ಕೂಡಿಗೆ, ಜ. ೨೩: ಕೃಷಿ ಯಾಂತ್ರೀಕರಣ ಯೋಜನೆ ಅಡಿಯಲ್ಲಿ ೨೦೨೧-೨೨ನೇ ಸಾಲಿನಲ್ಲಿ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ವ್ಯಾಪ್ತಿಯ ಎಲ್ಲಾ ವರ್ಗದ ರೈತರಿಗೆ ವಿಶೇಷ ಅನುದಾನದಡಿಯಲ್ಲಿ ಕೃಷಿ ಯಂತ್ರಗಳನ್ನು ನೀಡಲಾಗುವುದು. ಇದರ ಸದುಪಯೋಗ ಪಡಿಸಿಕೊಳ್ಳುವಂತೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಯಾದವ್ ಬಾಬು ತಿಳಿಸಿದ್ದಾರೆ. ಅರ್ಜಿಗಳನ್ನು ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ಸಲ್ಲಿಸಬಹುದಾಗಿದೆ. ಇದರಲ್ಲಿ ಕೃಷಿ ಯಂತ್ರಗಳ ಮೇಲೆ ಸಾಮಾನ್ಯ ವರ್ಗದ ರೈತರಿಗೆ ಶೇ. ೫೦ ರಿಯಾಯಿತಿ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ. ೯೦ ಸಹಾಯಧನ ನೀಡಲಾಗುವುದು. ಇದರ ಜೊತೆಯಲ್ಲಿ ತುಂತುರು ಹನಿ ನೀರಾವರಿ ಘಟಕ ಯಂತ್ರಗಳನ್ನು ಸಹ ರಿಯಾಯಿತಿ ದರದಲ್ಲಿ ನೀಡಲಾಗುವುದು. ಇದರ ಪ್ರಯೋಜನವನ್ನು ತಾಲೂಕಿನ ರೈತರು ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.