ಮುಳ್ಳೂರು, ಜ. ೫: ಹಳೆ ವಿದ್ಯಾರ್ಥಿನಿಯರ ತಂಡ ತಾವು ವಿದ್ಯಾಭ್ಯಾಸ ಮಾಡಿದ ಶಾಲೆಗೆ ಉಪಯುಕ್ತ ಪರಿಕರವನ್ನು ಕೊಡುಗೆಯಾಗಿ ನೀಡಿ ಹೊಸ ವರ್ಷವನ್ನು ಮಾದರಿಯಾಗಿ ಆಚರಿಸಿದರು. ಸಮೀಪದ ಶನಿವಾರಸಂತೆ ಶ್ರೀ ವಿಘ್ನೇಶ್ವರ ಬಾಲಕಿಯರ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ೨೦೦೩-೦೪ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ್ದ ಹಳೆ ವಿದ್ಯಾರ್ಥಿನಿಯರಾದ ಬಿ.ಬಿ. ಹರಿಣಿ, ಎಂ.ಪಿ. ಸ್ವಾತಿ, ಶಕುಂತಲಾ, ಪಿ.ಎ. ಕೌಶಿಯ, ದೀಪ್ತಿ, ಚೈತ್ರ, ಸುಷ್ಮಾ, ಕೀರ್ತಿ, ಸ್ನೇಹ ಅವರುಗಳು ತಾವು ವ್ಯಾಸಂಗ ಮಾಡಿದ್ದ ವಿದ್ಯಾಸಂಸ್ಥೆಗೆ ಹೊಸ ವರ್ಷದ ಪ್ರಯುಕ್ತ ಶಿಕ್ಷಣ ಸಂಸ್ಥೆಗೆ ಧ್ವನಿ ವರ್ಧಕ ಸಾಮಾಗ್ರಿಗಳನ್ನು ಕೊಡುಗೆಯಾಗಿ ನೀಡಿದರು. ಹಳೆ ವಿದ್ಯಾರ್ಥಿನಿಯರು ಕಾಲೇಜಿನ ಪ್ರಾಂಶುಪಾಲ ಟಿ.ಪಿ. ಶಿವಪ್ರಕಾಶ್ ಅವರಿಗೆ ಪರಿಕರಗಳನ್ನು ಹಸ್ತಾಂತರಿಸಿದರು.
ಈ ಸಂದರ್ಭ ಮಾತನಾಡಿದ ಪ್ರಾಂಶುಪಾಲ ಶಿವಪ್ರಕಾಶ್, ಪ್ರತಿ ವಿದ್ಯಾರ್ಥಿಯೂ ತಮ್ಮ ವ್ಯಾಸಂಗ ಮುಗಿದ ಮೇಲೆಯೂ ತಾವು ವಿದ್ಯಾಭ್ಯಾಸÀ ಮಾಡಿದ ಶಾಲಾ-ಕಾಲೇಜು, ಶಿಕ್ಷಕರ ಬಗ್ಗೆ ಸ್ಮರಣೀಯ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.