ಮಡಿಕೇರಿ, ಜ. 18: ಜವಾಹರ್ ನವೋದಯ ವಿದ್ಯಾಲಯವನ್ನು ಕೋವಿಡ್ ಸೆಂಟರ್ ಆಗಿ ಪರಿವರ್ತಿಸ ದಂತೆ ಆಗ್ರಹಿಸಿ ನವೋದಯ ವಿದ್ಯಾಲ ಯದ ಪೋಷಕ ವರ್ಗ ಹಾಗೂ ಪೋಷಕ ಶಿಕ್ಷಕ ಪರಿಷತ್ ವತಿಯಿಂದ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರಿಗೆ ಮನವಿ ಸಲ್ಲಿಸಲಾಯಿತು.
ನಗರದ ಗಾಂಧಿ ಮೈದಾನದಲ್ಲಿ ಸೇರಿದ ಪೋಷಕರು ಜೆಎನ್‍ವಿಯನ್ನು ಕೋವಿಡ್ ಸೆಂಟರ್ ಆಗಿ ಪರಿವರ್ತಿಸುವ ಕ್ರಮದ ಬಗ್ಗೆ ತಮ್ಮ ಅಸಮಾಧಾನ ಹೊರ ಹಾಕಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಪೋಷಕರುಗಳು 2 ವರ್ಷಗಳಿಂದ ಕೊರೊನಾ ಕಾರಣದಿಂದಾಗಿ ಜೆಎನ್‍ವಿಯನ್ನು ಕೋವಿಡ್ ಸೆಂಟರ್ ಆಗಿ ಮಾಡಿದ್ದರಿಂದಾಗಿ 2 ವರ್ಷಗಳ ಕಾಲ ಭೌತಿಕ ತರಗತಿಗಳು ನಡೆದೇ ಇಲ್ಲ 6ನೇ ಮತ್ತು 7ನೇ ತರಗತಿಯ ಮಕ್ಕಳಿಗೂ ಒಂದೇ ಒಂದು ದಿನವು ಶಾಲೆಗೆ ಬರಲಾಗಲಿಲ್ಲ. ಆ ಮಕ್ಕಳು ಸೇರಿದಂತೆ ಜೆಎನ್‍ವಿಯ ಮಕ್ಕಳ ಶೈಕ್ಷಣಿಕ ಸ್ಥಿತಿ ಅಧೋಗತಿಗೆ ತಲುಪಿದೆ ಎಂದು ವಿಷಾಧಿಸಿದರು.
ಬೇರೆ ಶಾಲೆ ಮಕ್ಕಳಿಗೆ ಭೌತಿಕ ತರಗತಿಗಳು ನಡೆಯುತ್ತಿವೆ ಇಲ್ಲವೆ ವಿದ್ಯಾಗಮ ತರಗತಿಗಳು ನಡೆದಿವೆ. ಆದರೆ ಜೆಎನ್‍ವಿ
(ಮೊದಲ ಪುಟದಿಂದ) ಮಕ್ಕಳಿಗೆ ಯಾವುದೇ ಶೈಕ್ಷಣಿಕ ಚಟುವಟಿಕೆಗಳು ಭೌತಿಕವಾಗಿ ನಡೆದಿಲ್ಲ. ಆನ್‍ಲೈನ್ ತರಗತಿ ವ್ಯವಸ್ಥೆಯಿಂದ ಮಕ್ಕಳಲ್ಲಿ ಮೊಬೈಲ್ ಗೀಳು ಹೆಚ್ಚಾಗುತ್ತಿದೆ ಹೊರತು, ಬೇರಾವುದೆ ಪ್ರಯೋಜನವಾಗುತ್ತಿಲ್ಲ. ಈಗ ಮತ್ತೆ ಅದೇ ಜೆಎನ್‍ವಿಯನ್ನು ಕೋವಿಡ್ ಸೆಂಟರ್ ಆಗಿ ಮಾಡಿದರೆ ಇನ್ನೂ 6 ತಿಂಗಳು ಅಥವಾ 1 ವರ್ಷ ಶಾಲೆ ಇಲ್ಲದಂತಾಗುತ್ತದೆ. ಇದರಿಂದ ಮಕ್ಕಳ ಶೈಕ್ಷಣಿಕ ಬೆಳವಣಿಗೆ ಭವಿಷ್ಯ ನಾಶವಾಗುತ್ತದೆ. ಆದ್ದರಿಂದ ಜಿಲ್ಲಾಡಳಿತ ಕೋವಿಡ್ ಸೆಂಟರ್‍ಗೆ ಬೇರೆ ಶಾಲಾ - ಕಾಲೇಜು, ಸಮುದಾಯ ಭವನ, ಕಟ್ಟಡ ಮಂಟಪಗಳನ್ನು ಆಯ್ಕೆ ಮಾಡಿಕೊಂಡು ನಮ್ಮ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸಹಕರಿಸಬೇಕು. ಇಲ್ಲವೇ ಸಾಮೂಹಿಕವಾಗಿ ಜೆಎನ್‍ವಿಯ ಮಕ್ಕಳ ವರ್ಗಾವಣೆ ಪತ್ರ ನೀಡಿ ನಂತರ ಕೋವಿಡ್ ಸೆಂಟರ್ ಆಗಿ ಪರಿವರ್ತಿಸಬೇಕು ಎಂದು ಹೇಳಿದರು. ಈ ಸಂದರ್ಭ ಪೋಷಕ ಶಿಕ್ಷಕ ಪರಿಷತ್‍ನ ಜಯಕುಮಾರ್, ಮಧೋಶ್ ಪೂವಯ್ಯ, ಆಶಿಕಾ, ಭವ್ಯ, ನಂದಿನಿ ಮತ್ತಿತರರಿದ್ದರು.