ಗೋಣಿಕೊಪ್ಪಲು, ಜ. ೬: ಕುಟ್ಟ ಗ್ರಾಮ ಪಂಚಾಯಿತಿಯಲ್ಲಿ ಬಿಲ್‌ಕಲೆಕ್ಟರ್ ಮಹೇಶ್ ಹಾಗೂ ಅಟೆಂಡರ್ ರಾಜನ್ ಸಾರ್ವಜನಿಕ ರಿಂದ ಸಂಗ್ರಹಿಸುವ ತೆರಿಗೆ ಹಣವನ್ನು ಪಂಚಾಯಿತಿಗೆ ಸಲ್ಲಿಕೆ ಮಾಡದೆ ಲಕ್ಷಾಂತರ ಹಣವನ್ನು ತಮ್ಮ ಸ್ವಂತಕ್ಕೆ ಬಳಸಿಕೊಂಡು ಪಂಚಾಯಿತಿಗೆ ದೊಡ್ಡ ಪ್ರಮಾಣದಲ್ಲಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿ, ಕುಟ್ಟ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ತೀತಿರ ಮಂಜುನಾಥ್ (ರಾಜ) ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಚೋಡುಮಾಡ ಶರೀನ್ ಸುಬ್ಬಯ್ಯ ಮುಂದಾಳತ್ವದಲ್ಲಿ ಪಕ್ಷದ ಕಾರ್ಯಕರ್ತರು ತೆರಳಿ ಕುಟ್ಟ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಚಂದ್ರಪ್ಪನವರಿಗೆ ಲಿಖಿತ ದೂರು ನೀಡಿ ಆರೋಪಿಗಳನ್ನು ಕೂಡಲೇ ಬಂಧಿಸುವAತೆ ಆಗ್ರಹಿಸಿದರು.

ಪೊಲೀಸರು ಒತ್ತಡಕ್ಕೆ ಮಣಿಯದೇ ತನಿಖೆಯನ್ನು ಪಾರದರ್ಶಕವಾಗಿ ನಡೆಸುವಂತೆ ಇದೇ ಸಂದರ್ಭ ಶಕ್ತಿ ಕೇಂದ್ರ ಪ್ರಮುಖ್ ತೀತಿರ ಮಂಜುನಾಥ್ (ರಾಜ) ಒತ್ತಾಯಿಸಿದರು.

ತಕ್ಷಣದಿಂದಲೇ ತನಿಖೆ ಆರಂಭ : ಗ್ರಾಮ ಪಂಚಾಯಿತಿ ನೌಕರರ ಮೇಲೆ ಪಿಡಿಒ ದೂರು ನೀಡಿದ ತಕ್ಷಣ ಪ್ರಕರಣ ದಾಖಲು ಮಾಡಲಾಗಿದೆ ಎಂದು ಕುಟ್ಟ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಚಂದ್ರಪ್ಪ ಮಾಹಿತಿ ಒದಗಿಸಿದರು. ಪೊಲೀಸ್ ತನಿಖೆಗೆ ಬೇಕಾದ ಅಗತ್ಯ ದಾಖಲೆ ಒದಗಿಸಲು ಪಿಡಿಒಗೆ ನೋಟೀಸ್ ಜಾರಿಗೊಳಿಸಲಾಗಿದೆ ಎಂದರು.

ಈ ವೇಳೆ ಶಕ್ತಿ ಕೇಂದ್ರ ಸಹ ಪ್ರಮುಖ್ ಕಾಕೇರ ದಿನೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ಎಂ. ಗಣಪತಿ, ಪಕ್ಷದ ಪ್ರಮುಖರಾದ ಪಿ.ಆರ್. ಮನೋಜ್, ಮುಂತಾದವರು ಹಾಜರಿದ್ದರು.