ಮಡಿಕೇರಿ, ಜ.18: ಕೋವಿಡ್-19 ಪಾಸಿಟಿವಿಟಿ ಪ್ರಮಾಣವು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಹೆಚ್ಚಾಗುತ್ತಿದ್ದು, ಕೋವಿಡ್-19 ನಿಯಂತ್ರಿಸಲು ಹೊರ ರಾಜ್ಯ ಹಾಗೂ ಹೊರ ದೇಶದಿಂದ ಜಿಲ್ಲೆಗೆ ಆಗಮಿಸುವವರ ಬಗ್ಗೆ ಹೆಚ್ಚಿನ ನಿಗಾವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಸಕ ಕೆ.ಜಿ.ಬೋಪಯ್ಯ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ನಗರದ ಜಿ.ಪಂ.ಸಭಾಂಗಣದಲ್ಲಿ ಮಡಿಕೇರಿ ತಾಲೂಕಿನಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ನಡೆದ ತಾಲೂಕು ಮಟ್ಟದ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹೊರ ದೇಶ ಹಾಗೂ ಹೊರ ರಾಜ್ಯದಿಂದ ಬರುವವರು ಹೋಂ ಐಸೋಲೇಷನ್‍ನಲ್ಲಿ ಕಡ್ಡಾಯವಾಗಿ ಇರಬೇಕು. ಕೋವಿಡ್ ಮಾರ್ಗಸೂಚಿ ಪಾಲಿಸಬೇಕು. ರೆಸಾರ್ಟ್‍ಗಳಲ್ಲಿ ಕೋವಿಡ್-19 ಪಾಸಿಟಿವಿಟಿ ಕಂಡುಬರುತ್ತಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುವಂತೆ ನಿರ್ದೇಶನ ನೀಡಿದರು.

ಹೊರ ರಾಜ್ಯ ಹಾಗೂ ಹೊರ ದೇಶದಿಂದ ಆಗಮಿಸುವವರು ಎರಡು ಡೋಸ್ ಲಸಿಕೆ ಪಡೆದಿದ್ದಾರೆಯೇ ಹಾಗೂ 72 ಗಂಟೆ ಅವಧಿಯ ಆರ್‍ಟಿಪಿಸಿಆರ್ ಪರೀಕ್ಷೆ ವರದಿ ಇದೆಯೇ ಎಂದು ಖಾತರಿ ಪಡಿಸಿಕೊಳ್ಳಬೇಕು; 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್-19 ನಿಯಂತ್ರಣ ಲಸಿಕೆ ನೀಡಬೇಕು. ಶಾಲಾ-ಕಾಲೇಜಿನಿಂದ ಹೊರಗುಳಿದಿರುವ ಮಕ್ಕಳಿಗೂ ಲಸಿಕೆ ನೀಡುವಂತಾಗಲು ಮನವರಿಕೆ ಮಾಡಬೇಕು. ಯಾವುದೇ ಕಾರಣಕ್ಕೂ 15 ರಿಂದ 18 ವರ್ಷದ ಮಕ್ಕಳು ಲಸಿಕೆಯಿಂದ ಹಿಂದೆ ಸರಿಯಬಾರದು; ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಸ್ಥಳೀಯರು ಮುಂದಾಗಬೇಕು.

ಆಯಾಯ ಗ್ರಾ.ಪಂ.ಮಟ್ಟದಲ್ಲಿ ಕೋವಿಡ್-19 ಕಂಡುಬರದಂತೆ ಹೆಚ್ಚಿನ ಜಾಗೃತಿ ಮೂಡಿಸಬೇಕು. ಗ್ರಾ.ಪಂ.ಮಟ್ಟದಲ್ಲಿ ಕಾರ್ಯಪಡೆ ಸಮಿತಿ ಸಭೆ ನಡೆಸಿ ಮಾಹಿತಿ ನೀಡುವಂತಾಗಬೇಕು ಎಂದು ಕೆ.ಜಿ.ಬೋಪಯ್ಯ ಅವರು ನಿರ್ದೇಶನ ನೀಡಿದರು. ಕಾಲೋನಿಗಳು ಹಾಗೂ ಇತರ ಕಡೆಗಳಲ್ಲಿ ಕೋವಿಡ್-19 ಬಗ್ಗೆ ಜಾಗೃತಿ ಮೂಡಿಸಬೇಕು. ಹೋಂ ಕ್ವಾರಂಟೈನ್ ಬಿಗಿಗೊಳಿಸಿದ್ದಲ್ಲಿ ಕೋವಿಡ್ ಹರಡದಂತೆ ಎಚ್ಚರವಹಿಸಬಹುದು; ಕಂದಾಯ, ಪಂಚಾಯತ್ ರಾಜ್, ಪೊಲೀಸ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಕೋವಿಡ್-19 ನಿಯಂತ್ರಿಸುವಲ್ಲಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಜಿಲ್ಲೆಯಲ್ಲಿ ಕೋವಿಡ್-19 ಹರಡದಂತೆ ಮುನ್ನೆಚ್ಚರ ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ ಅವರು ಜಿಲ್ಲೆಯಲ್ಲಿ ಕೋವಿಡ್-19 ಹರಡದಂತೆ ಎಚ್ಚರವಹಿಸುವಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ನಿಗಾವಹಿಸಬೇಕಿದೆ. ಆ ದಿಸೆಯಲ್ಲಿ ಸರ್ಕಾರದ ಮಾರ್ಗಸೂಚಿ ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಅವರು ಹೇಳಿದರು.

ಜಿ.ಪಂ.ಉಪ ಕಾರ್ಯದರ್ಶಿ ಪಿ.ಲಕ್ಷ್ಮಿ ಕೋವಿಡ್-19 ನಿಯಂತ್ರಣ ಸಂಬಂಧಿಸಿದಂತೆ ಗ್ರಾ.ಪಂ.ಮಟ್ಟದಲ್ಲಿ ಕಾರ್ಯಪಡೆ ಸಮಿತಿ ಸಭೆ ನಡೆಸಬೇಕು. ಸರ್ಕಾರದ ಮಾರ್ಗಸೂಚಿ ಬಗ್ಗೆ ಮಾಹಿತಿ ನೀಡಬೇಕು. ಸಾರ್ವಜನಿಕರಿಂದ ದೂರು ಇದ್ದಲ್ಲಿ ಲಿಖಿತವಾಗಿ ಪಡೆದು ಕೋವಿಡ್-19 ನಿಯಂತ್ರಣಕ್ಕೆ ಶ್ರಮಿಸುವಂತೆ ಸಲಹೆ ಮಾಡಿದರು. ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕು. ಜಾತ್ರೆ, ಸಂತೆ ಮತ್ತಿತರ ಜನದಟ್ಟಣೆ ಪ್ರದೇಶದಲ್ಲಿ ಗುಂಪು ಸೇರದಂತೆ ಕೋವಿಡ್ ನಿಯಮ ಪಾಲಿಸುವಲ್ಲಿ ಮಾಹಿತಿ ನೀಡಬೇಕು ಎಂದು ಸೂಚಿಸಿದರು. ತಾ.ಪಂ. ಇಒ ಶೇಖರ್ ಅವರು ಮಡಿಕೇರಿ ತಾಲ್ಲೂಕಿನ ವಿವಿಧ ಗ್ರಾ.ಪಂ.ಗಳಲ್ಲಿ ಕೋವಿಡ್-19 ಸ್ಥಿತಿಗತಿಯ ಅಂಕಿ ಅಂಶಗಳ ಮಾಹಿತಿ ನೀಡಿದರು.

ತಾಲೂಕು ಆರೋಗ್ಯ ಅಧಿಕಾರಿ ಡಾ.ಚೇತನ್ ಅವರು ಕೋವಿಡ್-19 ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ವಿವರಿಸಿದರು. ತಾ.ಪಂ.ಆಡತಳಿತಾಧಿಕಾರಿ ಶಬಾನಾ ಎಂ.ಶೇಖ್, ತಹಶೀಲ್ದಾರ್ ಪಿ.ಎಸ್.ಮಹೇಶ್, ಡಿವೈಎಸ್‍ಪಿ ಗಜೇಂದ್ರ ಪ್ರಸಾದ್, ಗ್ರಾ.ಪಂ.ಪಿಡಿಒಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ಕೋವಿಡ್-19 ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಿದರು.