ಸುಂಟಿಕೊಪ್ಪ, ಜ. ೫: ಪ್ರಧಾನಮಂತ್ರಿಗಳ ಆಶಯದಂತೆ ದೇಶದಲ್ಲಿ ೧೪ ವರ್ಷ ಮೇಲ್ಪಟ್ಟ ೧೮ ವರ್ಷ ಒಳಪಟ್ಟ ಸುಮಾರು ೧೦ ಕೋಟಿ ಮಕ್ಕಳಿಗೆ ಜನವರಿ ೩ ರಿಂದ ಲಸಿಕೆಯನ್ನು ನೀಡುವ ಶಿಬಿರವನ್ನು ಆಯೋಜಿಸಲಾಗಿದ್ದು ಪ್ರತಿಯೊಬ್ಬ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕರೆ ನೀಡಿದರು. ಶ್ರೀಮತಿ ಡಿ. ಚೆನ್ನಮ್ಮ ಜೂನಿಯರ್ ಕಾಲೇಜಿನಲ್ಲಿ ಲಸಿಕಾ ಶಿಬಿರವನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಿ ಮಾತನಾಡಿದ ಅವರು, ಕೋವಿಡ್ ನಿರೋಧಕ ಲಸಿಕೆಯು ಉಚಿತವಾಗಿ ನೀಡಲಾಗುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಲಸಿಕೆಯನ್ನು ಪಡೆದುಕೊಳ್ಳಬೇಕು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಕೋವಿಡ್ ಮಾರ್ಗ ಸೂಚಿಗಳನ್ನು ಪಾಲಿಸುವದರೊಂದಿಗೆ ಮುನ್ನಚ್ಚರಿಕೆಯ ಕ್ರಮಕೈಗೊಂಡಾಗ ರೋಗ ಬರದಂತೆ ತಡೆಯಲು ಸಾಧ್ಯವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ವೈದ್ಯಾಧಿಕಾರಿ ಶ್ರೀನಿವಾಸ್, ಮಾದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ನಿಶಾ, ಪ್ರಾಂಶುಪಾಲ ಮಂದಪ್ಪ, ಉಪನ್ಯಾಸಕರು, ಶಾಲಾ ಸಹಶಿಕ್ಷಕರು, ಸಿಬ್ಬಂದಿ ವರ್ಗದವರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.