ಮಡಿಕೇರಿ, ಜ. ೧೦: ಮಡಿಕೇರಿಯ ತಾಲೂಕು ತಹಶೀಲ್ದಾರ್ ಕಚೇರಿಯಲ್ಲಿ ಕಂದಾಯ ದಾಖಲೆಗಳು ಸಕಾಲದಲ್ಲಿ ದೊರಕದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ.

ಕಳೆದ ೫ ದಿನಗಳಿಂದ ಕಚೇರಿಯ ಪ್ರಿಂಟರ್ ಹಾಳಾಗಿದೆ. ಇನ್ನೂ ದುರಸ್ತಿಯಾಗಿಲ್ಲ. ಇದರಿಂದಾಗಿ ದೂರದ ಗ್ರಾಮೀಣ ಭಾಗಗಳಿಂದ ಜನರು ನಿತ್ಯವೂ ಬರುತ್ತಿದ್ದು ತಮಗೆ ಅಗತ್ಯವಾದ ದಾಖಲೆಗಳು ಸಕಾಲದಲ್ಲಿ ಲಭ್ಯವಾಗದೆ ಅಲೆದಾಡುತ್ತಿದ್ದಾರೆ.

ಅನೇಕ ಅಗತ್ಯ ಕಾರ್ಯಗಳಿಗೆ ತುರ್ತಾಗಿ ಬೇಕಾಗುವ ಜಮಾಬಂದಿ, ಆರ್.ಟಿ.ಸಿ. ಇತ್ಯಾದಿ ದೊರಕದೆ ಸಾಮಾನ್ಯ ಜನರು, ರೈತರು, ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಇವರ ಬವಣೆ ನೀಗಬೇಕಾಗಿದೆ ಎಂದು ಗ್ರಾಮಸ್ಥರ ಪರವಾಗಿ ಮಾದೇವ ಎಂಬವರು ‘ಶಕ್ತಿ’ಯಲ್ಲಿ ನಿವೇದಿಸಿಕೊಂಡಿದ್ದಾರೆ.

ಜಿಲ್ಲಾಧಿಕಾರಿಯವರು ಆದಷ್ಟು ಶೀಘ್ರ ತಾಲೂಕು ಕಚೇರಿಯಲ್ಲಿ ಕಡತಗಳು ಸುಲಭವಾಗಿ ಲಭ್ಯವಾಗÀಲು ಕಂಪ್ಯೂಟರೀಕೃತಗೊಳಿಸಿದರೆ ಜನರಿಗೆ ದಾಖಲೆಗಳನ್ನು ಪಡೆಯಲು ಸುಲಭ ಸಾಧ್ಯವಾಗುತ್ತದೆ. ವಿಳಂಬವಾಗುವುದು ತಪ್ಪುತ್ತದೆ. ತತ್ಕಾಲಕ್ಕೆ ಕೂಡಲೇ ಪ್ರಿಂಟರ್ ವ್ಯವಸ್ಥೆಯನ್ನು ಸರಿಪಡಿಸುವಂತೆಯೂ ಕೋರಿದ್ದಾರೆ.