ಮಡಿಕೇರಿ, ಜ. ೨೦ : ನಗರದ ಫೀ.ಮಾ.ಕೆ.ಎಂ.ಕಾರ್ಯಪ್ಪ ವೃತ್ತದಲ್ಲಿ ಇತ್ತೀಚೆಗೆ ಅಳವಡಿಸಿದ್ದ “ಫೀ.ಮಾ.ಕೆ.ಎಂ.ಕಾರ್ಯಪ್ಪ ಸರ್ಕಲ್” ಎಂಬ ನಾಮಫಲಕ ನಾಪತ್ತೆಯಾಗಿದೆ. ಈ ಫಲಕವನ್ನು ಮತ್ತೆ ಅಳವಡಿಸಬೇಕು ಮತ್ತು ಅಪಘಾತ ತಡೆಗೆ ವೈಜ್ಞಾನಿಕ ರೂಪದ ವೃತ್ತವನ್ನು ನಿರ್ಮಿಸಬೇಕೆಂದು ಒತ್ತಾಯಿಸಿ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ ಅವರ ನೇತೃತ್ವದ ನಿಯೋಗ ನಗರಸಭೆಗೆೆ ಮನವಿ ಸಲ್ಲಿಸಿದೆ.
ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಅವರನ್ನು ಭೇಟಿಯಾದ ನಿಯೋಗ ದುರುದ್ದೇಶದಿಂದ ಫಲಕಕ್ಕೆ ಹಾನಿ ಮಾಡಿದ್ದೇ ಆಗಿದ್ದಲ್ಲಿ ತಪ್ಪಿತಸ್ಥ ವ್ಯಕ್ತಿಯಿಂದಲೇ ಸಂಪೂರ್ಣ ವೆಚ್ಚವನ್ನು ಭರಿಸಬೇಕೆಂದು ಒತ್ತಾಯಿಸಿತು.
ಶಿವಕುಮಾರ್ ನಾಣಯ್ಯ ಮಾತನಾಡಿ ಕೆಲವು ದಿನಗಳ ಹಿಂದೆ ರೋಟರಿ ಇನ್ನರ್ ವೀಲ್ ಸಂಸ್ಥೆಯವರು ವೀರಸೇನಾನಿ ಫೀ.ಮಾ.ಕೆ.ಎಂ.ಕಾರ್ಯಪ್ಪ ಅವರ ಮೇಲಿನ ಅಭಿಮಾನದಿಂದ ಕಾರ್ಯಪ್ಪ ವೃತ್ತದಲ್ಲಿ ನಾಮಫಲಕ ಅಳವಡಿಸಿದ್ದರು. ಆದರೆ ಇದ್ದಕ್ಕಿದ್ದ ಹಾಗೆ ನಾಮಫಲಕ ಇಲ್ಲದಾಗಿದ್ದು, ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಆದ್ದರಿಂದ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ತನಿಖೆ ಚುರುಕುಗೊಳಿಸಬೇಕು ಎಂದು ಆಗ್ರಹಿಸಿದರು.
ವೈಜ್ಞಾನಿಕ ವೃತ್ತ ನಿರ್ಮಿಸಿ
ಫೀ.ಮಾ.ಕೆ.ಎಂ.ಕಾರ್ಯಪ್ಪ ವೃತ್ತ ಹೆದ್ದಾರಿಯಲ್ಲಿ ನಗರದ ಹೃದಯ ಭಾಗದಲ್ಲಿದೆ. ಆದರೆ ಈ ವೃತ್ತದ ಕಾಮಗಾರಿ ಅಪೂರ್ಣಗೊಂಡಿದ್ದು, ಹಲವು ಬಾರಿ ಅಪಘಾತಗಳು ಸಂಭವಿಸಿವೆ. ಆದ್ದರಿಂದ ಈಗ ಇರುವ ವೃತ್ತದ ವಿನ್ಯಾಸವನ್ನು ಬದಲಾಯಿಸಿ ವೃತ್ತಾಕಾರದ ವೃತ್ತವನ್ನು ವೈಜ್ಞಾನಿಕ ರೂಪದಲ್ಲಿ ನಿರ್ಮಿಸಿ ವಿದ್ಯುತ್ ದೀಪಗಳನ್ನು ಅಳವಡಿಸುವ ಮೂಲಕ ಅಪಘಾತಗಳನ್ನು ನಿಯಂತ್ರಿಸಲು ನಗರಸಭೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಿವಕುಮಾರ್ ನಾಣಯ್ಯ ಒತ್ತಾಯಿಸಿದರು.
ಪ್ರಮುಖರಾದ ಕುಲ್ಲೇಟಿರ ಅಜಿತ್ ನಾಣಯ್ಯ, ಒಡಿಯಂಡ ನವೀನ್ ತಿಮ್ಮಯ್ಯ, ಮಾದೇಟಿರ ತಿಮ್ಮಯ್ಯ, ಹಾಗೂ ಕೊಕ್ಕೆಲೆರ ಶ್ಯಾಂ ತಿಮ್ಮಯ್ಯ ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.