ಚೆಟ್ಟಳ್ಳಿ, ಜ. 18: ಚೆಟ್ಟಳ್ಳಿ-ಕತ್ತಲೆಕಾಡು ಮುಖ್ಯರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕಾಂಕ್ರಿಟ್ ತಡೆಗೋಡೆ ಅವೈಜ್ಞಾನಿಕ ಕಾವiಗಾರಿಯಿಂದಾಗಿ ನಿರ್ಮಾಣ ಹಂತದಲ್ಲೇ ಕುಸಿದು ಬಿದ್ದಿದೆ.
ಕಳೆದೆರಡು ವರ್ಷಗಳ ಮಹಾಮಳೆಯ ಪರಿಣಾಮ ಚೆಟ್ಟಳ್ಳಿ-ಕತ್ತಲೆಕಾಡು ಮಾರ್ಗದಲ್ಲಿ ಬರೆಕುಸಿತ ಉಂಟಾದೆಡೆ ಕೋಟಿ ಖರ್ಚಿನಲ್ಲಿ ಕಾಂಕ್ರಿಟ್ ತಡೆಗೋಡೆ ಕಾಮಗಾರಿ ಕಳೆದ ಮಳೆಗಾಲದಿಂದ ಆರಂಭ ಗೊಂಡು ಈಗಲೂ ನಡೆಯುತ್ತಿದೆ. ಭೂಕುಸಿತವಾದ ಜಾಗದಲ್ಲಿ ತಡೆಗೋಡೆಯನ್ನು ನಿರ್ಮಿಸುತ್ತಿದ್ದು, ಹಲವೆಡೆ ತಡೆಗೋಡೆ ಹಾಗೂ ಮೋರಿ ನಿರ್ಮಾಣದ ಕಾಮಗಾರಿ ಮುಗಿಯುವ ಹಂತದಲ್ಲಿದೆ. ಕೊನೆಯ ತಡೆಗೋಡೆ ಕಾಮಗಾರಿ ಕಳೆದೆರಡು ವಾರದ ಹಿಂದೆ ನಡೆದಿದ್ದು, ತಡೆಗೋಡೆ ನಿರ್ಮಾಣವಾದ ಕೂಡಲೇ ತಡೆಗೋಡೆ ಅರ್ಧಭಾಗ ಕತ್ತರಿಸಿ ಕೆಳಗಿನ ಕಾಫಿ ತೋಟಕ್ಕೆ ಕುಸಿದು ಹೋಗಿದೆ.ಲೋಡುಗಟ್ಟಲೆ ಸುರಿದ
ಮಣ್ಣಿನಿಂದ ಕುಸಿತ..
ಜರಿದ ಮಣ್ಣನೆಲ್ಲ ಹಿಟಾಚಿ ಯಂತ್ರದಿಂದ ತೆಗೆದು ಬರೆಯ ಅರ್ಧ ಭಾಗದಿಂದ ತಡೆಗೋಡೆಯನ್ನು ಮಾಡಲಾಗಿದೆ. ಕೆಲವೆಡೆ ತಡೆಗೋಡೆಯನ್ನು ನಿರ್ಮಿಸಿ ಲೋಡುಗಟ್ಟಲೆ ಮಣ್ಣನ್ನು ತುಂಬಿ ತಡೆಗೋಡೆಯನ್ನು ಮುಚ್ಚಲಾಗುತ್ತಿದೆ. ಆದರೆ ಚಿಕ್ಕಅಭ್ಯಾಲದ ಸಮೀಪದ ಕೊನೆಯ ತಡೆಗೋಡೆ ಕಾಮಗಾರಿ ನಡೆಸಿ ಒಂದೆರಡು ದಿನಗಳಲ್ಲಿ 80 ಲೋಡು ಮಣ್ಣನ್ನು ಸುರಿದ ಪರಿಣಾಮ ತಡೆಗೋಡೆ ಕುಸಿದು ಬಿದ್ದಿದೆ.
ಕುಸಿತಗೊಂಡ ಜಾಗದಲ್ಲೇ ಹಿಟಾಚಿ ಯಂತ್ರದಿಂದ ಅದನ್ನೆ ಸಮತಟ್ಟು ಮಾಡಿ ಅದರ ಮೇಲೆಯೇ ಮತ್ತೊಂದು ತಡೆಗೋಡೆ ನಿರ್ಮಿಸಲು ಪ್ರಯತ್ನ ನಡೆಯುತ್ತಿದೆ. ಅವೈಜ್ಞಾನಿಕ ರೀತಿಯ ತಡೆಗೋಡೆಯಿಂದಾಗಿ ಕುಸಿದ ತಡೆಗೋಡೆ ಕಾಣದಂತೆ ರಸ್ತೆ ಬದಿಗೆ ಶೇಡ್‍ನೆಟ್ಟ್‍ಗಳಿಂದ ಮರೆಮಾಡಲಾಗಿದೆ.
ಬರೆಯನ್ನೆ ಕೊರೆಯುತ್ತಿರುವರು..!
ತೀರಾ ಅಪಾಯಕಾರಿಯಾದ ಚೆಟ್ಟಳ್ಳಿ-ಕತ್ತಲೆಕಾಡು ರಸ್ತೆಯ ತಡೆಗೋಡೆ ಕಾಮಗಾರಿ ನಡೆಯುತಿದ್ದು ಅದನ್ನು ರಸ್ತೆಮಟ್ಟಕ್ಕೆ ಎತ್ತರಿಸಲು ನೂರಾರು ಲೋಡುಗಟ್ಟಲೆ ಮಣ್ಣು ಬೇಕಾಗಿದೆ. ಜೆಸಿಬಿ, ಹಿಟಾಚಿ ಯಂತ್ರಗಳು ನಿತ್ಯವೂ ಸಾವಿರಾರು ಟನ್‍ನಷ್ಟು ಮಣ್ಣನ್ನು ಕೊರೆಯುತ್ತಿದೆ. ಆ ಮಣ್ಣನೆಲ್ಲ ತಡೆಗೋಡೆಗೆ ಸುರಿದು ಮುಚ್ಚಲಾಗುತ್ತಿದ್ದು, ಇನ್ನೂ ನೂರಾರು ಲೋಡು ಮಣ್ಣಿಗಾಗಿ ನಿತ್ಯವೂ ಅಪಾಯಕಾರಿ ಬರೆಗಳನ್ನು ಕೊರೆಯಲಾಗುತ್ತಿದೆ. ಮುಂದಿನ ಮಳೆಗಾಲದಲ್ಲಿ ಭಾರೀ ಅಪಾಯ ಕಾದಿದೆ.
(ಮೊದಲ ಪುಟದಿಂದ)
ಸ್ಥಳೀಯರ ಆರೋಪ
ಕಳೆದ ಬಾರಿಯ ಮಹಾಮಳೆಗೆ ಭಾರೀ ಪ್ರಮಾಣದ ಬರೆಕುಸಿತದಿಂದ ಸ್ಥಳೀಯರಾದ ವಕೀಲ ಕಡೇಮಡ ವಿನ್ಸಿ ಅಪ್ಪಯ್ಯ ಅವರ 6 ಎಕರೆ ಕಾಫಿ ತೋಟ ಹಾಗೂ ಹಲವರ ಕಾಫಿ ತೋಟಕ್ಕೆ ಭಾರೀ ನಷ್ಟ ಉಂಟಾಗಿದೆ. ನಂತರದಲ್ಲಿ ಶಾಸಕರ ಮುತುವರ್ಜಿಯಿಂದ ಲೋಕೋಪಯೋಗಿ ಇಲಾಖೆ ಕಾಮಗಾರಿಯನ್ನು ಹಲವು ಪ್ರತ್ಯೇಕ ಟೆಂಡರ್‍ಗಳ ಮೂಲಕ ನಡೆಸುತ್ತಿದೆ. ಆದರೆ ತಡೆಗೋಡೆ ಕಾಮಗಾರಿಯನ್ನು ವೈಜ್ಞಾನಿಕವಾಗಿ ಕೈಗೊಳ್ಳÀಲಾಗುತಿಲ್ಲ. ಕೆಲವೆಡೆ ನೂತನ ನಿರ್ಮಾಣದ ತಡೆಗೋಡೆ ಅಪಾಯಕಾರಿಯಾಗಿದೆ. ನಿರ್ಮಾಣದ ಹಂತದಲ್ಲೇ ಕುಸಿದಿದ್ದು, ಪರಿಶೀಲಿಸಿದ ಇಂಜಿನಿಯರುಗಳು ಹಾಗೂ ಗುತ್ತಿಗೆದಾರರೇ ಕಾರಣರಾಗುತ್ತಾರೆ. ಹೀಗಾದರೆ ಮುಂದಿನ ಮಳೆಗಾಲದಲ್ಲಿ ತಡೆಗೋಡೆ ಹೇಗೆ ಉಳಿಯಲು ಸಾಧ್ಯ? ಸರಕಾರದ ಕೋಟಿಗಟ್ಟಲೆ ಹಣ ನೀರುಪಾಲಾದಂತಾಗುವುದೆಂದು ಸ್ಥಳೀಯರು ಆರೋಪಿಸುತ್ತಾರೆ.
ಲೋಕೋಪಯೋಗಿ ಇಂಜಿನಿಯರ್‍ಗಳಿಗೆ ಅವೈಜ್ಞಾನಿಕ ಕಾಮಗಾರಿ ಹಾಗೂ ಬರೆಯನ್ನು ಕೊರೆಯುವುದರಿಂದ ತೊಂದರೆಯಾಗಲಿದೆ ಎಂದು ಹಲವು ಬಾರಿ ತಿಳಿಸಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರಾದ ವಿನ್ಸಿ ಅಪ್ಪಯ್ಯ. ಜಿಲ್ಲಾಧಿಕಾರಿಗಳು, ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಮೇಲಧಿಕಾರಿಗಳು ಖುದ್ದಾಗಿ ಪರಿಶೀಲಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. -ಪುತ್ತರಿರ ಕರುಣ್ ಕಾಳಯ್ಯ