ಗೋಣಿಕೊಪ್ಪ, ಜ. ೨೦: ೨೦೨೧ನೇ ಸಾಲಿನಲ್ಲಿ ನಡೆದ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ೨ನೇ ಬಾರಿಗೆ ಚುನಾಯಿತರಾಗಿರುವ ಕೊಡವ ಮುಸ್ಲಿಂ ಅಸೋಸಿಯೇಷನ್ನ ಸದಸ್ಯರಾದ ಕಾಟ್ರಕೊಲ್ಲಿಯ ಆಲೀರ ಎಂ. ರಶೀದ್ (ಉನೈಸ್) ಅವರನ್ನು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವೀರಾಜಪೇಟೆ ಯಲ್ಲಿರುವ ಕೆ. ಎಂ. ಎ. ಸಂಸ್ಥೆಯ ಪ್ರಧಾನ ಕಚೇರಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ ಅವರು, ಜಿಲ್ಲೆಯ ಹಿರಿಯ ಧಾರ್ಮಿಕ ವಿದ್ವಾಂಸರೂ ಆಗಿರುವ ಸಂಸ್ಥೆಯ ಹಿರಿಯ ಸಲಹೆಗಾರರಾದ ಅಬುಸೈಯದ್ ಪಾಯಡತಂಡ ಎಂ. ಹುಸೈನ್ ಮುಸ್ಲಿಯಾರ್ ಅವರ ಸಮ್ಮುಖದಲ್ಲಿ ಆಲೀರ ರಶೀದ್ ಅವರನ್ನು ಸನ್ಮಾನಿಸಿದರು. ಕಾರ್ಯಕ್ರಮ ದಲ್ಲಿ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಬೇಗೂರಿನ ಆಲೀರ ಅಹ್ಮದ್ ಹಾಜಿ, ಹಿರಿಯ ನಿರ್ದೇಶಕ ನಿವೃತ್ತ ಉಪ ತಹಶೀಲ್ದಾರ್, ಚಿಮ್ಮಿಚೀರ ಅಬ್ದುಲ್ಲಾ ಹಾಜಿ, ಪದಾಧಿಕಾರಿಗಳಾದ ಕುವೇಂಡ ವೈ. ಆಲಿ, ಹೊದವಾಡದ ಹರಿಶ್ಚಂದ್ರ ಎ. ಹಂಸ, ಹಳ್ಳಿಗಟ್ಟಿನ ಚಿಮ್ಮಿಚೀರ ಕೆ. ಇಬ್ರಾಹಿಂ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ ಕಾರ್ಯಕ್ರಮ ನಿರ್ವಹಿಸಿದರು. ಇದಕ್ಕೂ ಮೊದಲು ನಡೆದ ಸಾಮೂಹಿಕ ಪ್ರಾರ್ಥನೆಗೆ ಪಾಯಡತಂಡ ಎಂ. ಹುಸೈನ್ ಮುಸ್ಲಿಯಾರ್ ನೇತೃತ್ವ ನೀಡಿದರು.