ಕೊಡ್ಲಿಪೇಟೆ, ಜ. ೨೬: ಜಿಲ್ಲಾ ಪಂಚಾಯತ್, ತೋಟಗಾರಿಕಾ ಇಲಾಖೆ, ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ, ಕೊಡ್ಲಿಪೇಟೆ ಗ್ರಾ.ಪಂ., ಕಾಫಿ ಬೆಳೆಗಾರರ ಸಂಘಗಳ ಆಶ್ರಯದಲ್ಲಿ ದೊಡ್ಡಕೊಡ್ಲಿ ಗ್ರಾಮದಲ್ಲಿ ಸುಧಾರಿತ ಕಾಳು ಮೆಣಸು ಬೇಸಾಯ ಕಾರ್ಯಾಗಾರ ನಡೆಯಿತು.

ದೊಡ್ಡಕೊಡ್ಲಿ ಗ್ರಾಮದ ಪ್ರಗತಿಪರ ಕೃಷಿಕರಾದ ಡಿ.ಜಿ. ದಯಾನಂದ ಅವರ ತೋಟದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಕಾಳುಮೆಣಸು ಬೇಸಾಯ ಕೈಗೊಳ್ಳುವ ವಿಧಾನಗಳು, ರೋಗ ಬಾಧೆ, ಕೀಟಗಳ ನಿಯಂತ್ರಣ ಹಾಗೂ ಇತರೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಕೆವಿಕೆ ವಿಜ್ಞಾನಿ ಡಾ. ಕೆ.ವಿ. ವೀರೇಂದ್ರಕುಮಾರ್ ಅವರು ಮಾಹಿತಿ ನೀಡಿದರು.

ತೋಟಗಳಿಗೆ ಕೃಷಿ ಸುಣ್ಣ ಬಳಕೆ ಮಾಡುವ ವಿಧಾನಗಳ ಬಗ್ಗೆ ಚಿಕ್ಕಮಗಳೂರಿನ ರವಿಕುಮಾರ್ ಮಾಹಿತಿ ಒದಗಿಸಿದರು. ಸಮಗ್ರ ಕೃಷಿ ಅಭಿವೃದ್ಧಿ ಯೋಜನೆಗಳ ಬಗ್ಗೆ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಡಿ. ಭಗವಾನ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ್, ಹಿರಿಯ ಕಾಫಿ ಬೆಳೆಗಾರ ಶಬ್ಬೀರ್ ಹುಸೇನ್, ತೋಟಗಾರಿಕಾ ಇಲಾಖೆಯ ಕಾವ್ಯ, ರಾಜು ಸೇರಿದಂತೆ ೧೦೦ಕ್ಕೂ ಅಧಿಕ ಕೃಷಿಕರು ಭಾಗವಹಿಸಿದ್ದರು.