ಸಿದ್ದಾಪುರ, ಜ. ೧೬: ಕಾಡಾನೆ ದಾಳಿಗೆ ಬಲಿಯಾದ ನೆಲ್ಯಹುದಿಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಲ್ವತೇಕ್ರೆ ಗ್ರಾಮದ ವಿದ್ಯಾರ್ಥಿ ಆಶಿಕ್ ಕುಟುಂಬಕ್ಕೆ ಸರಕಾರ ರೂ ೨೫ ಲಕ್ಷ ಪರಿಹಾರ ನೀಡುವಂತೆ ಎಸ್.ಡಿ.ಪಿ.ಐ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಒತ್ತಾಯಿಸಿದರು.
ಮೃತ ವಿದ್ಯಾರ್ಥಿ ಮೊಹಮ್ಮದ್ ಆಶಿಕ್ ಮನೆಗೆ ಭೇಟಿ ನೀಡಿದ ಎಸ್.ಡಿ.ಪಿ.ಐ ನಿಯೋಗ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಕಳೆದ ಹಲವು ದಶಕಗಳಿಂದ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ನಿರಂತರವಾಗಿ ನಡೆಯುತ್ತಿದ್ದು, ೫೦ ಕ್ಕೂ ಹೆಚ್ಚು ಅಮಾಯಕ ಜೀವಗಳು ಬಲಿಯಾಗಿವೆ. ನೂರಾರು ವ್ಯಕ್ತಿಗಳು ಅಂಗವೈಕಲ್ಯದಿAದ ಬಳಲುತ್ತಿದ್ದಾರೆ. ಇದರಿಂದಾಗಿ ಹಲವು ಕುಟುಂಬಗಳು ಬದುಕುವ ಸ್ವಾತಂತ್ರ‍್ಯವನ್ನೇ ಕಳೆದುಕೊಂಡಿದ್ದಾರೆ. ಕಾಡಾನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಬಹಳಷ್ಟು ಕುಟುಂಬಗಳಿಗೆ ವರ್ಷಗಳೇ ಕಳೆದರೂ ನಯಾ ಪೈಸೆಯ ಪರಿಹಾರ ಸಿಕ್ಕಿಲ್ಲ. ಬೆಳೆಗಾರರ ಫಸಲು ನಾಶವಾಗುತ್ತಿವೆ. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ರೂಪಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ.
ಜಿಲ್ಲೆಯನ್ನು ಪ್ರತಿನಿಧಿಸುವ ಸಂಸದರು ಹಾಗೂ ಶಾಸಕರು ಕೊಡಗು ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದರು. ಗಾಯಗೊಂಡಿರುವ ವಿದ್ಯಾರ್ಥಿಗೂ ಚಿಕಿತ್ಸೆಗಾಗಿ ಪರಿಹಾರ ನೀಡಬೇಕೆಂದು ಅಫ್ಸರ್ ಒತ್ತಾಯಿಸಿದರು. ನಿಯೋಗದಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಶಫಿ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಉಸ್ಮಾನ್, ಗ್ರಾಮ ಪಂಚಾಯತಿ ಸದಸ್ಯ ಸಂಶೀರ್, ಪ್ರಮುಖರಾದ ಅಶ್ರಫ್, ಶೌಕತ್, ಸಲೀಂ ಇದ್ದರು.