*ಗೋಣಿಕೊಪ್ಪ, ಜ. ೧೪: ತಿತಿಮತಿ, ನೆಲ್ಲಿಕಾಡು ಸರ್ಕಾರಿ ಪ್ರಾಥಮಿಕ ಶಾಲೆಯ ಬಳಿ ಕಾಫಿ ತೋಟದಲ್ಲಿ ೧೦ಕ್ಕೂ ಹೆಚ್ಚು ಆನೆಗಳು ಬೀಡುಬಿಟ್ಟಿದ್ದು, ಆತಂಕಕ್ಕೆ ಕಾರಣವಾಗಿದೆ.

ಆದೇಂಗಡ ಪುಟ್ಟು ಮಂದಣ್ಣ ಅವರ ಕಾಫಿ ತೋಟದಲ್ಲಿ ಕಳೆದ ಒಂದು ವಾರದಿಂದ ಆನೆಗಳ ಹಿಂಡು ದಾಂದಲೆ ನಡೆಸುತ್ತಿವೆೆ.

ತೋಟದ ಸಮೀಪವೇ ಸರ್ಕಾರಿ ಪ್ರಾಥಮಿಕ ಶಾಲೆ ಇರುವುದರಿಂದ ಶಾಲೆಗೆ ಮಕ್ಕಳು ಬರಲು ಅಂಜುತ್ತಿದ್ದಾರೆ. ಜತೆಗೆ ಕಾಫಿ ಕುಯ್ಲಿನ ಸಮಯವಾದುದರಿಂದ ಆನೆಗಳು ತೋಟದೊಳಗೆ ನುಸುಳುತ್ತಿರುವುದು ಕಾಫಿ ಹಣ್ಣುಗಳು ಉದುರುತ್ತಿದ್ದು, ಬೆಳೆಗಾರರಿಗೆ ನಷ್ಟ ಸಂಭವಿಸುತ್ತಿದೆ. ತೋಟದೊಳಗೆ ಆನೆಯ ಸಂಚಾರದಿAದ ಕಾರ್ಮಿಕರು ತೋಟಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಗ್ರಾಮಸ್ಥರು ಹಲವಾರು ಬಾರಿ ಅರಣ್ಯಾಧಿಕಾರಿಗಳಿಗೆ ಆನೆಯನ್ನು ಓಡಿಸಲು ಕ್ರಮಕೈಗೊಳ್ಳಿ ಎಂದು ಮನವಿ ಮಾಡಿದರೂ ಯಾವುದೇ ಸ್ಪಂದನ ಕಂಡುಬರುತ್ತಿಲ್ಲ. ಆನೆ ಓಡಿಸಲು ವಿಶೇಷ ತಂಡ ತಿತಿಮತಿ ಅರಣ್ಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಸಮೀಪದಲ್ಲೇ ತಂಡವಿದ್ದರೂ ತಿತಿಮತಿ ಭಾಗದ ಕಾಫಿ ತೋಟಗಳಲ್ಲಿ ಆನೆ ಓಡಿಸಲು ಜಾಗೃತಿಯಾಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಆನೆ, ಹುಲಿ, ಕರಡಿ, ಮಂಗಗಳು ಸೇರಿದಂತೆ ಇತರ ಕಾಡು ಪ್ರಾಣಿಗಳಿಂದ ಬೆಳೆಗಾರರು ಸದಾ ನಷ್ಟ ಅನುಭವಿಸುತ್ತಿದ್ದಾರೆ. ಬೆಳೆಗಾರರ ಸಮಸ್ಯೆಯನ್ನು ಅರಣ್ಯಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಸೂಕ್ತ ಪರಿಹಾರ ಒದಗಿಸಿಕೊಡಲು ಕ್ರಮ ಕೈಗೊಳ್ಳಬೇಕು. ಗಂಭೀರವಾಗಿ ಕಾರ್ಯೋನ್ಮುಖವಾಗದೇ ಜನರ ಒತ್ತಾಯಕ್ಕೆ ಮಣಿದು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಆನೆ ಓಡಿಸುವ ಕ್ರಮ ಎಂದಿಗೂ ಸಫಲತೆ ಕಂಡುಕೊಳ್ಳಲು ಸಾಧ್ಯವಿಲ್ಲ. ಸೂಕ್ತ ರೀತಿಯಲ್ಲಿ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ತಾ.ಪಂ. ಮಾಜಿ ಸದಸ್ಯೆ ಆಶಾ ಜೇಮ್ಸ್ ಒತ್ತಾಯಿಸಿದ್ದಾರೆ.