ನಾಪೋಕ್ಲು, ಜ. ೧೭: ನಗರದ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನಾಪೋಕ್ಲು ನಾಡು ಗ್ರಾಹಕರ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಸಂಘದ ಅಧ್ಯಕ್ಷ ಪಟ್ರಪಂಡ ಮೋಹನ್ ಮುದ್ದಪ್ಪ ಭೂಮಿ ಪೂಜೆ ನೆರವೇರಿಸಿದರು. ನಾಪೋಕ್ಲು ನಾಡು ಗ್ರಾಹಕರ ಸಹಕಾರ ಸಂಘ ಶತಮಾನದ ಕಟ್ಟಡವನ್ನು ಹೊಂದಿದ್ದು, ಈಗ ಅದನ್ನು ಕೆಡವಲಾಗಿ ಇದೇ ಸ್ಥಳದಲ್ಲಿ ನೂತನ ಕಟ್ಟಡವನ್ನು ನಿರ್ಮಿಸಲು ಭೂಮಿ ಪೂಜೆ ನಡೆಸಲಾಗಿದೆ. ಇದು ಎರಡು ಅಂತಸ್ತಿನ ಕಟ್ಟಡವಾಗಿದ್ದು, ಇದರಲ್ಲಿ ವ್ಯಾಪಾರದ ಮಳಿಗೆಯನ್ನು ಸಹ ತೆರೆಯಲಾಗುವುದು ಎಂದು ಅಧ್ಯಕ್ಷ ಮೋಹನ್ ಮುದ್ದಪ್ಪ ತಿಳಿಸಿದರು.

ಈ ಸಂದರ್ಭ ಸಂಘದ ಉಪಾಧ್ಯಕ್ಷೆ ನಾಟೋಳಂಡ ಕಸ್ತೂರಿ ಉತ್ತಪ್ಪ, ಸದಸ್ಯರಾದ ಕುಲ್ಲೇಟಿರ ಅರುಣ ಬೇಬ, ನಾಯಕಂಡ ಮುತ್ತಪ್ಪ, ಎಚ್.ಎ. ಬೊಳ್ಳು, ರಾಮಣ್ಣ, ಕೇಟೋಳಿರ ಮುತ್ತಮ್ಮ, ಗುತ್ತಿಗೆದಾರ ಕೈಬುಲೀರ ದಿನು ಕಾವೇರಪ್ಪ, ಗ್ರಾಹಕರ ಸ್ಟೋರ್‌ನ ಕಾರ್ಯದರ್ಶಿ ಕಲ್ಲೇಂಗಡ ತಮ್ಮಿ ತಿಮ್ಮಯ್ಯ, ಸಿಬ್ಬಂದಿಗಳು ಇದ್ದರು. ಅರ್ಚಕ ರವಿ ಉಡುಪ ಪೂಜೆ ನಡೆಸಿಕೊಟ್ಟರು.