೧೯೪೭ ಭಾರತಕ್ಕೆ ಸ್ವಾತಂತ್ರö್ಯ ದೊರಕಿತು. ಆಗ ಭಾರತ-ಪಾಕಿಸ್ತಾನ ಎರಡೂ ದೇಶಗಳ ನಿರಾಶ್ರಿತರ ಬದಲಾವಣೆಯ ಸಂದರ್ಭದಲ್ಲಿ ನಡೆದ ಕೊಲೆ, ಪಾಕಿಸ್ತಾನದಿಂದ ಬಂದ ರೈಲುಗಳಲ್ಲಿ ಭಾರತೀಯರ ಹೆಣಗಳು, ನಂತರದ ಕಾಶ್ಮೀರ ಯುದ್ಧದಿಂದ ಹಿಡಿದು ೧೯೭೧ ರ ಬಾಂಗ್ಲಾ ಯುದ್ಧದ ವರೆಗಿನ ಎಲ್ಲಾ ಘಟನೆಗಳಲ್ಲಿಯೂ ಭಾರತೀಯ ಸೈನಿಕರು ಸಾಕ್ಷಿಯಾಗಿದ್ದಾರೆ.
೧೯೪೭ ರಲ್ಲಿ ಸ್ವಾತಂತ್ರö್ಯ ಸಿಕ್ಕಿ ಜವಾಹರ್ ಲಾಲ್ ನೆಹರೂ ಪ್ರಧಾನಿಯಾದರು. ದೇಶ ರಕ್ಷಣೆಯ ವಿಚಾರವಾಗಿ ಸೇನಾಧಿಕಾರಿಗಳ ಒಂದು ಸಭೆ ಕರೆದರು. ರಕ್ಷಣಾ ಖಾತೆಯನ್ನು ನಿರ್ವಹಿಸುವಲ್ಲಿ ನಮಗಿನ್ನೂ ಅನುಭವವಿಲ್ಲ. ನಾವು ತಯಾರಾಗುವವರೆಗೆ ಒಬ್ಬ ಬ್ರಿಟಿಷ್ ಅಧಿಕಾರಿಯನ್ನು ಈ ದೇಶದ ರಕ್ಷಣಾ ವ್ಯವಸ್ಥೆಯ ಮುಖ್ಯಸ್ಥನನ್ನಾಗಿ ನೇಮಿಸಿಕೊಳ್ಳುವುದು ಒಳ್ಳೆಯದು ಎಂಬ ತನ್ನ ಅಭಿಪ್ರಾಯವನ್ನು ಸೈನ್ಯಾಧಿಕಾರಿಗಳ ಮುಂದಿಟ್ಟರು - ನೆಹರೂ. ಅದನ್ನು ಅಲ್ಲಗಳೆಯುವ ಧೈರ್ಯ ಯಾರೂ ತೋರಲಿಲ್ಲ. ಅವರ ಕೈಕೆಳಗೆ ಎಲ್ಲರೂ ಕ್ಷೇಮವಾಗಿರಬಹುದೆಂದು ನಂಬಿದ್ದರು.
ಒಬ್ಬ ಸೈನ್ಯಾಧಿಕಾರಿ ‘ಮಾನ್ಯ ಪ್ರಧಾನಿಯವರೇ ನಾನು ಒಂದು ವಿಷಯ ಅರಿಕೆ ಮಾಡಬಯಸುತ್ತೇನೆ’ ಎಂದರು. ನೆಹರೂ ಅವರಿಗೆ ಎದುರಾಡಿದ್ದು ತುಂಬಾ ಕಸಿವಿಸಿಯಾಯ್ತು. ಮುಜುಗರವೂ ಆಯಿತು. ಮುಂದುವರೆದು ಅಧಿಕಾರಿ ‘ನಾವೀಗ ಸ್ವತಂತ್ರ ದೇಶದಲ್ಲಿದ್ದೇವೆ. ನಮಗೂ ಅನುಭವ ಕಡಿಮೆ. ಅನುಭವ ಬರುವವರೆಗೆ ಒಬ್ಬ ಬಿಳಿಯನನ್ನು ಪ್ರಧಾನಿಯಾಗಿ ಯಾಕೆ ನೇಮಿಸಿಕೊಳ್ಳಬಾರದು’ ಎಂದುಬಿಟ್ಟರು. ಪ್ರಧಾನಿ ಮುಖ ಕಪ್ಪಿಟ್ಟಿತು. ಅದೇ ಸಿಟ್ಟಿನಿಂದ ‘ದೇಶದ ಸೈನ್ಯವನ್ನು ಮುನ್ನಡೆಸುವ ಅಧಿಕಾರ ವಹಿಸಿಕೊಳ್ಳಲು ತಯಾರಿದ್ದೀರಾ?’ ಎಂದು ಆ ಅಧಿಕಾರಿಯನ್ನು ಪ್ರಶ್ನಿಸಿದರು. ‘ಕ್ಷಮಿಸಿ, ನನಗಿಂತ ದಕ್ಷರಾದ, ಅರ್ಹ ವ್ಯಕ್ತಿ ಲೆ.ಜ. ಕಾರ್ಯಪ್ಪನವರಿದ್ದಾರೆ. ಅಂತಹ ಅರ್ಹ ವ್ಯಕ್ತಿ ಬಿಳಿಯರಲ್ಲಿಲ್ಲ. ನಾವೆಲ್ಲ ಒಕ್ಕೊರಲಿನಿಂದ ಅವರನ್ನು ಆರಿಸಲು ಅನುಮೋದಿಸಬೇಕು.’ ಅಧಿಕಾರಿ ವಿನಂತಿಸಿಕೊAಡಾಗ ಇಡೀ ಸಭೆ ಕರತಾಡನದಿಂದ ಸ್ವಾಗತಿಸಿತು. ಲೆ.ಜ. ಕಾರ್ಯಪ್ಪ ಅವರು ಸ್ವತಂತ್ರ ಭಾರತದ ಮೊದಲ ಜನರಲ್ ಆದರು. ಕಾರ್ಯಪ್ಪ ಅವರು ಅಧಿಕಾರ ಸ್ವೀಕರಿಸಿದ ಜನವರಿ ೧೫ ಅನ್ನು ಸೇನಾ ದಿನವನ್ನಾಗಿ ಪ್ರತಿ ವರ್ಷ ಆಚರಿಸಲಾಗುತ್ತಿದೆ. ಪ್ರಧಾನಿಯನ್ನು ಎದುರಿಸಿದ ಅಧಿಕಾರಿ ರಾಥೋಡ್ ಬಡ್ತಿ ಹೊಂದಿ ಮೊದಲ ಲೆ. ಜನರಲ್ ಆದರು. ಸಂದರ್ಭವೂ ಹಾಗಿತ್ತು. ಜನರಲ್ ಕಾರ್ಯಪ್ಪ ಅವರು, ಜ. ತಿಮ್ಮಯ್ಯ ಅವರು ಬ್ರಿಟಿಷ್ ಕಾಲದಿಂದಲೂ ಕೆಚ್ಚೆದೆಯ ಅಧಿಕಾರಿಗಳಾಗಿದ್ದರು. ಅಂತಹ ಅನೇಕರು ಅಂದು ಇದ್ದರು. ಇಂದೂ ಇದ್ದಾರೆ.
ಸರ್ದಾರ್ ವಲ್ಲಭಬಾಯಿ ಪಟೇಲರು ಮೊದಲ ಗೃಹಮಂತ್ರಿಯಾದರು. ಅವರು ಭಾರತದ ರಕ್ಷಣೆಗೆ ಸೈನಿಕರ ಅವಶ್ಯಕತೆ ಎಷ್ಟಿದೆ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟರು. ೧೯೬೨ ರ ಚೀನಾ ಆಕ್ರಮಣ, ೧೯೬೫ ರ ಕಾಶ್ಮೀರ ಯುದ್ಧಗಳಲ್ಲೂ ನಮ್ಮ ಸೈನಿಕರ ಧೈರ್ಯ, ಶಕ್ತಿ, ಸಾಮರ್ಥ್ಯವನ್ನು ತೋರಿಸಿಕೊಟ್ಟರು. ಜೊತೆಗೆ ಪ್ರಜೆಗಳ ಪೂರ್ಣ ಸಹಕಾರವೂ ಇತ್ತು. ಅದೇ ರೀತಿ ಮತ್ತೊಂದು ಸಂದರ್ಭ ೧೯೭೧ ರ ಬಾಂಗ್ಲಾ ಯುದ್ಧದಲ್ಲಿ ಭಾರತೀಯ ಸೇನೆಯ ಶೌರ್ಯ ಸಾಬೀತಾಯಿತು. ಆ ಸಂರ್ಭವೇ ಬಾಂಗ್ಲಾದೇಶ ಪಾಕಿಸ್ತಾನದಿಂದ ಬೇರೆಯಾಗಿದ್ದು ಒಂದು ಘಟನೆ. ಇಂದಿರಾ ಗಾಂಧಿಯವರು ಸೈನ್ಯಾಧಿಕಾರಿಯ ಸಲಹೆ ಕೇಳಿದರು. ಆಗ ಜ. ಮಾಣಿಕ್ಷಾ ಸೇನಾ ದಂಡನಾಯಕ. ಅವರು ಸೈನಿಕರನ್ನು ಹುರಿದುಂಬಿಸಿ ಪಶ್ಚಿಮದಿಂದ ಪೂರ್ವ ಬಾಂಗ್ಲಾದಲ್ಲಿ ಒಮ್ಮೆಲೆ ದಾಳಿ ನಡೆಸಿ ವಿಜಯ ಸಾಧಿಸಿಬಿಟ್ಟರು. ೯೦,೦೦೦ ಪಾಕ್ ಸೈನಿಕರು ಸೆರೆಯಾದರು. ಯುದ್ಧ ಕೊನೆಗೊಂಡಿತು. ಕಾಶ್ಮೀರ ಯುದ್ಧದಲ್ಲಿ ಜ. ತಿಮ್ಮಯ್ಯ ಹೇಗೋ, ಬಾಂಗ್ಲಾ ಯುದ್ಧದಲ್ಲಿ ಮಾಣಿಕ್ಷಾ ಹೆಸರು ಪಡೆದರು. ಈಗಲೂ ದೇಶಕ್ಕಾಗಿ ಸರ್ವತ್ಯಾಗ ಮಾಡುವ ಪರಿಸ್ಥಿತಿ ಬಂದರೂ ಭಾರತೀಯ ಯೋಧರು ಸಿದ್ಧರಾಗಿರುವರು. ಅಂತವರ ಸೇವೆಯನ್ನು ಮಾಸಿಕ ಸಂಬಳಕ್ಕೆ ಹೋಲಿಸುವುದು ಸರಿಯಲ್ಲ.
ಭಾರತ ಹುಟ್ಟಿದಾಗಲೇ ನೆರೆ ರಾಜ್ಯಗಳು ಶತ್ರುಗಳಾದರು. ಕಾರಣಗಳಿಲ್ಲದೆ ೪ ಯುದ್ಧಗಳನ್ನು ಕಂಡಿದ್ದೇವೆ. ಸೋತು ಸುಣ್ಣವಾದರೂ ಪಾಕಿಸ್ತಾನ ತನ್ನ ದುರ್ಬುದ್ದಿ ಬಿಟ್ಟಿಲ್ಲ. ಪರಿಸ್ಥಿತಿ ಹೀಗೆ ಇರುವುದರಿಂದ ಭಾರತೀಯ ಸೈನಿಕರ ಜವಾಬ್ದಾರಿ ಇನ್ನೂ ಹೆಚ್ಚಿದೆ. ಅವರ ರಕ್ಷಣೆಯಲ್ಲಿ ನಾವು ಮನೆಯಲ್ಲಿ ಹಾಯಾಗಿ ನಿದ್ದೆ ಮಾಡುತ್ತಿದ್ದೇವೆ. ನಮ್ಮ ಮಾನಸಿಕ ಚಿಂತನೆಯನ್ನು ಬದಲಾಯಿಸಿ ದೇಶಭಕ್ತ ಸೈನಿಕರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯ.
ಜೈ ಜವಾನ್
- ಸಿ.ಎಂ. ಭೀಮಯ್ಯ, ಉಪನ್ಯಾಸಕರು (ನಿ), ಗಾಂಧಿನಗರ, ವೀರಾಜಪೇಟೆ.