ಶನಿವಾರಸಂತೆ, ಜ. ೧೪: ಗ್ಯಾಸ್ ಏಜೆನ್ಸಿಯವರು ದುಬಾರಿ ಸಾಗಾಣಿಕೆ ವೆಚ್ಚಕ್ಕೆ ಕಡಿವಾಣ ಹಾಕುವಂತೆ ತಾಲೂಕು ಆಹಾರ ನಿರೀಕ್ಷಕಿ ಯಶಸ್ವಿನಿ ಅವರಿಗೆ ತಾಲೂಕು ಕಚೇರಿಯ ಶಿರಸ್ತೆದಾರ್ ಚಂದ್ರಹಾಸರ ಮೂಲಕ ಕರವೇ ಕಾರ್ಯಕರ್ತರು ಮನವಿ ಸಲ್ಲಿಸಿದರು.

ಶನಿವಾರಸಂತೆ ಹೋಬಳಿಯಲ್ಲಿ ಗ್ಯಾಸ್ ಏಜೆನ್ಸಿಯವರು ಊರೂರುಗಳಿಗೆ ಅವರ ವಾಹನದಲ್ಲಿ ಗ್ಯಾಸ್ ಸರಬರಾಜಿಗೆ ಹೆಚ್ಚಿನ ಹಣ ತೆಗೆದುಕೊಳ್ಳುತ್ತಿದ್ದಾರೆ ಎಂದು ಕರವೇ ತಾಲೂಕು ಘಟಕದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಕಾರ್ಯದರ್ಶಿಗಳಾದ ಪ್ರವೀಣ್, ರಕ್ಷಿತ್, ಸದಸ್ಯರಾದ ಶರತ್, ಸುಬ್ಬಣ್ಣ, ರಮೇಶ್,ಮೋಹನ್ ಇತರರು ಮನವಿಯಲ್ಲಿ ದೂರಿದ್ದಾರೆ.

ಸರ್ಕಾರದ ಆದೇಶದಂತೆ ೫ ಕಿ.ಮೀ.ವರೆಗೆ ಮನೆಮನೆಗೆ ಉಚಿತವಾಗಿ ಗ್ಯಾಸ್ ವಿತರಣೆ ಮಾಡಬೇಕು. ನಂತರ ಕಿ.ಮೀ.ಗೆ ರೂ.೧.೭೦ರಂತೆ ತೆಗೆದುಕೊಳ್ಳಬೇಕು ಎಂಬ ಆದೇಶವಿದ್ದರೂ, ಹೆಚ್ಚಿನ ಹಣ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಆಹಾರ ನಿರೀಕ್ಷಕರು ಶೀಘ್ರ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಆಹಾರ ನಿರೀಕ್ಷಕರ ಕಚೇರಿ ಹಾಗೂ ಗ್ಯಾಸ್ ಏಜೆನ್ಸಿ ಅಂಗಡಿಗಳ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರವೇ ಕಾರ್ಯಕರ್ತರು ಎಚ್ಚರಿಸಿದ್ದಾರೆ.