ಗೋಣಿಕೊಪ್ಪಲು, ಜ. ೨೩: ತಾನು ವಿದ್ಯಾರ್ಜನೆ ಮಾಡಿದ ಶಾಲೆ, ಕಾಲೇಜುಗಳಿಗೆ ಏನಾದರೂ ಕೊಡುಗೆ ನೀಡಬೇಕು ಎಂಬ ಪರಿಕಲ್ಪನೆಯೊಂದಿಗೆ ಪ್ರತಿ ಶಾಲೆ, ಕಾಲೇಜುಗಳಲ್ಲಿ ಹಳೆ ವಿದ್ಯಾರ್ಥಿ ಸಂಘವನ್ನು ಸರ್ಕಾರದ ನಿಯಮದಂತೆ ಅನುಷ್ಠಾನಕ್ಕೆ ತರಲಾಗಿದೆ.

ಆದರೆ ಅದೆಷ್ಟೋ ಕಾಲೇಜುಗಳಲ್ಲಿ ನೆಪ ಮಾತ್ರಕಷ್ಟೆ ಹಳೆ ವಿದ್ಯಾರ್ಥಿ ಸಂಘವು ಕೆಲಸ ನಿರ್ವಹಣೆ ಮಾಡುತ್ತಿದೆ. ವಾರ್ಷಿಕವಾಗಿ ಒಂದೋ ಎರಡೋ ಸಭೆಗಳನ್ನು ನಡೆಸಿದರೇ ಅದೇ ಹೆಚ್ಚು. ಇವುಗಳಿಗೆ ವಿಭಿನ್ನವೆಂಬAತೆ ಸುವರ್ಣ ಮಹೋತ್ಸವವನ್ನು ಕಂಡಿರುವ ಗೋಣಿಕೊಪ್ಪಲುವಿನ ಕಾವೇರಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದವರು ಹಳೆ ವಿದ್ಯಾರ್ಥಿಗಳನ್ನು ಮೂಲವಾಗಿರಿಸಿಕೊಂಡು ಕಾಲೇಜಿನ ಆವರಣದಲ್ಲಿ ಧ್ವಜಕಂಬ, ಗುಣಮಟ್ಟದ ಕುಡಿಯುವ ನೀರಿನ ವ್ಯವಸ್ಥೆ, ಕಷ್ಟದಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳ ವಾರ್ಷಿಕ ಶುಲ್ಕ ಪಾವತಿ, ಜಿಲ್ಲಾಮಟ್ಟದ ಭಾಷಣ ಸ್ಪರ್ಧೆ, ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಸೇರಿದಂತೆ ಸುಮಾರು ರೂ. ೪೦ ಲಕ್ಷ ವೆಚ್ಚದಲ್ಲಿ ಕಂಪ್ಯೂಟರ್ ಲ್ಯಾಬ್ ಕಟ್ಟಡ ನಿರ್ಮಾಣ ಮಾಡುವ ಮೂಲಕ ಕಾಲೇಜಿನ ಪ್ರಗತಿಗೆ ಸಕ್ರಿಯವಾಗಿ ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ.

ಅಲ್ಲದೇ ಮುಂದಿನ ದಿನಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಲವಾರು ಯೋಜನೆಯನ್ನು ಕೈಗೆತ್ತಿಕೊಂಡಿದೆ.

ಈ ಬಗ್ಗೆ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ಕಾಲೇಜು ಪ್ರಾಂಶುಪಾಲ ಎಂ.ಬಿ. ಕಾವೇರಪ್ಪ ಕಾಲೇಜಿನ ಅಭಿವೃದ್ಧಿಗೆ ವಿದ್ಯಾರ್ಥಿ ಸಂಘವು ನೀಡಿದ ಕೊಡುಗೆಗಳ ಬಗ್ಗೆ ಮಾಹಿತಿ ಒದಗಿಸಿದರು.

ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಂ.ಬಿ. ಕಾವೇರಪ್ಪ, ಹಳೆ ವಿದ್ಯಾರ್ಥಿ ಸಂಘವು ಕಾಲೇಜು ಆರಂಭಿಕ ದಿನಗಳಲ್ಲಿ ಅಸ್ತಿತ್ವದಲ್ಲಿತ್ತು; ಆದರೆ ನೆಪ ಮಾತ್ರಕ್ಕಷ್ಟೆ ಸೀಮಿತವಾಗಿತ್ತು.

೨೦೦೫ ರಲ್ಲಿ ಸಂಸ್ಥೆಗೆ ನ್ಯಾಕ್ ತಂಡ ಭೇಟಿ ನೀಡಿದ ವೇಳೆ ವಿದ್ಯಾರ್ಥಿ ಸಂಘದ ವೇಗ ಹೆಚ್ಚಾಯಿತು. ನಂತರದ ವರ್ಷಗಳಲ್ಲಿ ಸಂಘಕ್ಕೆ ಹಲವು ಅನುಭವಿ ವಿದ್ಯಾರ್ಥಿಗಳು ಸೇರಿಕೊಂಡು ಉತ್ತಮ ಆಡಳಿತ ಮಂಡಳಿ ರಚನೆ ಮಾಡಿದರು. ಇದರಿಂದ ಸಕ್ರಿಯವಾಗಿ ತೊಡಗಿಸಿಕೊಂಡು ಕಾಲೇಜಿನ ಅಭಿವೃದ್ಧಿಗೆ ಒತ್ತು ನೀಡಿದರು.

ಇದೀಗ ಹಳೆ ವಿದ್ಯಾರ್ಥಿ ಸಂಘದಲ್ಲಿ ೨೦೦೦ ಹಳೆಯ ವಿದ್ಯಾರ್ಥಿಗಳು ನೋಂದಾವಣೆ ಮಾಡಿದ್ದಾರೆ. ದೇಶ, ವಿದೇಶದಲ್ಲಿ ಕೆಲಸ ನಿರ್ವಹಿಸುತ್ತಿರುವ ವಿದ್ಯಾರ್ಥಿಗಳನ್ನು ಕಂಡು ಹಿಡಿಯುವ ಪ್ರಯತ್ನ ಮಾಡಿದ್ದೇವೆ. ಎಲ್ಲಾ ಹಳೆಯ ವಿದ್ಯಾರ್ಥಿಗಳಿಗೆ ಸದಸ್ಯತ್ವ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ, ಲಭ್ಯವಿರುವ ಸಾಮಾಜಿಕ ಜಾಲತಾಣವನ್ನು ಬಳಕೆ ಮಾಡಿಕೊಂಡು ಇಲ್ಲಿ ವಿದ್ಯಾರ್ಜನೆ ಮಾಡಿ ತೆರಳಿರುವವರನ್ನು ಸಂಪರ್ಕ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.

ಕಾಲೇಜಿನ ವೆಬ್‌ಸೈಟ್ ಮೂಲಕ ಸದಸತ್ವ ಪಡೆಯಲು ಅವಕಾಶವಿದೆ. ಪ್ರತಿನಿತ್ಯ ವ್ಯಾಟ್ಸಪ್ ಗ್ರೂಪ್‌ನ ಮೂಲಕ ಸದಸ್ಯರನ್ನು ಭೇಟಿ ಮಾಡಿ ಇಲ್ಲಿನ ಕಾರ್ಯಕ್ರಮದ ವಿವರಗಳನ್ನು ತಿಳಿಸುವ ಪ್ರಯತ್ನ ನಡೆಯುತ್ತಿದೆ. ಸಂಘದಲ್ಲಿ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ಹಳೆಯ ವಿದ್ಯಾರ್ಥಿ ಸಂಘದ ಮಹಾಸಭೆ ಏರ್ಪಡಿಸಲಾಗಿದ್ದು. ಸದಸ್ಯರು ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ರಾಜ್ಯದಲ್ಲಿ ನಮ್ಮ ಹಳೆ ವಿದ್ಯಾರ್ಥಿ ಸಂಘವು ಮಾದರಿಯಾಗಿರಬೇಕು ಎಂಬ ಪರಿಕಲ್ಪನೆ ನಮ್ಮದು ಎಂದರು.

ಸAಘದ ಉಪಾಧ್ಯಕ್ಷ ಟಿ.ಎಂ. ದೇವಯ್ಯ ಮಾತನಾಡಿ, ಕಾಲೇಜಿನ ಅಭಿವೃದ್ಧಿಗೆ ಹಳೆ ವಿದ್ಯಾರ್ಥಿ ಸಂಘ ನಿರಂತರ ಸೇವೆ ನೀಡುತ್ತಿದೆ.

ಹಳೆಯ ವಿದ್ಯಾರ್ಥಿಗಳಿಂದ ವಂತಿಗೆಯನ್ನು ಸಂಗ್ರಹಿಸಿ ಕಾಲೇಜಿನಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿನಿಯೋಗ ಮಾಡಲಾಗುತ್ತಿದೆ. ಈಗಾಗಲೇ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಕಂಪ್ಯೂಟರ್ ಲ್ಯಾಬ್ ಕಟ್ಟಡವನ್ನು ಹಳೆಯ ವಿದ್ಯಾರ್ಥಿ ಸಂಘವು ಕೊಡುಗೆಯಾಗಿ ನೀಡಿದೆ.

ಇದರ ಪ್ರಯೋಜನಗಳನ್ನು ಇಲ್ಲಿನ ವಿದ್ಯಾರ್ಥಿಗಳು ಪಡೆಯುತ್ತಿದ್ದಾರೆ ಎಂದರು. ಸಂಘದ ಸಂಚಾಲಕಿ ಎಸ್.ಎಂ. ರಜಿನಿ ಮಾತನಾಡಿ, ಹಳೆಯ ವಿದ್ಯಾರ್ಥಿ ಸಂಘದ ಆಡಳಿತ ಮಂಡಳಿ ಕಾಲೇಜಿನ ಏಳಿಗೆಗಾಗಿ ಶ್ರಮಿಸುತ್ತಿದೆ. ಇದರಿಂದಾಗಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ.

ತಮ್ಮ ದೈನಂದಿನ ಚಟುವಟಿಕೆಗಳನ್ನು ಬದಿಗಿಟ್ಟು ಕಾಲೇಜಿಗೆ ಆಗಮಿಸಿ ತಮ್ಮ ಕೊಡುಗೆಯನ್ನು ನೀಡುತ್ತಿದ್ದಾರೆ. ಹಳೆಯ ವಿದ್ಯಾರ್ಥಿ ಮನೆಗಳಿಗೆ ತೆರಳಿ ಸಹಕಾರ ಪಡೆದು ಅದನ್ನು ಕಾಲೇಜಿನ ಅಭಿವೃದ್ಧಿಗೆ ನೀಡುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಸಂಘದ ಕಾರ್ಯದರ್ಶಿ ಪಿ. ವಾಣಿ ಚಂಗಪ್ಪ, ಖಜಾಂಚಿ ಪಿ.ಜೆ. ನಂಜಪ್ಪ, ನಿರ್ದೇಶಕರಾದ ಕೆ.ಎಂ. ತಿಮ್ಮಯ್ಯ, ಪಿ.ಬಿ. ನಟೇಶ್, ಪಿ.ಬಿ. ಪೂಣಚ್ಚ, ಎಂ.ಎA. ಅನೀಶ್, ಜೆ.ಟಿ. ಜೋಯಪ್ಪ, ಬಿ.ಎಸ್. ಆಶಾ, ಜೆ.ಜಿ. ಬಿದ್ದಪ್ಪ, ನಾಮನಿರ್ದೇಶನ ಸದಸ್ಯರಾದ ಕೆ.ಎಂ. ಅಜಿತ್ ಅಯ್ಯಪ್ಪ, ಪಿ.ಟಿ. ಸುಭಾಷ್ ಸುಬ್ಬಯ್ಯ, ಕೆ.ಸಿ. ಮುತ್ತಪ್ಪ, ಕಿಶೋರ್ ಉಪಸ್ಥಿತರಿದ್ದರು. - ಹೆಚ್.ಕೆ. ಜಗದೀಶ್