ಮಡಿಕೇರಿ, ಜ. 18: ಅಂತರರಾಜ್ಯದ 29 ಕಾರ್ಮಿಕರಿಗೆ ಕೊರೊನಾ ಸೋಂಕು ತಗುಲಿದ್ದು, ಕಾರ್ಮಿಕರುಗಳು ಕೆಲಸ ಮಾಡುತ್ತಿದ್ದ ಕಟ್ಟಡವನ್ನು ಸೀಲ್ಡೌನ್ ಮಾಡಲಾಗಿದೆ. ನಗರದ ಗಾಂಧಿ ಮೈದಾನ ಎದುರಿನ ಕಟ್ಟಡ ಕೆಲಸಕ್ಕೆ ಬಂದಿದ್ದ ಉತ್ತರ ಭಾರತದ ಕಾರ್ಮಿಕರುಗಳಿಗೆ ಸೋಂಕು ದೃಢಪಟ್ಟಿದೆ. ಅಲ್ಲದೆ ಸಿಬ್ಬಂದಿ ಹಾಗೂ ಕಾರ್ಮಿಕರು ಸೇರಿ 150 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.
2 ದಿನಗಳ ಹಿಂದೆ ಇಬ್ಬರು ಕಾರ್ಮಿಕರುಗಳಿಗೆ ಕೊರೊನಾ ಲಕ್ಷಣಗಳು ಇದ್ದ ಹಿನ್ನೆಲೆ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ನಡೆಸಿದ ಬಳಿಕ ಸೋಂಕು ಪತ್ತೆಯಾಗಿದೆ. ನಂತರ ಎಲ್ಲ ಕಾರ್ಮಿಕರನ್ನು ಪರೀಕ್ಷೆಗೆ ಒಳಪಡಿಸಿದ ಹಿನ್ನೆಲೆ 29 ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಇನ್ನೂ ಹಲವರ ವರದಿ ಬರಲು ಬಾಕಿ ಇದೆ. ಸ್ಥಳಕ್ಕೆ ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವೆಂಕಟೇಶ್ ಭೇಟಿ ನೀಡಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಆರೋಗ್ಯ ಇಲಾಖೆಯ ಟ್ರಯಾಜ್ ತಂಡ ಕಾರ್ಮಿಕರ ಆರೋಗ್ಯ ಸ್ಥಿತಿಯ ಬಗ್ಗೆ ತಪಾಸಣೆ ನಡೆಸಿದ್ದು, ಇಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲರೂ ಲಕ್ಷಣ ರಹಿತ ಸೋಂಕಿತರು ಎಂದು ತಿಳಿದು ಬಂದಿದೆ. ಕಟ್ಟಡದೊಳಗೆ ಸೋಂಕಿತರನ್ನು ಪ್ರತ್ಯೇಕತೆಯಲ್ಲಿಡಲು ಕ್ರಮವಹಿಸಲಾಗಿದೆ ಎಂದ ಅವರು, ಹೊರ ರಾಜ್ಯದ ಕಾರ್ಮಿಕರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದರಿಂದ ಸೋಂಕು ನಿಯಂತ್ರಣ ಸಾಧ್ಯವಿದೆ. ಮಾಲೀಕರುಗಳು ಈ ಬಗ್ಗೆ ಮುತುವರ್ಜಿ ವಹಿಸಬೇಕು ಎಂದು ಮನವಿ ಮಾಡಿದರು.