ಮಡಿಕೇರಿ, ಜ. ೧೩: ನಗರದ ಜನರಲ್ ತಿಮ್ಮಯ್ಯ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ಪತ್ರಕರ್ತರ ಜಿಲ್ಲಾ ಮಟ್ಟದ ಕ್ರಿಕೆಟ್ ಹಬ್ಬ ೨೦೨೨ರ ಚಾಂಪಿಯನ್ ಪ್ರಶಸ್ತಿಯನ್ನು ‘ಮೀಡಿಯಾ ವಾರಿಯರ್ಸ್’ ತಂಡ ಪಡೆದುಕೊಂಡಿತು.

ಫೈನಲ್ ಪಂದ್ಯಾಟಕ್ಕೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಚಾಲನೆ ನೀಡಿದರು. ನಂತರ ಫೈನಲ್ ಪಂದ್ಯದಲ್ಲಿ ನಿಗದಿತ ೪ ಓವರ್ ಪಂದ್ಯದಲ್ಲಿ ಟಾಸ್ ಸೋತ ಟೀಂ ಸರ್ಜಿಕಲ್ ತಂಡ ೧ ವಿಕೆಟ್‌ಗೆ ೫೧ ರನ್ ಕಲೆ ಹಾಕಿತು. ತಂಡದ ಪರ ಲೋಕೇಶ್ ಕಾಟಕೇರಿ ೨೫ ರನ್ ದಾಖಲಿಸಿದರು. ಗುರಿ ಬೆನ್ನಟ್ಟಿದ ಮೀಡಿಯಾ ವಾರಿಯರ್ಸ್ ತಂಡ ೩.೩ ಓವರ್‌ನಲ್ಲಿ ೧ ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ತಂಡದ ಪರ ವಿನೋದ್ ೨೩, ಮೋಹನ್ ರಾಜ್ ೨೦ ರನ್ ದಾಖಲಿಸಿದರು. ಪರಿಣಾಮ ೨೦೨೨ರ ಪತ್ರಕರ್ತರ ಜಿಲ್ಲಾ ಮಟ್ಟದ ಕ್ರಿಕೆಟ್ ಹಬ್ಬದ ಚಾಂಪಿಯನ್ ಪ್ರಶಸ್ತಿಯನ್ನು ಮೀಡಿಯಾ ವಾರಿಯರ್ಸ್ ಪಡೆದುಕೊಂಡರೆ, ಟೀಂ ಸರ್ಜಿಕಲ್ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.

ಇದಕ್ಕೂ ಮೊದಲು ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಟಾಸ್ ಸೋತ ಟೀಂ ಸರ್ಜಿಕಲ್ ತಂಡ ನಿಗದಿತ ೩ ಓವರ್‌ನಲ್ಲಿ ೩ ವಿಕೆಟ್ ಕಳೆದುಕೊಂಡು ೨೯ ರನ್ ಕಲೆ ಹಾಕಿತು. ಗುರಿಬೆನ್ನಟ್ಟಿದ ಕೂರ್ಗ್ ಸೂಪರ್ ಕಿಂಗ್ಸ್ ತಂಡ ೫ ವಿಕೆಟ್‌ಗೆ ೨೪ ಪೇರಿಸಿ, ೫ ರನ್‌ಗಳ ಅಂತರದಲ್ಲಿ ಸೋಲುಂಡಿತು.

ಸೆಮಿಫೈನಲ್‌ನಲ್ಲಿ ಟಾಸ್ ಸೋತ ವಿ-೧೨ ತಂಡ ನಿಗದಿತ ೪ ಓವರ್‌ನಲ್ಲಿ ೧ ವಿಕೆಟ್‌ಗೆ ೫೧ ರನ್ ಕಲೆ ಹಾಕಿತು. ಗುರಿಬೆನ್ನಟ್ಟಿದ ಟೀಂ ಸರ್ಜಿಕಲ್ ತಂಡ ೪ ವಿಕೆಟ್ ಕಳೆದುಕೊಂಡು ೩.೩ ಓವರ್‌ನಲ್ಲಿ ಗೆಲುವು ದಾಖಲಿಸಿ ಫೈನಲ್ ಪ್ರವೇಶ ಪಡೆಯಿತು. ವಿ-೧೨ ತಂಡ ತೃತೀಯ ಸ್ಥಾನ ಪಡೆದುಕೊಂಡಿತು.

೮ ತಂಡಗಳು ಭಾಗಿ

ಕ್ರಿಕೆಟ್ ಹಬ್ಬದಲ್ಲಿ ಜಿಲ್ಲೆಯಿಂದ ೮ ತಂಡಗಳು ಪಾಲ್ಗೊಂಡಿತ್ತು. ಮೀಡಿಯಾ ವಾರಿಯರ್ಸ್ ೫ ಅಂಕ, ಟೀಂ ಸರ್ಜಿಕಲ್ ೪ ಅಂಕ, ವಿ-೧೨ ೪ ಅಂಕ, ಕೂರ್ಗ್ ಸೂಪರ್ ಕಿಂಗ್ಸ್ ೪, ಮೀಡಿಯಾ ಥಂಡರ್ಸ್ ೨ ಅಂಕ, ಮೀಡಿಯಾ ಪಂಟರ್ಸ್ ೩ ಅಂಕ, ಪ್ರೆಸಿಡೆಂಟ್ ಇಲೆವೆನ್ ೨ ಅಂಕ, ಮೀಡಿಯಾ ಅವೆಂಜರ್ಸ್ ೦ ಅಂಕ ಪಡೆದುಕೊಂಡಿತು.

೬ ಅರ್ಧ ಶತಕ ದಾಖಲು

ವೀ-೧೨ ಮತ್ತು ಮೀಡಿಯಾ ಥಂಡರ್ಸ್ ನಡುವಿನ ಪಂದ್ಯದಲ್ಲಿ ವೀ-೧೨ ತಂಡ ಹೇಮಂತ್ ೨೨ ಎಸೆತದಲ್ಲಿ ೧೦ ಸಿಕ್ಸರ್, ೧ ಬೌಂಡರಿ ನೆರವಿನೊಂದಿಗೆ ೭೨ ರನ್ ದಾಖಲಿಸಿದರು. ವಿ-೧೨ ಮತ್ತು ಪ್ರೆಸಿಡೆಂಟ್ ಇಲೆವೆನ್ ತಂಡಗಳ ನಡುವಿನ ಪಂದ್ಯದಲ್ಲಿ ಪ್ರೆಸಿಡೆಂಟ್ ಇಲೆವೆನ್ ತಂಡದ ಶಿವರಾಜ್ ೧೮ ಎಸೆತದಲ್ಲಿ ೮ ಸಿಕ್ಸರ್ ನೆರವಿನೊಂದಿಗೆ ೫೬ ರನ್ ಬಾರಿಸಿದರು. ಇದೇ ಪಂದ್ಯದಲ್ಲಿ ವಿ-೧೨ ತಂಡದ ಹೇಮಂತ್ ೧೯ ಎಸೆತದಲ್ಲಿ ೮ ಸಿಕ್ಸರ್ ಮತ್ತು ೪ ಬೌಂಡರಿ ನೆರವಿನೊಂದಿಗೆ ೭೨ ರನ್ ದಾಖಲಿಸಿದರು. ಕೂರ್ಗ್ ಸೂಪರ್ ಕಿಂಗ್ಸ್ ಮತ್ತು ಮೀಡಿಯಾ ಥಂಡರ್ಸ್ ನಡುವಿನ ಪಂದ್ಯದಲ್ಲಿ ಮೀಡಿಯಾ ಥಂಡರ್ಸ್ ತಂಡದ ಆದರ್ಶ್ ಅದ್ಕಲೇಗಾರ್ ೧೨ ಎಸೆತದಲ್ಲಿ ೯ ಸಿಕ್ಸರ್ ನೆರವಿನೊಂದಿಗೆ ೫೧ ರನ್ ದಾಖಲಿಸಿ ಪಂದ್ಯಾಟದ ವೇಗದ ಅರ್ಧಶತಕ ದಾಖಲಿಸಿದರು. ಇದೇ ಪಂದ್ಯದಲ್ಲಿ ಕೂರ್ಗ್ ಸೂಪರ್ ಕಿಂಗ್ಸ್ ತಂಡದ ಕಲೀಲ್ ೧೯ ಎಸೆತದಲ್ಲಿ ೫೪ ರನ್ ದಾಖಲಿಸಿದರು.

ವೈಯಕ್ತಿಕ ಪ್ರಶಸ್ತಿ ವಿವರ

ಪಂದ್ಯ ಶ್ರೇಷ್ಠ ಪ್ರಶಸ್ತಿ-ಮೀಡಿಯಾ ವಾರಿಯರ್ಸ್ನ ಮೋಹನ್ ರಾಜ್, ಸರಣಿ ಶ್ರೇಷ್ಠ ಪ್ರಶಸ್ತಿ ಮತ್ತು ಬೆಸ್ಟ್ ವಿಕೆಟ್ ಕೀಪರ್ ಪ್ರಶಸ್ತಿ-ಮೀಡಿಯಾ ವಾರಿಯರ್ಸ್ನ ವಿನೋದ್, ಬೆಸ್ಟ್ ಕ್ಯಾಚರ್-ಟೀಂ ಸರ್ಜಿಕಲ್‌ನ ಲೋಕೇಶ್ ಕಾಟಕೇರಿ ಹಾಗೂ ಮೀಡಿಯಾ ಪಂಟರ್ಸ್ನ ಪ್ರಜ್ವಲ್, ಬೆಸ್ಟ್ ಬ್ಯಾಟ್ಸ್ಮೆನ್ ಟೀಂ ಸರ್ಜಿಕಲ್‌ನ ಕೆ.ಎ. ಆದಿತ್ಯ, ಹೆಚ್ಚಿನ ಸಿಕ್ಸರ್ -ವಿ೧೨ನ ಹೇಮಂತ್, ಬೆಸ್ಟ್ ಎಮರ್ಜಿಂಗ್ ಪ್ಲೇಯರ್-ವಿಶ್ಮ ಪೆಮ್ಮಯ್ಯ, ದಿವಾಕರ್, ರೆಜಿತ್ ಕುಮಾರ್ ಗುಯ್ಯ, ಬೆಸ್ಟ್ ರನ್ನಿಂಗ್ ಕ್ಯಾಚರ್ ವಿಶ್ವ ಕುಂಬೂರು ಪಡೆದುಕೊಂಡರು. ಪ್ರಥಮ ಸ್ಥಾನ ಪಡೆದ ತಂಡಕ್ಕೆ ೨೫,೦೦೦ ನಗದು ಮತ್ತು ಟ್ರೋಫಿ ನೀಡಲಾಯಿತು. ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ತಂಡಗಳಿಗೆ ನಗದು ಮತ್ತು ಟ್ರೋಫಿ ನೀಡಿ ಗೌರವಿಸಲಾಯಿತು.

ಸಮಾರೋಪ

ನಗರದ ಪತ್ರಿಕಾ ಭವನದಲ್ಲಿ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಪ್ರಜಾಪ್ರಭುತ್ವದ ಹದ್ದಿನ ಕಣ್ಣಾಗಿರುವ ಮಾಧ್ಯಮ ಕ್ಷೇತ್ರ ಸಾಮಾಜಿಕ ಕಳಕಳಿಯನ್ನು ಹೊಂದಿದೆ. ವಾಸ್ತವಾಂಶವನ್ನು ಜನರಿಗೆ ಮುಟ್ಟಿಸುವ ಮೂಲಕ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಕೊಡಗು ಜಿಲ್ಲೆಯ ಪತ್ರಕರ್ತರು ಪತ್ರಿಕಾ ಧರ್ಮಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತಿದ್ದಾರೆ. ಕೋವಿಡ್ ಪರಿಸ್ಥಿತಿ, ಪ್ರಾಕೃತಿಕ ವಿಕೋಪದ ಸಂದರ್ಭ ಜೀವದ ಹಂಗು ತೊರೆದು ಜನರ ಸಂಕಷ್ಟಕ್ಕೆ ಪತ್ರಕರ್ತರು ಸ್ಪಂದಿಸಿದ್ದಾರೆ ಎಂದು ಶ್ಲಾಘಿಸಿದರು.

ಪತ್ರಕರ್ತರ ಸಂಘ ರಾಜ್ಯ ನಿರ್ದೇಶಕ ಹಾಗೂ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಭಾರತ ಸ್ವಾತಂತ್ರö್ಯಗೊಳ್ಳಬೇಕು ಎಂಬ ಮೂಲ ಉದ್ದೇಶದಿಂದ ದೇಶದಲ್ಲಿ ಪತ್ರಿಕಾ ಕ್ಷೇತ್ರ ಜೀವ ಪಡೆದುಕೊಂಡಿತು. ಕೋವಿಡ್ ಹಿನ್ನೆಲೆ ಮಾಧ್ಯಮ ಕ್ಷೇತ್ರ ಹಿನ್ನಡೆ ಸಾಧಿಸಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಪತ್ರಿಕಾ ಸರಬರಾಜಿನಲ್ಲಿ ಶೇ. ೪೦ ರಷ್ಟು ಕುಸಿತ ಕಂಡಿದೆ. ಹಲವರು ಉದ್ಯೋಗ ಕಳೆದುಕೊಂಡಿದ್ದಾರೆ. ಸಂಬಳ ಕಡಿತಗೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಕಾರ್ಯಾಂಗ, ಶಾಸಕಾಂಗ, ಪತ್ರಿಕಾ ರಂಗ ಒಂದಾಗಿರಬೇಕು. ಪತ್ರಕರ್ತರು ಸಂಘಟಿತರಾಗಬೇಕು ಎಂದು ಕರೆ ನೀಡಿದರು.

ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿ, ಮೂರು ವರ್ಷದಲ್ಲಿ ಪತ್ರಕರ್ತರಿಗೆ ಸಂಘ ಅನೇಕ ಕಾರ್ಯಕ್ರಮ ಆಯೋಜನೆ ಮಾಡಿದೆ. ಕೋವಿಡ್‌ನಿಂದ ಮೃತಪಟ್ಟ ಪತ್ರಕರ್ತರ ಕುಟುಂಬಕ್ಕೆ ರೂ. ೫ ಲಕ್ಷ ಪರಿಹಾರ ವಿತರಣೆಗೆ ಸರಕಾರ ಕ್ರಮ ಕೈಗೊಂಡಿದೆ. ಪ್ರಾಕೃತಿಕ ವಿಕೋಪ ಸಂದರ್ಭ ಪತ್ರಕರ್ತರ ಸಂಕಷ್ಟಕ್ಕೆ ಸಂಘ ಮಿಡಿದಿದೆ. ಆದರೆ, ಕೋವಿಡ್‌ನಿಂದ ಸಾವನ್ನಪ್ಪಿದ ಜಿಲ್ಲೆಯ ಪತ್ರಕರ್ತ ಶ್ರೀನಿವಾಸ್ ಚಂಗಪ್ಪ ಕುಟುಂಬಕ್ಕೆ ಇನ್ನೂ ಪರಿಹಾರ ದೊರೆತಿಲ್ಲ. ಈ ಬಗ್ಗೆ ಕ್ರಮವಹಿಸುವಂತೆ ಶಾಸಕರನ್ನು ಮನವಿ ಮಾಡಿದರು.

ಪತ್ರಕರ್ತರ ನಿವೇಶನಕ್ಕಾಗಿ ಹಲವು ವರ್ಷಗಳ ಬೇಡಿಕೆ ಇದೆ. ಇಂದಿಗೂ ಪತ್ರಕರ್ತರು ಸ್ವಂತ ಸೂರಿಲ್ಲದೆ ತೊಂದರೆಯಲ್ಲಿದ್ದಾರೆ. ಈಗಾಗಲೇ ಈ ನಿಟ್ಟಿನಲ್ಲಿ ಕಡತಗಳು ಜಿಲ್ಲಾಧಿಕಾರಿ ಕಚೇರಿಗೆ ವಿಲೇವಾರಿಯಾಗಿದ್ದು, ಈ ಬಗ್ಗೆ ಕ್ರಮವಹಿಸುವಂತೆ ಶಾಸಕ ಕೆ.ಜಿ. ಬೋಪಯ್ಯ ಅವರ ಬಳಿ ಮನವಿ ಮಾಡಿದರು.

ಈ ಸಂದರ್ಭ ಪತ್ರಕರ್ತರ ಸಂಘದ ರಾಷ್ಟಿçÃಯ ಸಮಿತಿ ಸದಸ್ಯ ಎಸ್.ಎ. ಮುರುಳೀಧರ್, ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನು ಕಾರ್ಯಪ್ಪ, ಕ್ರೀಡಾ ಸಮಿತಿ ಸಂಚಾಲಕ ಮಂಜು ಸುವರ್ಣ ಹಾಜರಿದ್ದರು. ಸಂಘದ ಉಪಾಧ್ಯಕ್ಷ ಕೆ.ಎ. ಆದಿತ್ಯ ಪ್ರಸ್ತಾವಿಕವಾಗಿ ಮಾತನಾಡಿದರು, ಕಾರ್ಯದರ್ಶಿ ಆನಂದ್ ಕೊಡಗು ನಿರೂಪಿಸಿದರು. ಅನು ಕಾರ್ಯಪ್ಪ ಸ್ವಾಗತಿಸಿ, ಖಜಾಂಚಿ ಪ್ರೇಮ್‌ಕುಮಾರ್ ವಂದಿಸಿದರು.