ಸಿದ್ದಾಪುರ, ಜ. ೧೬: ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಕಾರ್ಯಾಚರಣೆ ನಡೆಸಿ ಅರಣ್ಯಕ್ಕೆ ಅಟ್ಟಲು ಯತ್ನಿಸಿದ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳನ್ನು ಕಾಡಾನೆಗಳು ಸುತ್ತಾಡಿಸಿದ ಘಟನೆ ನೆಲ್ಲಿಹುದಿಕೇರಿಯಲ್ಲಿ ನಡೆದಿದೆ.

ಕುಶಾಲನಗರದ ಮೀನುಕೊಲ್ಲಿ ಅರಣ್ಯ ಪ್ರದೇಶ ವ್ಯಾಪ್ತಿಯ ನೆಲ್ಲಿಹುದಿಕೇರಿ, ಅರೆಕಾಡು, ಅಭ್ಯತ್‌ಮಂಗಲ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡುಬಿಟ್ಟು ದಾಂಧಲೆ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡನ್ನು ಮರಳಿ ಕಾಡಿಗೆ ಅಟ್ಟಬೇಕೆಂದು ಅರಣ್ಯ ಇಲಾಖಾಧಿಕಾರಿಗಳನ್ನು ಒತ್ತಾಯಿಸಿದ್ದರು.

ಈ ಹಿನ್ನೆಲೆಯಲ್ಲಿ ಶನಿವಾರ ಹಾಗೂ ಭಾನುವಾರದಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್ ಹಾಗೂ ಉಪವಲಯ ಅರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯರವರ ನೇತೃತ್ವದಲ್ಲಿ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಮಾಡಲಾಯಿತು. ಆದರೆ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಪಟಾಕಿ ಸಿಡಿಸಿ ಕಾಡಿಗೆ ಅಟ್ಟಲು ಪ್ರಯತ್ನಿಸಿದರು ಕೂಡ ಕಾಡಾನೆಗಳು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ನುಗ್ಗಿ ಕಾಡಿನತ್ತ ತೆರಳಲು ಹಿಂದೇಟು ಹಾಕಿದವು. ಅಲ್ಲದೇ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅರಣ್ಯಾಧಿಕಾರಿಗಳನ್ನು, ಸಿಬ್ಬಂದಿಗಳನ್ನು ತೋಟದೊಳಗೆ ಸುತ್ತಾಡಿಸುತ್ತ ಸುಸ್ತು ಬರಿಸಿದವು. ಎಷ್ಟೇ ಪ್ರಯತ್ನಪಟ್ಟರೂ ರಸ್ತೆಯವರೆಗೆ ಬಂದು ಕಾಡಾನೆಗಳು ಮರಳಿ ಕಾಫಿ ತೋಟದೊಳಗೆ ನುಸುಳಿ ಕಾಡಿನತ್ತ ಮುಖಮಾಡಲು ಹಿಂಜರಿಯುತ್ತಿದ್ದವು.

ಕಾಡಾನೆಗಳ ಕಾರ್ಯಾಚರಣೆ ಸಂದರ್ಭದಲ್ಲಿ ಎರಡು ಮರಿಯಾನೆಗಳು ಸೇರಿ ೧೩ಕ್ಕೂ ಅಧಿಕ ಕಾಡಾನೆಗಳ ಹಿಂಡು ಕಂಡುಬAದವು ಎಂದು ಅರಣ್ಯಾಧಿಕಾರಿಗಳು ತಿಳಿಸಿದರು. ಕಾರ್ಯಾಚರಣೆಯಲ್ಲಿ ಎಸಿಎಫ್ ನೆಹರು ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿ ಸುಬ್ರಾಯ ಸೇರಿದಂತೆ ೨೦ ಮಂದಿ ಸಿಬ್ಬಂದಿಗಳು ಭಾಗವಹಿಸಿದ್ದರು. ಕಳೆದೆರಡು ದಿನಗಳಿಂದ ನೆಲ್ಲಿಹುದಿಕೇರಿ ಭಾಗದ ಕಾಟೀಬಾಣೆ, ಮೇರಿಲ್ಯಾಂಡ್ ಕಾಫಿ ತೋಟದೊಳಗೆ ಬೀಡುಬಿಟ್ಟಿದ್ದ ೧೩ ಕಾಡಾನೆಗಳನ್ನು ಕಾರ್ಯಾಚರಣೆ ತಂಡವು ಕಾರ್ಯಾಚರಣೆ ನಡೆಸಿ ದುಬಾರೆ ಅರಣ್ಯಕ್ಕೆ ಅಟ್ಟಲು ಪ್ರಯತ್ನಿಸಿದರು.

ಆದರೆ ಗುಂಪಿನಲ್ಲಿದ್ದ ಕಾಡಾನೆಗಳ ಪೈಕಿ ಮೂರು ಕಾಡಾನೆಗಳು ಗುಂಪಿನಿAದ ಬೇರ್ಪಟ್ಟು ಕಾಫಿ ತೋಟಗಳಲ್ಲಿ ಸುತ್ತಾಡುತ್ತಾ ಒಂದು ತೋಟದಿಂದ ಮತ್ತೊಂಡು ತೋಟಕ್ಕೆ ಲಗ್ಗೆಯಿಡುತ್ತಿವೆ ಎಂದು ಅರಣ್ಯ ಸಿಬ್ಬಂದಿಗಳು ತಿಳಿಸಿದ್ದಾರೆ. ಕೆಲವು ಕಾಡಾನೆಗಳು ಕಾಫಿ ತೋಟಗಳನ್ನು ಬಿಟ್ಟು ಕದಲುತ್ತಿಲ್ಲ. ಆಹಾರಗಳನ್ನು ಅರಸಿಕೊಂಡು ಮರಿಯಾನೆಗಳೊಂದಿಗೆ ಕಾಡಿನಿಂದ ನಾಡಿಗೆ ಲಗ್ಗೆಯಿಟ್ಟು ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿವೆ.

ಅರಣ್ಯಾಧಿಕಾರಿಗಳು ಎಷ್ಟೇ ಶ್ರಮಪಟ್ಟರೂ ಕಾಫಿ ತೋಟಗಳು ಇರುವುದರಿಂದ ಅರಣ್ಯ ಇಲಾಖಾಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ೧೩ ಕಾಡಾನೆಗಳ ಹಿಂಡುಗಳ ಪೈಕಿ ಕೆಲವು ಕಾಡಾನೆಗಳು ದುಬಾರೆಯ ಕಾವೇರಿ ನದಿ ದಾಟಿ ದುಬಾರೆ ಅರಣ್ಯ ಪ್ರದೇಶಕ್ಕೆ ತೆರಳಿವೆ. ಉಳಿದ ಕಾಡಾನೆಗಳು ಕಾಫಿ ತೋಟದೊಳಗಡೆ ಸುತ್ತಾಡುತ್ತಿವೆ.

ವರದಿ: ಎ.ಎನ್. ವಾಸು