ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ

ಮಡಿಕೇರಿ, ಜ. 18: ಜಂಬೂರು ನಿರಾಶ್ರಿತರ ಬಡಾವಣೆಯಲ್ಲಿನ ಸಮಸ್ಯೆ ಪರಿಹಾರಕ್ಕೆ ಸಂಬಂಧ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ

ಡಾ. ಬಿ.ಸಿ. ಸತೀಶ ಅವರು ಭರವಸೆ ನೀಡಿದರು.

ತಾ. 18 ರಂದು ‘ಶಕ್ತಿ’ಯಲ್ಲಿ ಪ್ರಕಟಗೊಂಡ ‘ಜಂಬೂರು ನಿರಾಶ್ರಿತರ ಬಡಾವಣೆಯಲ್ಲಿ ಸಮಸ್ಯೆಗಳ ಸರಮಾಲೆ’ ಎಂಬ ವರದಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲಾಗಿದ್ದು, ಕೆಲವರು ಮನೆಯನ್ನು ಬಾಡಿಗೆ ನೀಡಿದ್ದಾರೆ. ಕೆಲವರು ಮಾರಾಟ ಮಾಡಿ ತೆರಳಿದ್ದಾರೆ. ಅಲ್ಲದೆ ಮನೆಯನ್ನು ಖಾಲಿ ಬಿಟ್ಟು ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂಬ ಮಾಹಿತಿ ಇದ್ದು, ಈ ಬಗ್ಗೆ ಕ್ರಮವಹಿಸಲಾಗುವುದು. ಬಡಾವಣೆಯಲ್ಲಿರುವ ಸಮಸ್ಯೆ ಬಗ್ಗೆ ಸಂಬಂಧಪಟ್ಟ ಇಲಾಖೆಯ ಉನ್ನತ ಅಧಿಕಾರಿಗಳನ್ನು 2-3 ದಿನಗಳಲ್ಲಿ ಕರೆಸಿ ಸ್ಥಳ ಪರಿಶೀಲನೆ ಮಾಡಿ ಕ್ರಮಕ್ಕೆ ಮುಂದಾಗಲಾಗುವುದು ಎಂದರು.

ಕಸ ವಿಲೇವಾರಿ ಸಮಸ್ಯೆ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿ ಕೂಡ ಮುತುವರ್ಜಿ ವಹಿಸಬೇಕು. ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು. ಜನತೆ ಕೂಡ ತ್ಯಾಜ್ಯ ಸಮಸ್ಯೆ ನಿರ್ಮೂಲನೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಬಡಾವಣೆಯಲ್ಲಿ ಅಂಗನವಾಡಿ ಹಾಗೂ ಆರೋಗ್ಯ ಕೇಂದ್ರ ಸ್ಥಾಪಿಸುವ ನಿಟ್ಟಿನಲ್ಲಿ ಶಾಸಕರು ಸೂಚಿಸಿದ್ದಾರೆ. ಈ ಹಿನ್ನೆಲೆ ಕೂಡ ಯೋಜನೆ ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.