(ಹೆಚ್.ಕೆ. ಜಗದೀಶ್)
ಗೋಣಿಕೊಪ್ಪಲು, ಜ. ೧೬: ಹುಲಿ ಹಾಗೂ ಗೂಳಿಗಳ ನಡುವೆ ನಡೆದ ಕಾಳಗದಲ್ಲಿ ಎರಡು ಗೂಳಿಗಳು ಗಂಭೀರ ಗಾಯಗೊಂಡು ಇದೀಗ ಜೀವನ್ಮರಣ ಸ್ಥಿತಿಯಲ್ಲಿ ನರಳುತ್ತಿರುವ ಘಟನೆ ಗೋಣಿಕೊಪ್ಪ ಬಳಿ ನಡೆದಿದೆ.
ಗಂಭೀರವಾದ ಗಾಯಗಳಿಂದ ನರಳುತ್ತಿರುವ ಗೂಳಿಗಳಿಗೆ ಪಶುವೈದ್ಯ ಅಧಿಕಾರಿಗಳಾದ ಡಾ. ಭವಿಷÀ್ಯ ಕುಮಾರ್ ಚಿಕಿತ್ಸೆ ನೀಡಿದ್ದಾರೆ. ಗೂಳಿಗಳು ಆಹಾರ ಸೇವಿಸದೆ ಗಾಬರಿಯಲ್ಲಿವೆ.
ಗೋಣಿಕೊಪ್ಪ ನಗರದ ಆರನೇ ವಿಭಾಗದ ಪೊನ್ನಂಪೇಟೆ ರಸ್ತೆಯ ಬಳಿಯಲ್ಲಿರುವ ಕುಪ್ಪಂಡ ಸಂಜು ರವರ ಮನೆಯ ಆವರಣದಲ್ಲಿ ಎಂದಿನAತೆ ಎರಡು ಗೂಳಿಗಳನ್ನು ಕಟ್ಟಲಾಗಿತ್ತು.
(ಮೊದಲ ಪುಟದಿಂದ)
ಇವರ ಮನೆಯ ಬಳಿ ಶನಿವಾರ ರಾತ್ರಿ ೯ ಗಂಟೆಯ ಸುಮಾರಿಗೆ ಲಗ್ಗೆ ಇಟ್ಟ ಹುಲಿಯು ಕಟ್ಟಲಾಗಿದ್ದ ಗೂಳಿಯ ಮೇಲೆ ದಾಳಿ ನಡೆಸಿದೆ. ಈ ವೇಳೆ ಹುಲಿ ಹಾಗೂ ಗೂಳಿಯ ನಡುವೆ ಕಾದಾಟ ನಡೆದಿದೆ.
ಗೂಳಿಯ ಕುತ್ತಿಗೆ ಭಾಗಕ್ಕೆ ಗಂಭೀರ ಗಾಯಗೊಳಿಸಿದ ಹುಲಿ ಗೂಳಿಯನ್ನು ಕಂಡು ಅದರ ಮೇಲೆ ಬಿದ್ದು ದಾಳಿ ನಡೆಸಿದೆ. ಇದರಿಂದಾಗಿ ಮೊದಲಿಗೆ ದಾಳಿ ನಡೆಸಿದ ಗೂಳಿ ಬಚಾವಾಗಿದೆ. ಮೊದಲು ದಾಳಿ ನಡೆಸಿದ ಹುಲಿ ಹಾಗೂ ಗೂಳಿಯ ನಡುವೆ ಕಾಳಗ ಏರ್ಪಟ್ಟಿದೆ.
ಮತ್ತೊಂದು ಗೂಳಿಯೂ ಭಯಂಕರವಾಗಿ ಕೂಗಿಕೊಂಡಾಗ ಸಮೀಪದ ಲೈನ್ಮನೆಯಲ್ಲಿ ವಾಸವಿದ್ದ ಕಾರ್ಮಿಕ ಹೊರ ಬಂದು ತನ್ನ ಟಾರ್ಚ್ ಬೆಳಕಿನಲ್ಲಿ ನೋಡಿದಾಗ ಹುಲಿಯು ಅಲ್ಲಿಂದ ಕಾಲ್ಕಿತ್ತು ಸಮೀಪದ ತೋಟದಲ್ಲಿ ಮರೆಯಾಗಿದೆ.
ಕಾರ್ಮಿಕನ ಸಮಯ ಪ್ರಜ್ಞೆಯಿಂದ ಎರಡು ಗೂಳಿಗಳ ಪ್ರಾಣ ಉಳಿದಿವೆ. ಆದರೆ ಗಂಭೀರ ಸ್ವರೂಪದ ಗಾಯವಾಗಿರುವುದರಿಂದ ಎರಡು ಗೂಳಿಗಳು ನರಳುತ್ತಿವೆ.
ಸುದ್ದಿ ತಿಳಿದ ಮನೆಯ ಮಾಲೀಕ ಕುಪ್ಪಂಡ ಸಂಜು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ತೂಚಮಕೇರಿ ಬಳಿ ಹುಲಿ ಕಾರ್ಯಾಚರಣೆ ಕ್ಯಾಂಪ್ನಲ್ಲಿದ್ದ ಎಸಿಎಫ್ ಉತ್ತಪ್ಪ, ಆರ್.ಎಫ್.ಓ. ದಿವಾಕರ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಹುಲಿಯು ಮತ್ತೆ ಇದೇ ಸ್ಥಳಕ್ಕೆ ಬರುವ ಸಾಧ್ಯತೆ ಇರುವುದರಿಂದ ಸ್ಥಳದಲ್ಲಿ ಹುಲಿ ಸೆರೆಗೆ ಬೋನನ್ನು ಅಳವಡಿಸಿ, ಸಿಬ್ಬಂದಿಗಳನ್ನು ನಿಯೋಜನೆ ಮಾಡಿದ್ದಾರೆ.
ರೈತ ಮುಖಂಡರ ಭೇಟಿ
ನಗರದ ಹೃದಯ ಭಾಗದಲ್ಲಿ ರೈತನ ಗೂಳಿಗಳ ಮೇಲೆ ಹುಲಿ ದಾಳಿ ನಡೆಸಿದ ಘಟನೆ ಸುದ್ದಿ ತಿಳಿದ ರೈತ ಸಂಘದ ಜಿಲ್ಲಾ ಪ್ರ.ಕಾರ್ಯದರ್ಶಿ ಸುಜಯ್ ಬೋಪಯ್ಯ ಹಾಗೂ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ ಮುಂದಾಳತ್ವದಲ್ಲಿ ಹಲವು ರೈತ ಮುಖಂಡರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.
ಹುಲಿ ದಾಳಿಯಿಂದ ಗೂಳಿಗಳು ಚೇತರಿಸಿಕೊಳ್ಳುವ ಸಾಧ್ಯತೆ ಕಡಿಮೆ ಇರುವುದರಿಂದ ಗರಿಷ್ಠ ಪ್ರಮಾಣದ ಪರಿಹಾರ ಒದಗಿಸಬೇಕು ಹಾಗೂ ಹುಲಿಯ ಸೆರೆಗೆ ಅಗತ್ಯ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಆಗ್ರಹಿಸಿದರು.
ಈ ವೇಳೆ ರೈತ ಸಂಘದ ಪದಾಧಿಕಾರಿಗಳಾದ ಆಲೆಮಾಡ ಮಂಜುನಾಥ್, ಚೊಟ್ಟೆಕಾಳಪಂಡ ಮನು, ತೀತರಮಾಡ ರಾಜ, ಸುನಿಲ್, ಕಾಕಮಡ ಡಾಲಿ, ತಮ್ಮಯ್ಯ, ನಾಣಯ್ಯ, ಮಲ್ಲೆಂಗಡ ಸುಬ್ರಮಣಿ, ಚೋಟ್ಟೆಕಾಳಪಂಡ ರೋಷನ್, ಅಮ್ಮತ್ತಿರ ಸುರೇಶ್, ಗೋಣಿಕೊಪ್ಪ ಗ್ರಾ.ಪಂ. ಸದಸ್ಯರಾದ ಹಕ್ಕೀಂ ಮುಂತಾದವರು ಹಾಜರಿದ್ದರು.