ಮಡಿಕೇರಿ, ಜ. ೧೩ : ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿರುವ ವನ್ಯಜೀವಿ ಮತ್ತು ಮಾನವ ನಡುವಿನ ಸಂಘರ್ಷಕ್ಕೆ ಶಾಶ್ವತ ಪರಿಹಾರ ಸೂಚಿಸಬೇಕು, ತಪ್ಪಿದಲ್ಲಿ ಜನಪ್ರತಿನಿಧಿಗಳು ಹಾಗೂ ಅರಣ್ಯ ಅಧಿಕಾರಿಗಳ ವಿರುದ್ಧ ಬೃಹತ್ ಹೋರಾಟವನ್ನು ರೂಪಿಸಬೇಕಾಗುತ್ತದೆ ಎಂದು ಕೊಡಗು ಸಂರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.

ವೀರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವೈ. ಚಕ್ರಪಾಣಿ ಅವರಿಗೆ ಮನವಿ ಸಲ್ಲಿಸಿದ ವೇದಿಕೆಯ ಪ್ರಮುಖರು ವನ್ಯಜೀವಿಗಳ ದಾಳಿಯನ್ನು ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವೇದಿಕೆ ಸಂಚಾಲಕ ಚೊಟ್ಟೇಕ್‌ಮಾಡ ರಾಜೀವ್ ಬೋಪಯ್ಯ ಮಾತನಾಡಿ ಇಲಾಖೆಯ ವನ್ಯಜೀವಿ ವಿಭಾಗದಲ್ಲಿ ಹಿರಿಯ ಅಧಿಕಾರಿಗಳ ಕೊರತೆ ಇದೆ. ವನ್ಯಜೀವಿಗಳ ದಾಳಿ ನಡೆದಾಗಲೆಲ್ಲಾ ಅಲ್ಪ ಪ್ರಮಾಣದ ಪರಿಹಾರ ನೀಡಿ ಕೈತೊಳೆದುಕೊಳ್ಳಲಾಗುತ್ತಿದೆಯೇ ಹೊರತು ಉಪಟಳ ತಡೆಗೆ ಶಾಶ್ವತ ಯೋಜನೆಯನ್ನು ರೂಪಿಸುತ್ತಿಲ್ಲ.

ದಕ್ಷಿಣ ಕೊಡಗಿನಲ್ಲಿ ಅತಿ ಹೆಚ್ಚು ವನ್ಯಜೀವಿ ದಾಳಿಯ ಘಟನೆಗಳು ನಡೆಯುತ್ತಿವೆ. ಕಾಡಾನೆಗಳ ಉಪಟಳದೊಂದಿಗೆ ಹುಲಿ ದಾಳಿಯು ನಿರಂತರವಾಗಿದ್ದು, ಕಳೆದ ಒಂದು ವರ್ಷದಲ್ಲಿ ಮೂವರು ಬಲಿಯಾಗಿದ್ದಾರೆ. ಹತ್ತಾರು ಹಸುಗಳನ್ನು ಹುಲಿ ಭಕ್ಷಿಸಿದ್ದು, ಇದೀಗ ವರ್ಷದ ಆರಂಭದಲ್ಲೇ ಸುಮಾರು ಐದು ಹಸುಗಳು ವ್ಯಾಘ್ರನ ದಾಳಿಗೆ ತುತ್ತಾಗಿವೆ.

ಮಾನವ ಮತ್ತು ವನ್ಯಜೀವಿ ನಡುವಿನ ಸಂಘರ್ಷ ಮಿತಿ ಮೀರಿದ್ದರೂ ಅರಣ್ಯ ಇಲಾಖೆ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ವನ್ಯಜೀವಿಗಳ ಉಪಟಳ ಇರುವ ಭಾಗಗಳಿಗೆ ಅಧಿಕಾರಿಗಳು ಭೇಟಿ ನೀಡುತ್ತಿಲ್ಲ ಮತ್ತು ಗ್ರಾಮಸ್ಥರ ನೋವನ್ನು ಆಲಿಸುತ್ತಿಲ್ಲವೆಂದು ರಾಜೀವ್ ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದರು. ಮೊದಲ ಹಂತವಾಗಿ ವಿವಿಧ ಸಂಘಟನೆಗಳೊAದಿಗೆ ಚರ್ಚಿಸಿ ಶಾಶ್ವತ ಪರಿಹಾರಕ್ಕಾಗಿ ಒತ್ತಾಯಿಸಲು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಅಧಿಕಾರಿ ೧೫ ದಿನಗಳ ಕಾಲಾವಕಾಶವನ್ನು ಕೋರಿದ್ದಾರೆ, ಈ ಅವಧಿಯೊಳಗೆ ವನ್ಯಜೀವಿಗಳ ಉಪಟಳ ತಡೆಗೆ ಸೂಕ್ತ ಪರಿಹಾರ ಸೂಚಿಸದಿದ್ದಲ್ಲಿ ವೇದಿಕೆ ವತಿಯಿಂದ ದೊಡ್ಡ ಮಟ್ಟದ ಹೋರಾಟವನ್ನು ರೂಪಿಸುವುದಾಗಿ ರಾಜೀವ್ ಬೋಪಯ್ಯ ಎಚ್ಚರಿಕೆ ನೀಡಿದರು.

ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕೇಚಂಡ ಶಿವಪ್ಪ, ಕೂರ್ಗ್ ವೈಲ್ಡ್ಲೈಫ್ ಸೊಸೈಟಿ ಸದಸ್ಯ ಜಮ್ಮಡ ಗಣೇಶ್ ಅಯ್ಯಣ್ಣ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಾಚಿಮಾಡ ರವೀಂದ್ರ, ವೇದಿಕೆ ಸದಸ್ಯರಾದ ಯಶವಂತ್ ಅಪ್ಪಂಡೆರAಡ, ಬಲ್ಲಡ್‌ಚಂಡ ಲೋಕನಾಥ್, ಅನಿತಾ ಅಪ್ಪಂಡೆರAಡ ಮತ್ತಿತರ ಪ್ರಮುಖರು ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.