ಗೋಣಿಕೊಪ್ಪ ವರದಿ, ಜ. ೫: ತರಬೇತಿ ನೀಡುವವರನ್ನು ಗುರು ಎಂದು ಭಾವಿಸಬೇಕು ಎಂದು ಭಾರತ ಹಾಕಿ ತಂಡದ ಮಾಜಿ ನಾಯಕ, ಪದ್ಮಶ್ರೀ ಪುರಸ್ಕೃತ ಡಾ. ಮೊಳ್ಳೇರ ಪಿ. ಗಣೇಶ್ ಸಲಹೆ ನೀಡಿದರು.
ಪೊನ್ನಂಪೇಟೆ ಕ್ರೀಡಾ ವಸತಿ ನಿಲಯಕ್ಕೆ ಭೇಟಿ ನೀಡಿ, ನಂತರ ಟರ್ಫ್ ಮೈದಾನದಲ್ಲಿ ವಿದ್ಯಾರ್ಥಿ ಮತ್ತು ತರಬೇತುದಾರರಿಗೆ ಸೂಕ್ತ ಸಲಹೆ ನೀಡಿದರು.
ತರಬೇತು ನೀಡುವವರನ್ನು ಗುರು ಎಂದು ಸ್ವೀಕರಿಸುವ ಮನೋಭಾವ ಬೆಳೆಸಿಕೊಂಡಷ್ಟು ಕಲಿಯಲು ಅವಕಾಶವಿದೆ. ನಿತ್ಯ ಸರಿ ತಪ್ಪುಗಳ ಪರಾಮರ್ಶೆ ನಡೆಯಬೇಕು. ಡೈರಿಯಲ್ಲಿ ಬರೆಯುವ ಅಭ್ಯಾಸದಿಂದ ತಪ್ಪು ತಿದ್ದಿಕೊಳ್ಳಲು ಸಾಧ್ಯವಿದೆ. ಈ ಬಗ್ಗೆ ಹೆಚ್ಚು ಒತ್ತು ನೀಡಬೇಕು ಎಂದರು.
ತರಬೇತುದಾರರು ಭಿನ್ನಬೇಧ ಮರೆತು ಕಲಿಸಬೇಕು. ಮಕ್ಕಳ ಜೊತೆಯಲ್ಲಿ ಊಟ ಮಾಡುವುದರಿಂದ ಪೌಷ್ಟಿಕ ಆಹಾರದ ಕೊರತೆ ಅರಿವಾಗುತ್ತದೆ. ವಸತಿ ನಿಲಯ ಮೇಲ್ವಿಚಾರಕರು ಕೂಡ ಈ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿಕೊಂಡರು. ಹಿರಿಯ ಹಾಕಿ ಆಟಗಾರ ಚೆಪ್ಪುಡೀರ ಕಾರ್ಯಪ್ಪ, ತರಬೇತುದಾರ ಕುಪ್ಪಂಡ ಸುಬ್ಬಯ್ಯ, ಗಣಪತಿ, ವಾರ್ಡನ್ ಪ್ರೀತಾ, ದಿನೇಶ್ ಇದ್ದರು.