ಭಾಗಮಂಡಲ, ಜ. 18: ಭಾಗಮಂಡಲ ಕ್ಷೇತ್ರವು ದೇವಾಲಯ ನಗರಿ ಆಗಬಾರದು ಎಂದು ಭಾಗಮಂಡಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಮಿತ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ.

ಭಾಗಮಂಡಲದಲ್ಲಿ ಜನರು ಅನಾದಿಕಾಲದಿಂದ ವಾಸ ಮಾಡಿಕೊಂಡು ಬರುತ್ತಿದ್ದು, ಯಾವುದೇ ಸಂಘಟನೆಯ ಒತ್ತಾಯಕ್ಕೆ ಮಣಿದು ದೇವಾಲಯಗಳ ನಗರಿ ಮಾಡುವಂತಾಗಬಾರದು ಎಂದು ಅಮೆ ಬಾಲಕೃಷ್ಣ ಸಭೆಯಲ್ಲಿ ಹೇಳಿದರು. ಭಾಗಮಂಡಲದಲ್ಲಿ ಹೇಗಿದೆಯೋ ಹಾಗೆಯೇ ಉಳಿಸಿಕೊಂಡು ದೇವಾಲಯದ ಆವರಣದಲ್ಲಿ ಯಾವುದೇ ಕ್ರಮಗಳಿದ್ದರೆ ಮಾಡಿಕೊಳ್ಳಲಿ; ದೇವಾಲಯಗಳ ನಗರಿ ಆದರೆ ಅಂಗಡಿ ಮುಂಗಟ್ಟು ಗಳಿಗೆ ತೊಂದರೆ ಆಗಲಿದೆ ಎಂದರು. ಇದಕ್ಕೆ ಧ್ವನಿಗೂಡಿಸಿ ಮಾತನಾಡಿದ ತಾವೂರು ಮಹಿಷಾಸುರ ಮರ್ದಿನಿ ದೇವಾಲಯದ ಅಧ್ಯಕ್ಷ ಭಾಸ್ಕರ್; ಜಾತ್ರೆ ಸಂದರ್ಭದಲ್ಲಿ ನಾವು ಕಟ್ಟುನಿಟ್ಟಿನ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ. ಟೆಂಪಲ್ ಟೌನ್ ಆದರೆ ನಾಲ್ಕು ಗ್ರಾಮಗಳಿಗೆ ಅನ್ವಯವಾಗಲಿದೆ. ಟೆಂಪಲ್ ಟೌನ್ ಆದರೆ ಒಂದಲ್ಲ ಒಂದು ಕಾನೂನು ಸರ್ಕಾರ ತರುತ್ತದೆ. ಪ್ರವಾಸಿ ಕೇಂದ್ರವನ್ನು ತೆಗೆದು ಹಾಕಲಿ; ಕೆಲವು ವರ್ಷಗಳಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾತ್ರೆಯ ಕಟ್ಟುಬಿದ್ದ ನಂತರ ಯಾವುದೇ ಮಾಂಸ ಮಾರಾಟ ಇಲ್ಲ. ಅಲ್ಲದೆ ಕೆಲವು ದಿನಗಳ ಕಾಲ ಮದ್ಯ ಮಾರಾಟವನ್ನು ನಿಲ್ಲಿಸಲಾಗುತ್ತದೆ. ಟೆಂಪಲ್ ಟೌನ್ ಮಾಡುವುದಾದರೆ ಪೂರ್ಣ ಜಿಲ್ಲೆಯನ್ನು ಮಾಡಲಿ ಎಂದರು.

ಇದಕ್ಕೆ ಧ್ವನಿಗೂಡಿಸಿದ ದೇವಂಗೋಡಿ ಹರ್ಷ; ಕುದುಪಜೆ ಪ್ರಕಾಶ್ ಹಾಗೂ ರವಿ ಹೆಬ್ಬಾರ್ ಅವರುಗಳು ಟೆಂಪಲ್ ಟೌನ್ ಆದರೆ ಕಾನೂನು ಬಲವಾಗಲಿದೆ. ಇದರಿಂದ ಸ್ಥಳೀಯರಿಗೆ ತೊಂದರೆ ಆಗಲಿದೆ ಎಂದರು. ಇದಕ್ಕೆ ಪೂರಕವಾಗಿ ಮಾತನಾಡಿದ ಸುನಿಲ್ ಪತ್ರ್ರಾವೊ; ಇಲ್ಲಿ ನಡೆಯುತ್ತಿರುವ ಅಂಗಡಿ ಮಳಿಗೆ ಖಾಸಗಿ ಜಾಗದಲ್ಲಿ ಇದ್ದು, ಪಂಚಾಯಿತಿಗೆ ಸಂಬಂಧಪಟ್ಟ ಜಾಗದಲ್ಲಿ ಇಲ್ಲ ಎಂದರು. ಭರತ್ ಹಾಗೂ ಬಾಲಕೃಷ್ಣ ಮಾತನಾಡಿ; ನಿಡ್ಯಮಲೆ ಕುಟುಂಬಸ್ಥರು ಗುಳಿಗ ಕೋಲ ಇನ್ನಿತರ ದೈವಾರಾಧನೆ ಮಾಡುತ್ತಾ ಬರುತ್ತಿದ್ದು, ದೇವಾಲಯಕ್ಕೆ ಸಂಬಂಧಪಟ್ಟ ಚಾಮುಂಡಿ ಕೋಲ ವಷರ್ಂಪ್ರತಿ ನಡೆಯುತ್ತಿದೆ. ಇದು ತಲತಲಾಂತರದಿಂದ ನಡೆದುಕೊಂಡು ಬರುತ್ತಿದ್ದು, ಈ ಎಲ್ಲಾ ದೈವಾರಾಧನೆಗೆ ತೊಂದರೆ ಆಗಲಿದೆ ಎಂದರು.

ಇದಕ್ಕೆ ಪೂರಕವಾಗಿ ವೇದಿಕೆಯಲ್ಲಿದ್ದ

(ಮೊದಲ ಪುಟದಿಂದ) ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಮಾರ್ ಮಾತನಾಡಿ ಸ್ಥಳೀಯ ಸಮಸ್ಯೆಯನ್ನು ಅರ್ಥಮಾಡಿಕೊಳ್ಳದೆ ಏಕಾಏಕಿ ಮುಂದಾಗಿರುವುದು ಸರಿಯಲ್ಲ; ಅದರ ಅವಶ್ಯಕತೆ ಇಲ್ಲ ಎಂದು ಒತ್ತಾಯಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಬೇಡ ಎಂದು ನಿರ್ಣಯವನ್ನು ಮಾಡಲಾಗುತ್ತಿದೆ. ಅವಶ್ಯಕತೆ ಬಂದರೆ ಮತ್ತೊಂದು ಗ್ರಾಮಸಭೆ ಮಾಡಲಾಗುವುದು ಎಂದು ಹೇಳಿದರು. ಒಟ್ಟಾರೆ ಟೆಂಪಲ್ ಟೌನ್ ಮಾಡುವುದಕ್ಕೆ ಗ್ರಾಮಸ್ಥರ ವಿರೋಧ ವ್ಯಕ್ತವಾಯಿತು.

ನೀರಿನ ಸಮಸ್ಯೆ: ಭಾಗಮಂಡಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ಜಲಜೀವನ್ ಮಿಷನ್ ಅಡಿ ಪ್ರತಿಮನೆಗೂ ಕುಡಿಯುವ ನೀರನ್ನು ಒದಗಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಭಾಗಮಂಡಲ, ತಲಕಾವೇರಿಗಳಲ್ಲಿ ನೀರಿನ ಸಮಸ್ಯೆ ಇದ್ದು, ಪರಿಹರಿಸಿ ಎಂಬ ಒತ್ತಾಯಗಳು ಕೇಳಿ ಬಂದವು. ಭಾಸ್ಕರ್ ಮಾತನಾಡಿ ನೈಸರ್ಗಿಕ ನೀರನ್ನು ಯಥಾಸ್ಥಿತಿಯಲ್ಲಿ ಗ್ರಾಮಸ್ಥರಿಗೆ ನೀಡಬೇಕು. ಅಲ್ಲದೆ ನೈಸರ್ಗಿಕ ನೀರಿನಲ್ಲಿ ಜಲಚರ, ಪ್ರಾಣಿಗಳ ಅವಶೇಷಗಳು ಬರುತ್ತಿದ್ದು, ಅದನ್ನು ಶುದ್ಧೀಕರಿಸಿ ಮತ್ತೆ ವಿತರಣೆ ಆಗಬೇಕು. ಅಲ್ಲಲ್ಲಿ ಕೆಟ್ಟುನಿಂತ ಕೊಳವೆಬಾವಿಗಳನ್ನು ದುರಸ್ತಿಪಡಿಸಿದರೆ ಮಾತ್ರ ನೀರಿನ ಸಮಸ್ಯೆ ಕಡಿಮೆ ಆಗಲಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಉಪಾಧ್ಯಕ್ಷರು ಜಲಜೀವನ್ ಮಿಷನ್ ಅಡಿ ಕುಡಿಯುವ ನೀರಿನ ವ್ಯವಸ್ಥೆ ಸುಸೂತ್ರವಾಗಿ ಆಗಲಿದೆ; ಆದರೆ ಮೇಲ್ಸೇತುವೆ ಕಾಮಗಾರಿ ಆಗುತ್ತಿರುವುದರಿಂದ ವಿತರಣೆಗೆ ತೊಂದರೆಯಾಗಿದೆ. ಕೆಳಭಾಗದಲ್ಲಿ ಕಾಂಕ್ರಿಟ್ ರಸ್ತೆ ಆದನಂತರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ಗುತ್ತಿಗೆದಾರರು ಸಿದ್ಧರಿದ್ದು ಸಮಸ್ಯೆ ಪರಿಹಾರ ಆಗಲಿದೆ ಎಂದರು.

ಕಳೆದ ಏಳು ವರ್ಷಗಳಿಂದ ಸಾವಯವ ಗೊಬ್ಬರ ರೈತರಿಗೆ ಸಿಗುತ್ತಿಲ್ಲ; ಈ ಬಗ್ಗೆ ಕೃಷಿ ಅಧಿಕಾರಿಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಉತ್ತರಿಸಿದ ಅಧಿಕಾರಿ ತಾನು ಹೊಸದಾಗಿ ಬಂದಿದ್ದು ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಸರ್ಕಾರದಿಂದ ಬೆಂಬಲ ಬೆಲೆ ನೀಡಬೇಕು, ಆರ್‍ಟಿಸಿಗಳಲ್ಲಿ ಸಮಸ್ಯೆಗಳಿದ್ದು, ರೈತರಿಗೆ ಬಹಳಷ್ಟು ಸಮಸ್ಯೆ ಆಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಕ್ರಮವಹಿಸಬೇಕಿದೆ. ಆಶ್ರಯ ಮನೆ ನಿವೇಶನ ಪಡೆಯಲು 32000 ರೂಪಾಯಿ ಆದಾಯವಿದ್ದರೂ, ಆದಾಯ ದೃಢೀಕರಣ ನೀಡುವಾಗ ಹೆಚ್ಚು ಬರುತ್ತಿದ್ದು, ಈ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳು ನಿಗಾವಹಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.

ಆಶ್ರಯ ಮನೆ ಪಡೆಯುವವರಿಗೆ ಇಲಾಖೆ ಅಧಿಕಾರಿಗಳು ತೊಂದರೆ ಮಾಡಬಾರದು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಅಲ್ಲದೆ ಬಿಪಿಎಲ್ ಕಾರ್ಡ್ ಆದಾಯಕ್ಕೆ ಮಿತಿಗೊಳಿಸಿ ಆಶ್ರಯ ಮನೆ ಪಡೆಯುವಂತಾಗಬೇಕು ಎಂಬ ಮಾತುಗಳು ಕೇಳಿಬಂದವು. ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಮಾತನಾಡಿ ಗ್ರಾಮ ಪಂಚಾಯಿತಿಗೆ ಅದಾಯದ ಕೊರತೆಯಿದ್ದು, ಹಲವು ವರ್ಷಗಳಿಂದ ನಲವತ್ತರಿಂದ ಐವತ್ತು ರೂಪಾಯಿ ಕಂದಾಯ ಕಟ್ಟುತ್ತಿದ್ದು, ಪರಿಷ್ಕರಣೆ ಆಗಬೇಕು ಎಂದು ಸಭೆಯ ಗಮನಕ್ಕೆ ತಂದರು. ಈ ಸಂದರ್ಭ ಗ್ರಾಮಸ್ಥರು ರೂ. 40 ರಿಂದ ನೂರು ರೂಪಾಯಿಗೆ ಕಂದಾಯವನ್ನು ಹೆಚ್ಚಿಸಿ ಉಳಿದಂತೆ ಕಂದಾಯವನ್ನು ಸರಿಯಾಗಿ ಹೆಚ್ಚಿಸಿ ಎಂದು ಸರ್ವಾನುಮತದ ಒಪ್ಪಿಗೆ ನೀಡಿದರು.

ನೋಡಲ್ ಅಧಿಕಾರಿಯಾಗಿ ಅಕ್ಷರ ದಾಸೋಹ ಅಧಿಕಾರಿ ಮೋಹನ್ ಪಾಲ್ಗೊಂಡಿದ್ದ ಸಭೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂದ, ಗ್ರಾಮ ಪಂಚಾಯಿತಿ ಸದಸ್ಯರುಗಳು ಉಪಸ್ಥಿತರಿದ್ದರು. -ಸುನಿಲ್ ಕುಯ್ಯಮುಡಿ