ಕೂಡಿಗೆ, ಜ. ೬: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಭುವನಗಿರಿ, ಸೀಗೆಹೊಸೂರು, ಎಲಕನೂರು, ಹೊಸಳ್ಳಿ ಮಾರ್ಗವಾಗಿ ಸೋಮವಾರಪೇಟೆಗೆ ಹೋಗುವ ರಸ್ತೆ ಕಳೆದ ೧೦ ವರ್ಷಗಳಿಂದಲೂ ದುರಸ್ತಿಗೊಳ್ಳದೆ ತೀರಾ ಹಾಳಾಗಿದ್ದು ಈ ರಸ್ತೆ ದುರಸ್ತಿಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸೀಗೆಹೊಸೂರು ಮಾರ್ಗದ ರಸ್ತೆ ಭುವನಗಿರಿ ಮೂಲಕ ಹಾಸನ ಹೆದ್ದಾರಿಯ ಸಂಪರ್ಕ ಸೇರುವ ರಸ್ತೆಯಾಗಿದೆ. ಈ ರಸ್ತೆಯು ಲೋಕೋಪಯೋಗಿ ಇಲಾಖೆಯ ಅಧೀನಕ್ಕೆ ಒಳಪಡುತ್ತದೆ. ಈ ಮಾರ್ಗವಾಗಿ ಅನೇಕ ಕಲ್ಲು ತುಂಬಿದ ಲಾರಿಗಳ ಓಡಾಟದಿಂದ ರಸ್ತೆಯು ಹಾಳಾಗಿದ್ದು, ಮುಂದಿನ ದಿನಗಳಲ್ಲಿ ಇಲಾಖೆಯ ಅಧಿಕಾರಿ ವರ್ಗದವರು, ಸ್ಥಳೀಯ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾಮಗಾರಿ ಕೈಗೊಳ್ಳುವಂತೆ ಸಾರ್ವಜನಿಕರ ಒತ್ತಾಯವಾಗಿದೆ. ಇಲ್ಲದಿದ್ದಲ್ಲಿ ಗ್ರಾಮಸ್ಥರ, ಸಾರ್ವಜನಿಕರ ಸಹಕಾರದೊಂದಿಗೆ ಪ್ರತಿಭಟನೆ ಮಾಡಲಾಗುವುದು ಎಂದು ಕೂಡಿಗೆ ಗ್ರಾಮ ಪಂಚಾಯಿತಿ ಸೀಗೆಹೊಸೂರು ವಿಭಾಗದ ಸದಸ್ಯರಾದ ಅನಂತ್, ಚಂದ್ರು ಜಯಶೀಲಾ ಸೇರಿದಂತೆ ಹಲವಾರು ಗ್ರಾಮಸ್ಥರು ತಿಳಿಸಿದ್ದಾರೆ.

ಅಲ್ಲದೆ ಕಳೆದ ಮೂರು ವರ್ಷ ಗಳಿಂದ ಸೋಮವಾರಪೇಟೆ-ಕುಶಾಲ ನಗರ ಮಾರ್ಗವಾಗಿ ಸಂಚಾರ ಮಾಡುತ್ತಿದ್ದ ಬಸ್ ಸಂಚಾರವು ಸಹ ಸ್ಥಗಿತಗೊಂಡಿದೆ. ಇದರಿಂದಾಗಿ ಈ ವ್ಯಾಪ್ತಿಯ ಗ್ರಾಮಸ್ಥರಿಗೆ ಬಾರಿ ತೊಂದರೆಗಳು ಆಗುತ್ತಿವೆ. ಸಂಬAಧಿಸಿದ ಅಧಿಕಾರಿ ವರ್ಗದವರು ಗಮನ ಹರಿಸಬೇಕೆಂದು ಆಗ್ರಹಿಸಿದರು.