ರಾಜ್ಯದಲ್ಲಿ ಮುಂದುವರೆದ ಕೊರೊನಾ ಆರ್ಭಟ
ಬೆಂಗಳೂರು, ಜ. 18: ರಾಜ್ಯದಲ್ಲಿ ಮಹಾಮಾರಿ ಕೊರೊನಾ ಆರ್ಭಟ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 41,457 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಸುಧಾಕರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ 41 ಸಾವಿರ ದಾಟುವ ಮೂಲಕ ಪಾಸಿಟಿವ್ ಪ್ರಮಾಣ ಶೇ. 22.30ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಏಳು ಮಂದಿ ಸೇರಿದಂತೆ ರಾಜ್ಯದಲ್ಲಿ ಕೊರೊನಾದಿಂದ 20 ಮಂದಿ ಮೃತಪಟ್ಟಿದ್ದಾರೆ ಎಂದು ಸುಧಾಕರ್ ತಿಳಿಸಿದ್ದಾರೆ. ಇನ್ನೂ ರಾಜಧಾನಿ ಬೆಂಗಳೂರಿನಲ್ಲಿ ಬರೋಬ್ಬರಿ 25,595 ಮಂದಿಗೆ ಸೋಂಕು ದೃಢಪಟ್ಟಿದ್ದು, ಏಳು ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ 8,353 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು 2,50,381 ಸಕ್ರಿಯ ಪ್ರಕರಣಗಳಿದ್ದು, 1,85,872 ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ ಎಂದು ಸುಧಾಕರ್ ಹೇಳಿದ್ದಾರೆ.
ಕೋವಿಡ್ ಕುರಿತು ತಪ್ಪು ಮಾಹಿತಿ ಹರಡುವ ವೈದ್ಯರ ವಿರುದ್ಧ ಕ್ರಮ
ಬೆಂಗಳೂರು, ಜ. 18: ಕೋವಿಡ್-19 ಕುರಿತು ತಪ್ಪು ಮಾಹಿತಿ ಹರಡುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೆಲವು ವೈದ್ಯರಿಗೆ ಮಂಗಳವಾರ ಎಚ್ಚರಿಕೆ ನೀಡಿದೆ. ಕೆಲವು ವೃತ್ತಿಪರ ವೈದ್ಯರು ಕೋವಿಡ್-19 ಕುರಿತು ಅಪೂರ್ಣ, ತಪ್ಪಾದ ಮತ್ತು ಆಧಾರರಹಿತ ಮಾಹಿತಿಯನ್ನು ನೀಡುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇಂತಹ ತಪ್ಪು ಮಾಹಿತಿಯು ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಕೋವಿಡ್ ಸನ್ನಿವೇಶದಲ್ಲಿ ಸಾರ್ವಜನಿಕರ ಗೊಂದಲಕ್ಕೆ ಕಾರಣವಾಗುತ್ತದೆ. ಆರೋಗ್ಯ ಮತ್ತು ಕಂದಾಯ ಅಧಿಕಾರಿಗಳು ಹೊರಡಿಸಿದ ಮಾರ್ಗಸೂಚಿಗಳನ್ನು ಪಾಲಿಸದಿರಲು ಜನರನ್ನು ಪೆÇ್ರೀತ್ಸಾಹಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಕೊರೊನಾಗೆ ಸಂಬಂಧಿಸಿದಂತೆ ಸಾರ್ವಜನಿಕರೊಂದಿಗೆ ಸಂವಹನ ನಡೆಸುವಾಗ ವೈದ್ಯಕೀಯ ವೃತ್ತಿಪರರು ಹೆಚ್ಚಿನ ಕಾಳಜಿ ಮತ್ತು ಎಚ್ಚರಿಕೆಯನ್ನು ವಹಿಸಬೇಕು. ಮಾಧ್ಯಮ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಕೋವಿಡ್-19 ಕುರಿತು ಯಾವುದೇ ತಪ್ಪು ಮಾಹಿತಿ ಅಥವಾ ವಾಸ್ತವಿಕವಲ್ಲದ ಡೇಟಾವನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ ಮತ್ತು ವಿಪತ್ತು ನಿರ್ವಹಣಾ ಕಾಯಿದೆ, 2005 ರ ಸೆಕ್ಷನ್ 54 ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗ ಕಾಯ್ದೆಯ ಸೆಕ್ಷನ್ 4 (ಕೆ) ಪ್ರಕಾರ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಆಂಟ್ರಿಕ್ಸ್-ದೇವಾಸ್ ಒಪ್ಪಂದ:ಕಾಂಗ್ರೆಸ್ ತರಾಟೆಗೆ
ನವದೆಹಲಿ, ಜ. 18: ಯುಪಿಎ ಸರ್ಕಾರ ತನ್ನ ಅವಧಿಯಲ್ಲಿ ದೇವಾಸ್ ಮಲ್ಟಿಮೀಡಿಯಾ ಸಂಸ್ಥೆ ಜೊತೆ ವಿವಾದಾತ್ಮಕ ಒಪ್ಪಂದ ಮಾಡಿಕೊಂಡ ಕುರಿತಾಗಿ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೊಂದು ದೊಡ್ಡ ಹಗರಣ ಎಂದಿರುವ ಅವರು ಸೇನೆಗೆ ಮೀಸಲಾಗಿದ್ದ ಎಸ್ ಬ್ಯಾಂಡ್ ಸ್ಯಾಟಲೈಟ್ ಸ್ಪೆಕ್ಟ್ರಮ್ ಅನ್ನು ದೇವಾಸ್ ಸಂಸ್ಥೆಗೆ ಮಾರಾಟ ಮಾಡಿದ್ದು ಕಾನೂನು ಬಾಹಿರ ಎಂದಿದ್ದಾರೆ. 2005ರಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಾರಿಷಸ್ ಮೂಲದ ಸಂಸ್ಥೆ ಜೊತೆ ನಡೆಸಲಾಗಿದ್ದ ಒಪ್ಪಂದ ಭಾರತೀಯರು ಹಾಗೂ ಭಾರತ ದೇಶಕ್ಕೆ ಮಾಡಿದ ವಂಚನೆ ಎಂದು ನಿರ್ಮಲಾ ಸೀತಾರಾಮನ್ ಕಿಡಿ ಕಾರಿದ್ದಾರೆ. 2005ರಲ್ಲಿ ಇಸ್ರೊ ಸಂಸ್ಥೆಯ ಕಮರ್ಷಿಯಲ್ ಅಂಗವಾದ ಆಂಟ್ರಿಕ್ಸ್ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡ ದೇವಾಸ್ ಸಂಸ್ಥೆ ಮೊಬೈಲ್ ಬಳಕೆದಾರರಿಗೆ ಮಲ್ಟಿಮೀಡಿಯಾ ಸವಲತ್ತು ಗಳನ್ನು ನೀಡಲು ಒಪ್ಪಿಕೊಂಡಿತ್ತು. ಅದಕ್ಕಾಗಿ ಸೇನೆಗೆಂದು ಮೀಸಲಾಗಿದ್ದ ಎಸ್ ಬ್ಯಾಂಡ್ ಸ್ಯಾಟಲೈಟ್ ಸ್ಪೆಕ್ಟ್ರಮ್ ಅನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಿತ್ತು. ಬ್ರಾಡ್ ಬ್ಯಾಂಡ್ ಹರಾಜು ಪ್ರಕ್ರಿಯೆಯಲ್ಲಿ ಅಕ್ರಮ ಕಂಡುಬಂದ ಹಿನ್ನೆಲೆಯಲ್ಲಿ 2005ರ ಒಪ್ಪಂದವನ್ನು ನ್ಯಾಯಾಲಯ ರದ್ದುಪಡಿಸಿತ್ತು. ಇದರ ವಿರುದ್ಧ ದೇವಾಸ್ ಸಂಸ್ಥೆ ಅಂತಾರಾಷ್ಟ್ರೀಯ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿತ್ತು. ದೂರಿನ ವಿಚಾರಣೆ ನಡೆದು ಭಾರತಕ್ಕೆ 1.2 ಶತಕೋಟಿ ಡಾಲರ್ ಪರಿಹಾರ ನೀಡಲು ತೀರ್ಪು ನೀಡಲಾಗಿತ್ತು. ಭಾರತದ ತೆರಿಗೆದಾರರ ಹಣವನ್ನು ಈ ರೀತಿ ವಂಚಕರ ಪಾಲಾಗುವುದನ್ನು ತಡೆಗಟ್ಟಲು ತಮ್ಮ ಸರ್ಕಾರ ಶ್ರಮಿಸುತ್ತಿರುವುದಾಗಿ ಸೀತಾರಾಮನ್ ಹೇಳಿದ್ದಾರೆ.
ಹಿಮದಲ್ಲಿ ಸಿಲುಕಿದ್ದ 30 ನಾಗರಿಕರ ರಕ್ಷಣೆ
ನವದೆಹಲಿ, ಜ. 18: ಹಿಮಪಾತ ಮತ್ತು ಎರಡು ಹಿಮಕುಸಿತದಿಂದಾಗಿ ಜಮ್ಮು ಮತ್ತು ಕಾಶ್ಮೀರದ ಚೌಕಿಬಾಲ್-ತಂಗ್ಧರ್ ಹೆದ್ದಾರಿಯ ಖೂನಿ ನಾಲಾ ಮತ್ತು ಎಸ್‍ಎಂ ಹಿಲ್ ಬಳಿ ಹಿಮದಲ್ಲಿ ಸಿಲುಕಿಕೊಂಡಿದ್ದ 30 ನಾಗರಿಕರನ್ನು ಭಾರತೀಯ ಸಶಸ್ತ್ರ ಪಡೆ ರಕ್ಷಿಸಿದೆ. ಸೋಮವಾರ ಮತ್ತು ಮಂಗಳವಾರ ಮಧ್ಯರಾತ್ರಿ ಸೈನಿಕರು ನಡೆಸಿದ ಸುಮಾರು ಐದರಿಂದ ಆರು ಗಂಟೆಗಳ ಕಾಲ ಕಾರ್ಯಾಚರಣೆಯಿಂದ 30 ನಾಗರಿಕರು ಜೀವಂತವಾಗಿ ಬದುಕುಳಿದಿದ್ದಾರೆ. ಅಧಿಕಾರಿಗಳ ಪ್ರಕಾರ, ನಾಗರಿಕರು ಮತ್ತು ಅವರ ವಾಹನಗಳು ಹಿಮದಲ್ಲಿ ಸಿಲುಕಿರುವ ಬಗ್ಗೆ ಮಾಹಿತಿ ಎನ್‍ಸಿ ಪಾಸ್‍ನಲ್ಲಿದ್ದ ಸೈನಿಕರಿಗೆ ತಲುಪಿತು. ತಕ್ಷಣ, ಭಾರತೀಯ ಸೇನೆಯ ಎರಡು ಹಿಮಪಾತ ರಕ್ಷಣಾ ತಂಡಗಳು ಮತ್ತು ಜನರಲ್ ರಿಸರ್ವ್ ಇಂಜಿನಿಯರ್ ಫೆÇೀರ್ಸ್ ತಂಡವನ್ನು ಸÀಜ್ಜುಗೊಳಿಸಲಾಯಿತು. ಅವಳಿ ಹಿಮಕುಸಿತಗಳಿಂದ ಕೂಡಿದ ಪ್ರತಿಕೂಲ ಹವಾಮಾನದ ಹೊರತಾಗಿಯೂ 14 ನಾಗರಿಕರನ್ನು ರಕ್ಷಿಸಿ ನೀಲಂ ಮತ್ತು 16 ನಾಗರಿಕರನ್ನು ಕರೆತರಲಾಯಿತು, ಇದನ್ನು ಸಾಧನಾ ಪಾಸ್ ಎಂದೂ ಕರೆಯುತ್ತಾರೆ. ರಕ್ಷಿಸಲ್ಪಟ್ಟ ಎಲ್ಲಾ ನಾಗರಿಕರಿಗೂ ರಾತ್ರಿ ಆಹಾರ, ವೈದ್ಯಕೀಯ ಚಿಕಿತ್ಸೆ ಮತ್ತು ಆಶ್ರಯವನ್ನು ಒದಗಿಸಲಾಗಿದೆ. ಮಂಗಳವಾರ ಹಗಲಿನಲ್ಲಿ ಹನ್ನೆರಡು ವಾಹನಗಳನ್ನು ಹಿಂಪಡೆಯಲಾಯಿತು. ನಂತರ ಹಿಮಕುಸಿತ ಮತ್ತು ರಸ್ತೆಯಿಂದ ಹಿಮ ಜಾರುವಿಕೆಗಳನ್ನು ತೆರವುಗೊಳಿಸಲಾಯಿತು. ಸಶಸ್ತ್ರ ಪಡೆಗಳು ಕಳೆದ ವರ್ಷವೂ ಖೂನಿ ನಾಲಾ ಬಳಿ ನಾಗರಿಕರನ್ನು ರಕ್ಷಿಸಿದ್ದವು.
ಚೀನಾದಿಂದ ಪ್ಯಾಂಗಾಂಗ್ ಸರೋವರದ ಬಳಿ ಅಕ್ರಮ ಸೇತುವೆ
ನವದೆಹಲಿ, ಜ. 18: ಭಾರತದ ಗಡಿಯಲ್ಲಿ ಕ್ಯಾತೆ ತೆಗೆಯುವುದನ್ನು ಮತ್ತೆ ಚೀನಾ ಮುಂದುವರಿಸಿದೆ. ಪೂರ್ವ ಲಡಾಖ್ ಗಡಿಯಲ್ಲಿ ಭಾರತ ಮತ್ತು ಚೀನಾ ನಡುವೆ ಮತ್ತೆ ಉದ್ವಿಗ್ನತೆ ಸೃಷ್ಟಿಸುವ ಕಾರ್ಯಕ್ಕೆ ಚೀನಾ ಕೈ ಹಾಕಿದೆ. ಚೀನಾ ಪ್ಯಾಂಗಾಂಗ್ ತ್ಸೋ ಸರೋವರದ ದಡದಲ್ಲಿ ಸೇತುವೆಯನ್ನು ನಿರ್ಮಾಣ ಮಾಡುತ್ತಿದೆ. ಈ ಸೇತುವೆ 400 ಮೀಟರ್‍ಗಿಂತಲೂ ಹೆಚ್ಚು ಉದ್ದವಾಗಿದೆ. ಈ ಬ್ರಿಡ್ಜ್ ಪೂರ್ಣಗೊಂಡ ಬಳಿಕ ಈ ಪ್ರದೇಶದಲ್ಲಿ ಸೇನೆ ನಿಯೋಜನೆಗೆ ಚೀನಾಗೆ ಹೆಚ್ಚಿನ ಅನುಕೂಲವಾಗಲಿದೆ. ಇದು ಪೂರ್ವ ಲಡಾಖ್‍ನ ಸಮೀಪವಿರುವ ಪ್ಯಾಂಗೊಂಗ್ ತ್ಸೋ ಸರೋವರವನ್ನು ಹೊಂದಿರುವ ಈ ಪ್ರದೇಶ, ಭಾರತ ಹಾಗೂ ಚೀನಾದ ಮಧ್ಯೆ ಬಿಕ್ಕಟ್ಟಿಗೆ ಕಾರಣವಾಗಿದೆ. ಸೇತುವೆಯು 8 ಮೀಟರ್ ಅಗಲವಿದ್ದು, ಪ್ಯಾಂಗೊಂಗ್‍ನ ಉತ್ತರ ದಂಡೆಯಲ್ಲಿರುವ ಚೀನಾದ ಸೈನ್ಯದ ಮೈದಾನದ ದಕ್ಷಿಣಕ್ಕೆ ಈ ಸೇತುವೆ ನಿರ್ಮಾಣವಾಗುತ್ತಿದೆ. ಕಾಮಗಾರಿಯ ವೇಗ ಇನ್ನೇನು ಕೆಲವೇ ತಿಂಗಳಲ್ಲಿ ಸೇತುವೆ ಸಿದ್ಧಗೊಳ್ಳುವ ಸಾಧ್ಯತೆ ಇದ್ದು, ಭಾರತದ ಕಳವಳಕ್ಕೆ ಕಾರಣವಾಗಿದೆ.
ಮಕ್ಕಳ ಆರೋಗ್ಯ ತಪಾಸಣೆಗೆ ಒತ್ತು ನೀಡಲು ಸೂಚನೆ
ಬೆಂಗಳೂರು, ಜ. 18: ಎಲ್ಲಾ ಜಿಲ್ಲೆಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ. 18 ಜಿಲ್ಲೆಗಳ ಡಿಸಿಗಳು, ಜಿಲ್ಲಾ ಪಂಚಾಯಿತಿ ಸಿಇಒಗಳು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ಇಂದು ಕೊರೊನಾ ಲಸಿಕಾ ಅಭಿಯಾನದ ಪ್ರಗತಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ, ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು ತಾಲೂಕುಗಳಿಗೆ ಭೇಟಿ ನೀಡಿ ಔಷಧ ವಿತರಣೆ ಬಗ್ಗೆ ಪರಿಶೀಲಿಸಬೇಕು, ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಮೇಲ್ವಿಚಾರಣೆ ಕೈಗೊಳ್ಳಲು ಸೂಚಿಸಲಾಯಿತು. ಜಿಲ್ಲಾಡಳಿತ ದಕ್ಷತೆಯಿಂದ ಪ್ರತಿ ಗ್ರಾಮದ ಕಟ್ಟ ಕಡೆಯ ಮನೆಗೂ ಔಷಧ ಕಿಟ್‍ಗಳನ್ನು ತಲುಪಿಸಬೇಕು, ಹೋಮ್ ಐಸೋಲೇಶನ್ ನಲ್ಲಿರುವವರಿಗೆ ಸರಿಯಾದ ಚಿಕಿತ್ಸೆ ನೀಡಬೇಕು, ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮ ಪ್ರಾರಂಭಿಸಿ, ವೈದ್ಯರು ಮನೆ ಮನೆಗೆ ಭೇಟಿ ನೀಡಬೇಕು. ಇದಕ್ಕೆ ವಿಶೇಷ ಮಾರ್ಗಸೂಚಿ ರೂಪಿಸಲು ನಿರ್ಧರಿಸಲಾಯಿತು. ಎಲ್ಲ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಹೆಚ್ಚಿರುವುದರಿಂದ ಕೋ-ಮಾರ್ಬಿಡಿಟಿ ಇರುವವರನ್ನು ಗುರುತಿಸಿ, ಹೋಮ್ ಐಸೋಲೇಶನ್‍ನಲ್ಲಿರುವವರಿಗೆ ಪರೀಕ್ಷೆ ಮಾಡಿ ಚಿಕಿತ್ಸೆ ನೀಡುವಂತೆ ಸಲಹೆ ನೀಡಲಾಯಿತು.