ಸೋಮವಾರಪೇಟೆ, ಜ. ೧೬: ಶಿಥಿಲಾವಸ್ಥೆಗೆ ತಲುಪಿದ್ದ ಸೋಮವಾರಪೇಟೆ ತಾಲೂಕು ಕಚೇರಿ ಕಟ್ಟಡಕ್ಕೆ ಮರು ಜೀವ ನೀಡುವ ಕಾರ್ಯ ಪೂರ್ಣಗೊಂಡಿದ್ದು, ತಾ. ೧೭ರಂದು (ಇಂದು) ಕಟ್ಟಡ ಉದ್ಘಾಟನೆಗೊಳ್ಳಲಿದೆ. ಬರೋಬ್ಬರಿ ೨೪ ವರ್ಷಗಳ ನಂತರ ಸೋಮವಾರಪೇಟೆ ತಾಲೂಕು ಕಚೇರಿ ಸುಣ್ಣಬಣ್ಣದಿಂದ ಕಂಗೊಳಿಸುತ್ತಿದೆ.
ಮಳೆಹಾನಿ ಪರಿಹಾರ ನಿಧಿಯಡಿ ೧.೩೫ ಕೋಟಿ ಅನುದಾನವನ್ನು ತಾಲೂಕು ಕಚೇರಿಯ ನವೀಕರಣ ಕಾರ್ಯಕ್ಕೆ ಬಿಡುಗಡೆ ಮಾಡಿದ್ದು, ಅದರಂತೆ ಕಳೆದ ೬ ತಿಂಗಳಿನಿAದ ಕಾಮಗಾರಿ ನಡೆದಿದೆ. ಕಳೆದ ಕೆಲ ದಶಕಗಳಿಂದೀಚೆಗೆ ತಾಲೂಕು ಕಚೇರಿ ಕಟ್ಟಡ ಶಿಥಿಲಾಸ್ಥೆಗೆ ತಲುಪಿದ್ದು, ಮಳೆಗಾಲ ಕಳೆಯುವದು ಸಿಬ್ಬಂದಿಗಳಿಗೆ ಹಗ್ಗದ ಮೇಲಿನ ನಡಿಗೆಯಂತಾಗಿತ್ತು. ತಾಲೂಕಿನ ಮಿನಿವಿಧಾನಸೌಧ ಮಳೆಗಾಲದಲ್ಲಿ ಸೋರಲು ಪ್ರಾರಂಭಿಸಿ ದಶಕಗಳೇ ಕಳೆದಿದ್ದವು. ಕಂದಾಯ ಇಲಾಖೆಯ ಸಾವಿರಾರು ಕಡತಗಳನ್ನು ರಕ್ಷಣೆ ಮಾಡಿಕೊಳ್ಳುವದಕ್ಕೆ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದರು.
೧೯೯೭ರಲ್ಲಿ ನಿರ್ಮಾಣವಾದ ತಾಲೂಕು ತಹಶೀಲ್ದಾರರ ಕಟ್ಟಡಕ್ಕೆ ಮಿನಿ ವಿಧಾನಸೌಧ ಎಂದು ನಾಮಕರಣ ಮಾಡಿದ್ದು, ಆರಂಭದ ಕೆಲ ವರ್ಷಗಳ ಕಾಲ ಕಟ್ಟಡ ಸುಸ್ಥಿತಿಯಲ್ಲಿತ್ತು. ಸ್ಥಳೀಯ ಹವಾಮಾನವನ್ನು ಪರಿಗಣಿಸದೇ, ಮಳೆಗಾಲದ ನೀರು, ಗಾಳಿಯ ಅಂದಾಜು ಮಾಡದೇ ಅವೈಜ್ಞಾನಿಕವಾಗಿ ಕಿಟಕಿಗಳನ್ನು ನಿರ್ಮಿಸಿದ್ದರಿಂದ ಮಳೆಗಾಲದಲ್ಲಿ ಎರಚಲು ನೀರು ನೇರವಾಗಿ ಕಚೇರಿಯೊಳಗೆ ಬರುತ್ತಿತ್ತು.
೨೪ ವರ್ಷಗಳ ಹಿಂದೆ ಈ ಕಟ್ಟಡಕ್ಕೆ ಸುಮಾರು ೧ ಕೋಟಿ ರೂ.ಗಳನ್ನು ವಿನಿಯೋಗಿಸಿ ತಹಶೀಲ್ದಾರ್ ಕಚೇರಿ, ಖಜಾನೆ, ಚುನಾವಣೆ ಶಾಖೆ, ಆರ್‌ಟಿಸಿ ವಿತರಣಾ ಕೇಂದ್ರ, ನೆಮ್ಮದಿ ಕೇಂದ್ರ, ಆಹಾರ ಮತ್ತು ನಾಗರಿಕ ಸರಬರಾಜು ಕೇಂದ್ರ, ಭೂಮಿ ಇಲಾಖೆ, ಅಭಿಲೇಖಾಲಯ, ಉಪ ನೋಂದಣಾಧಿಕಾರಿಗಳ ಕಚೇರಿ ಸೇರಿದಂತೆ ಕಂದಾಯ ಇಲಾಖೆಗೆ ಸಂಬAಧಪಟ್ಟ ಎಲ್ಲಾ ವಿಭಾಗಗಳ ಕಚೇರಿಯನ್ನು ತೆರೆದು ಸಾರ್ವಜನಿಕ ಸೇವೆಗೆ ಬಳಸಿಕೊಳ್ಳಲಾಗುತ್ತಿತ್ತು.
ಕಳೆದ ಒಂದೂವರೆ ದಶಕದಿಂದ ಈ ಕಟ್ಟಡದ ಬಗ್ಗೆ ಸರ್ಕಾರವೇ ನಿರ್ಲಕ್ಷö್ಯ ತೋರಿದ್ದರಿಂದ ನಿರ್ವಹಣೆಯಿಲ್ಲದೇ ಶಿಥಿಲಾವಸ್ಥೆಗೆ ತಲುಪಿತ್ತು. ಪರಿಣಾಮ ರೆಕಾರ್ಡ್ ರೂಂನಲ್ಲಿ ೧.೩೭ಲಕ್ಷಕ್ಕೂ ಅಧಿಕ ಕಡತಗಳಿದ್ದು, ಅವುಗಳ ರಕ್ಷಣೆಗೆ ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿತ್ತು. ಮಳೆಗಾಲದಲ್ಲಿ ಕಚೇರಿಯ ಒಳಗೆ ಟಾರ್ಪಲ್ ಕಟ್ಟಿಕೊಂಡು ಕೆಲಸ ಮಾಡುವ ಸ್ಥಿತಿ ಸಾಮಾನ್ಯವಾಗಿತ್ತು.
ಕಳೆದ ಸಾಲಿನಲ್ಲಿ ಮಳೆಹಾನಿ ಪರಿಹಾರ ನಿಧಿಯಡಿ ಕಟ್ಟಡ ದುರಸ್ತಿಗೆ ೧.೩೫ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಈ ಹಣದಲ್ಲಿ ಕಟ್ಟಡ ನವೀಕರಣ ಕಾರ್ಯ ನಡೆದಿದೆ. ಕಚೇರಿಯ ಮೇಲ್ಭಾಗ ನೂತನವಾಗಿ ಒಂದು ಅಂತಸ್ತು ನಿರ್ಮಿಸಿ, ಶೀಟ್‌ಗಳನ್ನು ಅಳವಡಿಸಲಾಗಿದೆ.
ಮಳೆಗಾಲದಲ್ಲಿ ನೀರು ಸೋರಿಕೆಯಾಗದಂತೆ ಕ್ರಮ ವಹಿಸಲಾಗಿದ್ದು, ಕಿಟಕಿಗಳ ನವೀಕರಣ, ಕಚೇರಿಯ ಮೇಲ್ಭಾಗ ಮಹಿಳೆ/ಪುರುಷರಿಗೆ ಪ್ರತ್ಯೇಕವಾಗಿ ಶೌಚಾಲಯ, ಸಭಾಂಗಣ, ಕಚೇರಿ ಕೊಠಡಿಗಳ ನಿರ್ಮಾಣ, ಸುಣ್ಣಬಣ್ಣ ಬಳಿಯುವ ಕಾರ್ಯ ನಡೆದಿದೆ. ಈ ಹಿಂದೆ ಇದ್ದ ‘ಮಿನಿ ವಿಧಾನಸೌಧ’ ಹೆಸರಿನ ಬದಲಿಗೆ ‘ತಾಲೂಕು ಆಡಳಿತ ಸೌಧ’ ಎಂದು ಮರು ನಾಮಕರಣ ಮಾಡಲಾಗಿದೆ.
ಈಗಾಗಲೇ ತಾಲೂಕು ಕಚೇರಿಯ ಅವ್ಯವಸ್ಥೆಯಿಂದಾಗಿ ಉಪ ನೋಂದಣಾಧಿಕಾರಿಗಳ ಕಚೇರಿ ಎತ್ತಂಗಡಿಯಾಗಿ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಗೊAಡಿದೆ. ಕಂದಾಯ ಇಲಾಖೆಯ ಕೆಲ ಶಾಖೆಗಳು, ಸರ್ವೆ ಇಲಾಖೆ, ಕಾರ್ಮಿಕ ಇಲಾಖಾ ಕಚೇರಿಗಳು ತಾಲೂಕು ಕಚೇರಿ ಮುಂಭಾಗವಿರುವ ಬ್ರಿಟೀಷರ ಕಾಲದ ಕಟ್ಟಡಲ್ಲಿಯೇ ಕಾರ್ಯಾಚರಿಸುತ್ತಿವೆ.
೧.೩೫ ಕೋಟಿ ವೆಚ್ಚದಲ್ಲಿ ನೂತನ ಕಚೇರಿ ಕಟ್ಟಡ ಕಾಮಗಾರಿ ಪೂರ್ಣಗೊಂಡಿರುವ ಹಿನ್ನೆಲೆ, ಈ ಎಲ್ಲಾ ಕಚೇರಿಗಳೂ ಒಂದೇ ಸಂಕೀರ್ಣಕ್ಕೆ ಬರುವ ನಿರೀಕ್ಷೆಯಿದೆ. ಖಾಸಗಿ ಕಟ್ಟಡಗಳಲ್ಲಿ ಇರುವ ಕಚೇರಿಗಳಿಗೆ ಮಾಸಿಕ ಸಾವಿರಾರು ರೂಪಾಯಿ ಬಾಡಿಗೆ ವ್ಯಯವಾಗುವುದು ತಪ್ಪಲಿದೆ. ಹೀಗಾದಲ್ಲಿ ಒಂದೇ ಸೂರಿನಡಿ ಎಲ್ಲ ಸೇವೆಗಳು ಲಭಿಸುವ ಮೂಲಕ ಸಾರ್ವಜನಿಕರಿಗೂ ಹೆಚ್ಚಿನ ಉಪಯೋಗವಾಗಲಿದೆ. - ವಿಜಯ್