ಭಾಗಮಂಡಲ, ಜ. 18: ಪಟ್ಟಿಘಾಟ್ ಮೀಸಲು ಅರಣ್ಯ ವ್ಯಾಪ್ತಿಯ ಭಾಗಮಂಡಲ ವಲಯ, ತೊಡಿಕಾನ ಉಪ ವಲಯದ ತಾವೂರು ಗ್ರಾಮದ ನಿಶಾನೆ ಮೊಟ್ಟೆಯಲ್ಲಿ ಅಕ್ರಮವಾಗಿ ಹರಳು ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತ್ತುಗೊಂಡಿರುವ ಅರಣ್ಯ ಇಲಾಖಾ ಸಿಬ್ಬಂದಿಗಳು ಸೇರಿದಂತೆ ಆರೋಪಿಗಳನ್ನು ಶೀಘ್ರ ಬಂಧಿಸಬೇಕು; ತಪ್ಪಿದಲ್ಲಿ ಭಾಗಮಂಡಲದಲ್ಲಿ ಪ್ರತಿಭಟನೆ ನಡೆಸುವ ಬಗ್ಗೆ ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಇಲಾಖೆಯೇ ಸಮಸ್ಯೆ..!

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪಮಿತ ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ವಿವಿಧ ಇಲಾಖಾ ಅಧಿಕಾರಿಗಳು ತಮ್ಮ ಇಲಾಖೆಗಳ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಅರಣ್ಯ ಇಲಾಖೆಯ ಸರದಿ ಬಂದಾಗ ವಲಯ ಅರಣ್ಯಾಧಿಕಾರಿ ದೇವರಾಜು ತಾವು ಕುಳಿತಿದ್ದ ಸ್ಥಳದಿಂದಲೇ ಮಾಹಿತಿ ನೀಡುತ್ತಿದ್ದಂತೆ ಗ್ರಾಮಸ್ಥರು ಅವರನ್ನು ವೇದಿಕೆಗೆ ಆಗಮಿಸಿ ಮಾಹಿತಿ ನೀಡುವಂತೆ ಆಹ್ವಾನಿಸಿದರು. ವೇದಿಕೆಗೆ ಆಗಮಿಸಿದ

(ಮೊದಲ ಪುಟದಿಂದ) ವಲಯಾರಣ್ಯಾಧಿಕಾರಿಗಳು ಸಮಸ್ಯೆಗಳಿದ್ದರೆ ಹೇಳಿ ಎಂದು ಹೇಳಿದರು. ಈ ಸಂದರ್ಭ ಮಾತನಾಡಿದ ನಾಗರಿಕ ವೇದಿಕೆ ಮುಖಂಡ ಕುದುಕುಳಿ ಭರತ್; ನೀವುಗಳೇ ನಮಗೆ ದೊಡ್ಡ ಸಮಸ್ಯೆ, 2000ದಲ್ಲಿ ಪರವಾನಗಿ ಪಡೆದು ಸರ್ದಾರ್ ಎಂಬವರು ನಿಶಾನೆಮೊಟ್ಟೆಯಲ್ಲಿ ಹರಳು ಕಲ್ಲು ಗಣಿಗಾರಿಗೆ ನಡೆಸಿದ ಸಂದರ್ಭ ಇಲಾಖೆಯವರು ನಾಲ್ವರ ಮೇಲೆ ಮೊಕದ್ದಮೆ ದಾಖಲಿಸಿ ಬಂಧಿಸಿದ್ದೀರ, ಇದೀಗ ಏನೂ ಕ್ರಮ ಆಗಿಲ್ಲ, ಆ ನಾಲ್ವರಿಗೆ ಇಲಾಖೆಯಿಂದ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ಗ್ರಾಮದೊಳಗಡೆ ರಸ್ತೆ ನಿರ್ಮಾಣ ಮಾಡಿದರೆ ಪರಿಸರವಾದಿಗಳು ಎದ್ದು ನಿಲ್ಲುತ್ತಾರೆ, ಆದರೆ, ಅರಣ್ಯ ಸಂಪತ್ತು ಲೂಟಿಯಾದರೆ ಸದ್ದು ಮಾಡುವದಿಲ್ಲ, ಅವರು ನಿಮ್ಮ ಸ್ನೇಹಿತರೇ? ಎಂದು ಪ್ರಶ್ನಿಸಿದರು.

ಅರಣ್ಯ ಇಲಾಖಾ ಕ್ಯಾಂಪ್ ಬಳಿಯಲ್ಲೇ ಹೊಂಡ ಕೊರೆದು ಗಣಿಗಾರಿಕೆ ನಡೆಸಲು ಬಿಟ್ಟಿದ್ದೇಕೆ? ಇನ್ನೂ ನೀವು ಅಲ್ಲಿ ಇರಬೇಕಾ ಬಿಟ್ಟು ಬನ್ನಿ, ನಿಮ್ಮ ಸೇವೆ ಅಗತ್ಯವಿಲ್ಲ. ನೀವುಗಳು ದಂಧೆಕೋರರೊಂದಿಗೆ ಸೇರಿಕೊಂಡಿರುವದಕ್ಕೆ ಅಲ್ಲಿ ಸಿಕ್ಕಿರುವ ವಸ್ತುಗಳೇ ಸಾಕ್ಷಿ ಎಂದು ಆರೋಪಿಸಿದರು.

ಅಧಿಕಾರಿಗಳೇ ನೇರ ಹೊಣೆ..!

ತಾವೂರು ಗ್ರಾಮಸ್ಥ ಕುದುಪಜೆ ಪ್ರಕಾಶ್ ಮಾತನಾಡಿ; ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಮೂರು ಬಾರಿ ಹೋಗಿ ಪರಿಶೀಲನೆ ನಡೆಸಿದರೂ ಸ್ಥಳ ಪತ್ತೆ ಮಾಡದೆ ಯಾವದೇ ಅಕ್ರಮ ನಡೆದಿರುವದಿಲ್ಲವೆಂದು ವರದಿ ನೀಡಿದ್ದಾರೆ, ಪತ್ರಿಕೆಯಲ್ಲಿ ನಿರಂತರ ವರದಿ ಬಂದ ಬಳಿಕ ಅರಣ್ಯ ಸಂಚಾರಿ ದಳದವರು ಸ್ಥಳಕ್ಕೆ ಭೇಟಿ ನೀಡಿ ಗಣಿಗಾರಿಕೆ ನಡೆದ ಸ್ಥಳವನ್ನು ಪತ್ತೆ ಹಚ್ಚಿದ್ದಾರೆ. ಸಹಾಯಕ ಅರಣ್ಯಾಧಿಕಾರಿಗಳು ಆ ರೀತಿಯ ವರದಿ ನೀಡಲು ಕಾರಣವೇನು? ಇದರಲ್ಲಿ ಸಹಾಯಕ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿಗಳ ನೇರ ಶಾಮೀಲಾತಿ ಇದೆ, ಇಲಾಖೆಯೇ ನೇರ ಕಾರಣ ಎಂದು ಆರೋಪಿಸಿದರು.

ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ಪ್ರಮುಖ ಸುನಿಲ್ ಪತ್ರಾವೋ ಇಷ್ಟೆಲ್ಲ ಆರೋಪ ಮಾಡುತ್ತಿದ್ದರೂ ವಲಯಾರಣ್ಯಾಧಿಕಾರಿಗಳು ಏಕೆ ಯಾವದೇ ಸಮಜಾಯಿಷಿಕೆ ನೀಡುತ್ತಿಲ್ಲವೆಂದು ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ಅರಣ್ಯಾಧಿಕಾರಿ ದೇವರಾಜು; ಈ ಸಂಬಂಧ ಈರ್ವರನ್ನು ಅಮಾನತ್ತುಗೊಳಿಸಿರುವದಾಗಿ ಉತ್ತರವಿತ್ತರು.

ಕದಿಯಲು ಕಾವಲು ಹಾಕಿದ್ದಾ..!?

ಅಧಿಕಾರಿಯ ಈ ಉತ್ತರಕ್ಕೆ ಗ್ರಾಮಸ್ಥರಿಂದ ತೀವ್ರ ಆಕ್ರೋಶ ವ್ಯಕ್ತಗೊಂಡಿತು. ಕೇವಲ ಸಿಬ್ಬಂದಿಗಳನ್ನು ಅಮಾನತ್ತುಗೊಳಿಸಿದರೆ ಸಮಸ್ಯೆಗೆ ಪರಿಹಾರ ಸಿಗುವದಿಲ್ಲ. ಇಂದು ಅಮಾನತ್ತು ಮಾಡಿ ನಂತರದಲ್ಲಿ ಮತ್ತೆ ಅವರುಗಳನ್ನು ಬೇರೆ ಕಡೆಗೆ ನಿಯೋಜಿಸಲಾಗುತ್ತದೆ. ಈ ರೀತಿಯ ಹಾರಿಕೆಯ ಉತ್ತರಗಳು ಬೇಡ, ಸಿಬ್ಬಂದಿಗಳ ಸಹಿತ ಆರೋಪಿಗಳನ್ನು ಬಂಧಿಸಬೇಕು; ಅರಣ್ಯ ಸಂಪತ್ತನ್ನು ಕದಿಯಲು ನಿಮ್ಮನ್ನು ಕಾವಲು ಹಾಕಿದ್ದಾ..? ಎಂಬಿತ್ಯಾದಿ ಖಾರವಾಗಿ ಆಕ್ರೋಶ ವ್ಯಕ್ತಪಡಿಸಿದರು. ಸಿಬ್ಬಂದಿಗಳು ಹಾಗೂ ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳುವಂತೆ ನಿರ್ಣಯ ಮಾಡಿ ಸರಕಾರಕ್ಕೆ ಕಳುಹಿಸಿಕೊಡಬೇಕೆಂದು ಒತ್ತಾಯಿಸಿದರು.

ಪೊಲೀಸ್ ತನಿಖೆಯಾಗಲಿ..!

ಮತ್ತೆ ಮಾತನಾಡಿದ ಭರತ್; ಈ ಅಕ್ರಮ ಗಣಿಗಾರಿಕೆಗೆ ಅರಣ್ಯ ಇಲಾಖೆಗೆ ರೂ. 50 ಕೋಟಿಯಷ್ಟು ಹಣ ಸಂದಾಯವಾಗಿರುವ ಬಗ್ಗೆ ತಿಳಿದುಬಂದಿದೆ. ಅರಣ್ಯ ರಕ್ಷಕರಿಂದ ಹಿಡಿದು ಅರಣ್ಯ ಸಂರಕ್ಷಣಾಧಿಕಾರಿವರೆಗೂ ಹಣ ಹಂಚಿಕೆಯಾಗಿದೆ. ಈ ಸಂಬಂಧ ಸಿಬ್ಬಂದಿಗಳು ಹಾಗೂ ಅಧಿಕಾರಿಗಳ ಮಂಪರು ಪರೀಕ್ಷೆ ಮಾಡಬೇಕೆಂದು ಒತ್ತಾಯಿಸಿದರು. ದೇವಂಗೋಡಿ ರಾಮಚಂದ್ರ ಮಾತನಾಡಿ; ಕೃಷಿ ಪಸಲು ಹಾಳು ಮಾಡುವ ಕಾಡು ಹಂದಿಗೆ ಗುಂಡು ಹೊಡೆದರೆ ಕೇಸ್ ಹಾಕುತ್ತಾರೆ, ಮನೆಗೆ ಸೌದೆಗೆಂದು ಮರದ ಕೊಂಬೆ ಕಡಿದರೂ ಕೇಸ್ ಹಾಕುತ್ತಾರೆ, ಆದರೆ, ಲಕ್ಷಾಂತರ ಮೌಲ್ಯದ ಅರಣ್ಯ ಸಂಪತ್ತನ್ನು ಲೂಟಿ ಮಾಡುವವರ ವಿರುದ್ಧ ಮಾತ್ರ ಯಾವದೇ ಕ್ರಮ ಕೈಗೊಳ್ಳುವದಿಲ್ಲ. ಅವರೊಂದಿಗೆ ಶಾಮೀಲಾಗಿ ಲೂಟಿ ಹೊಡೆಯುತ್ತಾರೆ ಎಂದು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅರಣ್ಯ ಇಲಾಖಾ ವ್ಯಾಪ್ತಿಯ ತನಿಖೆಯಿಂದ ಯಾವದೇ ಪ್ರಯೋಜನವಾಗುವದಿಲ್ಲ, ಎಲ್ಲರೂ ಶಾಮೀಲಾಗಿರುವದರಿಂದ ಏನೂ ಕ್ರಮ ಆಗುವದಿಲ್ಲ. ಹಾಗಾಗಿ ಪೊಲೀಸ್ ಇಲಾಖೆ, ಜಿಲ್ಲಾ ಪೊಲೀಸ್ ಅಪರಾಧ ಪತ್ತೆ ದಳಕ್ಕೆ ತನಿಖೆಗೆ ಈ ಪ್ರಕರಣವನ್ನು ವಹಿಸಬೇಕೆಂದು ಕುದುಪಜೆ ಪ್ರಕಾಶ್ ಒತ್ತಾಯಿಸಿದರು.

ಪ್ರತಿಭಟನೆ ನಿರ್ಣಯ..!

ಎಲ್ಲ ವಿಚಾರಗಳನ್ನು ಅವಲೋಕಿಸಿದ ಬಳಿಕ, ಮಾತನಾಡಿದ ಪಂಚಾಯ್ತಿ ಉಪಾಧ್ಯಕ್ಷ ಹೊಸೂರು ಸತೀಶ್‍ಕುಮಾರ್; ಕೇವಲ ಸಿಬ್ಬಂದಿಗಳನ್ನು ಅಮಾನತ್ತು ಮಾಡಿದರೆ ಸಾಲದು, ನೈಜಾಂಶದ ಬಗ್ಗೆ ತನಿಖೆಯಾಗಬೇಕು. ಅಮಾನತ್ತು ಮಾಡಲಾಗಿರುವ ಸಿಬ್ಬಂದಿಗಳನ್ನು ವಿಚಾರಣೆಗೆ ಒಳಪಡಿಸಿ ತನಿಖೆ ಮಾಡಬೇಕು. ಆರೋಪಿಗಳ ಬಂಧನ ಮಾಡಬೇಕು. ಗಣಿಗಾರಿಕೆ ಇದೇ ರೀತಿ ಮುಂದುವರಿದರೆ ಗಜಗಿರಿಯಂತೆ ನಿಶಾನೆ ಮೊಟ್ಟೆಯೂ ಕುಸಿಯುವ ಭೀತಿಯಿದೆ. ಶೀಘ್ರದಲ್ಲಿ ಈ ಕ್ರಮ ಆಗದಿದ್ದಲ್ಲಿ ಭಾಗಮಂಡಲದಲ್ಲಿ ಪ್ರತಿಭಟನೆ ನಡೆಸಲಾಗುವುದು. ಈ ಬಗ್ಗೆ ನಿರ್ಣಯ ಮಾಡಿ ಸರಕಾರಕ್ಕೆ ಸಲ್ಲಿಸಲಾಗುವದೆಂದು ಪ್ರಕಟಿಸಿದರು. ಸಭೆಯಲ್ಲಿ ಗ್ರಾ.ಪಂ. ಸದಸ್ಯರುಗಳು, ಗ್ರಾಮಸ್ಥರು, ವಿವಿಧ ಇಲಾಖಾಧಿಕಾರಿಗಳು ಇದ್ದರು.