ಸೋಮವಾರಪೇಟೆ, ಜ. ೫: ಇಲ್ಲಿನ ಡಾ.ಶಿವಕುಮಾರ ಸ್ವಾಮೀಜಿ ಜಯಂತ್ಯೋತ್ಸವ ಸಮಿತಿ ಆಶ್ರಯದಲ್ಲಿ ಶಾಸಕರ ಸಹಕಾರದೊಂದಿಗೆ ನಿರ್ಮಿಸಲಾಗುತ್ತಿರುವ ಸಿದ್ದಗಂಗಾಶ್ರೀ ಬಸ್ ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದೆ.
ಪಟ್ಟಣದ ಆನೆಕೆರೆ ಸಮೀಪ ಇರುವ ಪಟ್ಟಣ ಪಂಚಾಯಿತಿಗೆ ಸೇರಿದ ಜಾಗದಲ್ಲಿ ರೂ. ೫ ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಬಸ್ ನಿಲ್ದಾಣ ಕಾಮಗಾರಿ ನಡೆಯುತ್ತಿದ್ದು, ಶೇ.೮೦ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ.
ಶನಿವಾರಸಂತೆ, ಕೊಡ್ಲಿಪೇಟೆ, ಹಾಸನ, ಸಕಲೇಶಪುರ ಭಾಗಕ್ಕೆ ತೆರಳುವ ಪ್ರಯಾಣಿಕರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಇದೇ ಸ್ಥಳದಲ್ಲಿ ಬಸ್‌ಗಳಿಗೆ ಕಾಯುತ್ತಿದ್ದು, ಬಸ್ ನಿಲ್ದಾಣದ ಕೊರತೆಯಿಂದ ಅಂಗಡಿ, ರಸ್ತೆ ಬದಿಗಳಲ್ಲಿ ನಿಲ್ಲಬೇಕಾಗಿತ್ತು. ಇದೀಗ ಸುಸಜ್ಜಿತ ನಿಲ್ದಾಣ ನಿರ್ಮಾಣ ಗೊಳ್ಳುತ್ತಿದೆ.
ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಬಸ್ ನಿಲ್ದಾಣ ಕಾಮಗಾರಿಗೆ ಅನುದಾನ ಒದಗಿಸಿದ್ದು, ಕೆಲವೇ ದಿನಗಳಲ್ಲಿ ಪ್ರಯಾಣಿಕರ ಬಳಕೆಗೆ ಮುಕ್ತವಾಗಲಿದೆ ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.