ಮಡಿಕೇರಿ,ಜ.೧೪; ಸ್ವಸ್ತಿ ಕಲಿಯುಗ ವರ್ಷ ೫೧೨೩, ಪ್ಲವ ನಾಮ ಸಂ. ಮಕರಮಾಸ ಉತ್ತರಾಯಣ, ಶುಕ್ಲ ಪಕ್ಷ, ದ್ವಾದಶಿಯ ಇಂದು ನಾಡಿನೆಲ್ಲೆಡೆ ಶ್ರೀ ಅಯ್ಯಪ್ಪ ದೇವಾಲಯಗಳು ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಮಕರ ಸಂಕ್ರಾAತಿ ಮಹೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಅಯ್ಯಪ್ಪ ದೇವರಿಗೆ ವಿಶೇಷ ಪೂಜೆ, ಅಭಿಷೇಕ ಮಾಡಿ ಕರ್ಪೂರ ಹಚ್ಚಿ ಪ್ರಾರ್ಥನೆ ಸಲ್ಲಿಸಲಾಯಿತು.
ಮಡಿಕೇರಿಯ ಶ್ರೀ ಮುತ್ತಪ್ಪ ದೇವಾಲಯ ಆವರಣದಲ್ಲಿರುವ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ಗಣಪತಿ ಹೋಮ, ಪಂಚಾಮೃತ ಅಭಿಷೇಕ, ಎಳನೀರಾಭಿಷೇಕ, ಅಯ್ಯಪ್ಪ ದೇವರ ಉತ್ಸವ ಮೂರ್ತಿಯ ಕ್ಷೇತ್ರ ಪ್ರದಕ್ಷಿಣೆ, ಮುತ್ತಪ್ಪ ಹಾಗೂ ಗುಳಿಗ ದೇವರ ವೆಳ್ಳಾಟಂ, ಮಹಾ ಮಂಗಳಾರತಿ, ಪ್ರಸಾದ ವಿತರಣೆಯೊಂದಿಗೆ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನೆರವೇರಿತು. ಸಂಜೆ, ಭಜನೆ, ಅಲಂಕಾರ ಪೂಜೆ, ಪಡಿಪೂಜೆ, ದೀಪಾರಾಧನೆ, ಪ್ರಸಾದ ವಿನಿಯೋಗ ನಡೆಯಿತು.
ಹೆಮ್ಮೆತ್ತಾಳುವಿನಲ್ಲಿ
ಮಕ್ಕಂದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆಮ್ಮೆತ್ತಾಳು ಗ್ರಾಮದ ಆದಂ ಎಸ್ಟೇಟ್‌ನಲ್ಲಿರುವ ಐತಿಹಾಸಿಕ ಹಿನ್ನೆಲೆ ಇರುವ ಶ್ರೀ ಬೇಟೆ ಅಯ್ಯಪ್ಪ ದೇವಾಲಯದಲ್ಲಿ ಮಕರ ಸಂಕ್ರಾAತಿ ಪೂಜೆ ನೆರವೇರಿತು. ದೇವರಿಗೆ ವಿವಿಧ ಅಭಿಷೇಕದೊಂದಿಗೆ ಮಹಾ ಮಂಗಳಾರತಿ ನೆರವೇರಿತು. ಕರ್ಪೂರ ಹಚ್ಚಿ ಪಡಿಪೂಜೆ ನೆರವೇರಿಸಲಾಯಿತು. ಇದೇ ಸಂದರ್ಭದಲ್ಲಿ ಸನಿಹದಲ್ಲಿರುವ ನಾಗದೇವರು ಹಾಗೂ ಚಾಮುಂಡೇಶ್ವರಿಗೂ ಪೂಜೆ ಸಲ್ಲಿಸಲಾಯಿತು. ನೆರೆದಿದ್ದ ಭಕ್ತ ಸಮೂಹಕ್ಕೆ ಪ್ರಸಾದ ವಿತರಣೆಯೊಂದಿಗೆ ಅನ್ನ ಸಂರ್ಪಣೆ ಮಾಡಲಾಯಿತು. ದೇವಾಲಯದ ಅರ್ಚಕ ಶ್ರೀಕೃಷ್ಣ ನೂರಿತ್ತಾಯ ಪೂಜಾ ವಿಧಿಗಳನ್ನು ನೆರವೇರಿಸಿದರು.