. ಪ್ರಶಾಂತ್ ಕರೆ ನೀಡಿದರು. ಪೊನ್ನಂಪೇಟೆ ತಾಲೂಕು ಆಡಳಿತದಿಂದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದ ಯುವ ಜನತೆ ಬಲಿಷ್ಠ ಭಾರತವನ್ನು ಕಟ್ಟಲು ಶ್ರಮಿಸಬೇಕು. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು, ದೇಶಕ್ಕೆ ಸ್ವಾತಂತ್ರ‍್ಯ ತರಲು ಅಪಾರ ಮಹನೀಯರ ತ್ಯಾಗ ಬಲಿದಾನ ನಡೆದಿದೆ. ನಿರುದ್ಯೋಗ ಸಮಸ್ಯೆ ನಿವಾರಣೆ ಆಗಬೇಕು, ಸಂವಿಧಾನವನ್ನು ಸದ್ಬಳಕೆ ಮಾಡಿಕೊಂಡಾಗ ಮಾತ್ರ ಎಲ್ಲರ ಆಶಯ ನೆರವೇರಲಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕ ವೇದಿಕೆಯ ಪದಾಧಿಕಾರಿಗಳಾದ ಮೂಕಳೇರ ಕುಶಾಲಪ್ಪ, ಎರ್ಮು ಹಾಜಿ, ಕಿಗ್ಗಟ್ಟುನಾಡು ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಕಾಟೀಮಾಡ ಜಿಮ್ಮಿ ಅಣ್ಣಯ್ಯ, ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಪೊನ್ನಂಪೇಟೆ ನಾಗರಿಕ ವೇದಿಕೆಯ ಅಧ್ಯಕ್ಷ ಪಿ.ಬಿ. ಪೂಣಚ್ಚ, ತೋಟಗಾರಿಕಾ ಅಧಿಕಾರಿ ದೀನಾ, ಕಿಗ್ಗಟ್ಟುನಾಡು ಹಿರಿಯ ನಾಗರಿಕ ವೇದಿಕೆಯ ಪದಾಧಿಕಾರಿಗಳು ಸೇರಿದಂತೆ ಇನ್ನಿತರ ಗಣ್ಯರು ಹಾಜರಿದ್ದರು.
ಗಣರಾಜ್ಯೋತ್ಸವ ಕಾರ್ಯಕ್ರಮ ಅಂಗವಾಗಿ ಬಾಳೆಲೆ, ಶ್ರೀಮಂಗಲ, ಪೊನ್ನಂಪೇಟೆ ಹಾಗೂ ಹುದಿಕೇರಿ ಹೋಬಳಿಯ ಬಿ.ಎಲ್.ಒ.ಗಳಾದ ಭಾಗ್ಯ, ಮುರುಗನ್, ರಶೀದ್ ಹಾಗೂ ಶಾಂತ ಇವರುಗಳ ಉತ್ತಮ ಕೆಲಸವನ್ನು ಗುರುತಿಸಿ ತಾಲೂಕು ಆಡಳಿತದ ವತಿಯಿಂದ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ರೆವಿನ್ಯೂ ಅಧಿಕಾರಿ ಸುಧೀಂದ್ರ, ಗಿರಿಜನರ ಕಲ್ಯಾಣ ಅಧಿಕಾರಿಗಳಾದ ಗುರುಶಾಂತಪ್ಪ, ನಾಗರಿಕ ವೇದಿಕೆಯ ಮತ್ರಂಡ ಅಪ್ಪಚ್ಚು, ತಾಲೂಕು ಪಂಚಾಯಿತಿ ಇ.ಒ. ಕೊಣಿಯಂಡ ಅಪ್ಪಣ್ಣ, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಹೋಬಳಿ ಮಟ್ಟದ ರೆವಿನ್ಯೂ ಅಧಿಕಾರಿಗಳು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ತಹಶೀಲ್ದಾರ್ ಪ್ರಶಾಂತ್ ಧ್ವಜವಂದನೆ ಸ್ವೀಕರಿಸಿದರು. ಶಾಲಾ ವಿದ್ಯಾರ್ಥಿಗಳು ನಾಡಗೀತೆ, ರೈತಗೀತೆ ಹಾಡಿದರು. ಶಿರೆಸ್ತೆದಾರ್ ರಾಧಾಕೃಷ್ಣ ಸ್ವಾಗತಿಸಿ, ವಂದಿಸಿದರು.
- ಹೆಚ್.ಕೆ. ಜಗದೀಶ್